

ಬೆಂಗಳೂರು: ಪತ್ನಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಆ್ಯಸಿಡ್ ಎರಚಿ ಪರಾರಿಯಾಗಿದ್ದ ಪತಿಯನ್ನು ಜೆ.ಪಿ. ನಗರ ಪೊಲೀಸರು ಬಂಧಿಸಿದ್ದಾರೆ.
ಮಧುಮಿತ ಹಲ್ಲೆಗೊಳಗಾದ ಮಹಿಳೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಈಕೆಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ತಮಿಳುನಾಡಿನ ಮಧುರೈ ಮೂಲದ ವೆಂಕಟೇಶ್ ಎಂಬುವನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಕೋಲ್ಕತ್ತಾ ಮೂಲದ 26 ವರ್ಷದ ಮಧುಮಿತ ವೃತ್ತಿಯಲ್ಲಿ ನರ್ಸ್ ಆಗಿದ್ದು, ಕಳೆದ ಒಂದೂವರೆ ವರ್ಷದಿಂದ ನಾರಾಯಣ ಕ್ಲಿನಿಕ್ವೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ನರ್ಸ್ ಮಧುಮಿತ 2024ರಲ್ಲಿ ಈ ವೆಂಕಟೇಶ್ ಜೊತೆ ಮಧುರೈನಲ್ಲಿ ಮದುವೆಯಾಗಿದ್ದರು. ಇಬ್ಬರು ಬೆಂಗಳೂರಿನಲ್ಲಿ ವಾಸವಾಗಿದ್ದರು. ಆರಂಭದಲ್ಲಿ ಚೆನ್ನಾಗಿದ್ದ ದಂಪತಿ 6 ತಿಂಗಳ ಬಳಿಕ ಕೌಟುಂಬಿಕ ಕಲಹದಿಂದ ದೂರುವಾಗಿದ್ದರು.
ಒಂದೂವರೆ ವರ್ಷದಿಂದ ಮಧುಮಿತ ಪಿಜಿಯಲ್ಲಿ ಇದ್ದುಕೊಂಡು ಕೆಲಸಕ್ಕೆ ಹೋಗುತ್ತಿದ್ದರು. ಪತ್ನಿಯಿಂದ ದೂರವಾಗಿದ್ದ ಪತಿ ವೆಂಕಟೇಶ್ ಇತ್ತೀಚೆಗಷ್ಟೇ ಚೆನ್ನೈಗೆ ಶಿಫ್ಟ್ ಆಗಿದ್ದರು. ಗುರುವಾರ ಬೆಳಗ್ಗೆ ಮಧುರೈನಿಂದ ಪತ್ನಿ ಕೆಲಸ ಮಾಡುತ್ತಿದ್ದ ಆಸ್ಪತ್ರೆ ಬಳಿ ಬಂದ ವೆಂಕಟೇಶ್, ಆಕೆ ಹೊರ ಬರುವುದನ್ನೇ ಕಾಯುತ್ತಿದ್ದ. ಮೊದಲ ಪಾಳಿ ಇದ್ದಿದ್ದರಿಂದ ಬೆಳಗ್ಗೆ ತಿಂಡಿ ತಿನ್ನಲು ಆಸ್ಪತ್ರೆಯಿಂದ ಮಧುಮಿತ ಹೊರಗೆ ಬರುತ್ತಿದ್ದಂತೆ ಹೆಲ್ಮೆಟ್ ಧರಿಸಿಕೊಂಡಿದ್ದ ಆರೋಪಿಯು ಮಾರಕಾಸ್ತ್ರಗಳಿಂದ ಮೊದಲು ಹಲ್ಲೆ ಮಾಡಿದ್ದಾನೆ. ಬಳಿಕ ಆ್ಯಸಿಡ್ ಸುರಿದು ವಿಕೃತಿ ಮೆರೆದಿದ್ದಾನೆ. ಈ ವೇಳೆ ಮಹಿಳೆಯ ರಕ್ಷಣೆಗೆ ಧಾವಿಸಿದ ಸ್ಥಳೀಯರ ಮೇಲೆಯೂ ಆರೋಪಿ ಹಲ್ಲೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

