

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕಥೊಲಿಕ್ ಸಭಾ, ಬೊಂದೆಲ್ ಘಟಕದ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ದಿವಂಗತ ಬಿಷಪ್ ಬೇಸಿಲ್ ಡಿಸೋಜ ಅವರ 30ನೇ ಸಂಸ್ಮರಣಾ ಕಾರ್ಯಕ್ರಮವನ್ನು ಭಾನುವಾರ, 6 ಸೆಪ್ಟೆಂಬರ್ 2026 ರಂದು ಸಂಜೆ 4.00 ಗಂಟೆಗೆ ಬೊಂದೆಲ್ ಚರ್ಚ್ ಸಭಾಂಗಣದಲ್ಲಿ ಆಯೋಜಿಸಿತ್ತು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, “ಕೊಂಕಣಿಗರಾದ ನಾವು ನಮ್ಮ ಮಕ್ಕಳು ಹಾಗೂ ದೇವರಲ್ಲಿ ಕೊಂಕಣಿ ಭಾಷೆಯಲ್ಲಿ ಮಾತನಾಡಿದರೆ ಮಾತ್ರ, ನಮ್ಮ ಮಾತೃಭಾಷೆ ಇನ್ನೂ ಸಾವಿರಾರು ವರ್ಷಗಳವರೆಗೆ ಉಳಿಯಬಹುದು” ಎಂದು ಹೇಳಿ, ಶಿಕ್ಷಕರ ದಿನದ ಶುಭಾಷಯಗಳೊಂದಿಗೆ ಸ್ವಾಗತಿಸಿದರು.
ಮುಖ್ಯ ಅತಿಥಿಗಳಾದ ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾದ ಅ. ವಂ. ಡಾ. ಎಲೋಶಿಯಸ್ ಪಾವ್ಲ್ ಡಿಸೋಜ ಅವರು ಮಾತನಾಡಿ “ಜೀವನದಲ್ಲಿ ʼಮಾಹಿತಿʼ, ʼರಚನೆʼ ಮತ್ತು ʼಪರಿವರ್ತನೆʼ ಈ ಮೂರು ಪ್ರಮುಖ ವಿಚಾರಗಳಾಗಿವೆ. ಶಿಕ್ಷಕರು ತಮ್ಮ ಕಾರ್ಯವನ್ನು ಪ್ರೀತಿ ಮತ್ತು ನಿಸ್ವಾರ್ಥ ಸೇವೆಯಿಂದ ನಿರ್ವಹಿಸಬೇಕು. ಇದು ದೇವರನ್ನು ಗೌರವಿಸುವ ವಿಧಾನಗಳಲ್ಲಿ ಒಂದಾಗಿದೆ” ಎಂದು ಹೇಳಿದರು. ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶ್ರೀ ರೋಷನ್ ಅಲೆಕ್ಸಾಂಡರ್ ಪಿಂಟೊ ಅವರನ್ನು ಗಣ್ಯರು ಸನ್ಮಾನಿಸಿದರು. ಸಂಪನ್ಮೂಲ ವ್ಯಕ್ತಿ ಶ್ರೀಮತಿ ಜೆಸ್ಸಿ ಕುಟಿನ್ಹಾ ಅವರು “ಬೋಧನೆ ಒಂದು ಧ್ಯೇಯ, ಕೇವಲ ಉದ್ಯೋಗವಲ್ಲ. ಶಿಕ್ಷಕರು ಮಗುವಿನ ಜೀವನದಲ್ಲಿ ತಾಯಿ, ಸ್ನೇಹಿತ ಮತ್ತು ಮಾರ್ಗದರ್ಶಕರಾಗಿ ಅನೇಕ ಪಾತ್ರಗಳನ್ನು ನಿರ್ವಹಿಸುತ್ತಾರೆ ಮತ್ತು ಶಿಕ್ಷಕರು ನಿಜವಾಗಿಯೂ ಆಶೀರ್ವದಿಸಲ್ಪಟ್ಟವರು” ಎಂದು ಹೇಳಿದರು. ದಿವಂಗತ ಬಿಷಪ್ ಬೇಸಿಲ್ ಡಿಸೋಜ ಅವರ 30ನೇ ಪುಣ್ಯತಿಥಿಯ ನೆನಪಿಗಾಗಿ ಅವರ ಭಾವಚಿತ್ರಕ್ಕೆ ಗಣ್ಯರು ಹೂವುಗಳನ್ನು ಅರ್ಪಿಸಿ ಗೌರವ ಸಲ್ಲಿಸಿದರು. ಪ್ರೊ. ಸ್ಟೀವನ್ ಕ್ವಾಡ್ರಸ್ ಅವರು ನಿವೃತ್ತ ಧರ್ಮಾಧ್ಯಕ್ಷರಾದ ಅ. ವಂ. ಡಾ. ಎಲೋಶಿಯಸ್ ಪಾವ್ಲ್ ಡಿಸೋಜ ಮತ್ತು ವಂ. ಸ್ವಾ. ಬೇಸಿಲ್ ವಾಸ್ ಅವರೊಂದಿಗೆ ದಿವಂಗತ ಬಿಷಪ್ ಬೇಸಿಲ್ ಡಿಸೋಜ ಅವರ ಬಗ್ಗೆ ಸಂವಾದ ನಡೆಸಿದರು. ಸಂತ ಲಾರೆನ್ಸರ ದೇವಾಲಯ, ಬೊಂದೆಲ್ ಇದರ ಧರ್ಮಗುರು ವಂ.ಸ್ವಾ. ಬೇಸಿಲ್ ವಾಸ್ ಹಾಗೂ ಕಥೊಲಿಕ್ ಸಭಾ, ಬೊಂದೆಲ್ ಘಟಕದ ಅಧ್ಯಕ್ಷರಾದ ಶ್ರೀ ಸುಜಯ್ ಡಿಸಿಲ್ವರವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು. ಶ್ರೀ ವಿಲ್ಫ್ರೆಡ್ ಆಲ್ವಾರಿಸ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.


