

ಮಂಗಳೂರು; ಸೈಂಟ್ ಆನ್ಸ್ ಪ್ರೌಢಶಾಲೆಯ ಸಭಾಭವನದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮ, ಸಡಗರ ಹಾಗೂ ದೇಶಭಕ್ತಿಯ ಭಾವನೆಯನ್ನು ಬಿಂಬಿಸುವಂತೆ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಶುಭ ಸಂದರ್ಭದಲ್ಲಿ ಸಂತ ಅನ್ನರ ಕಾನ್ವೆಂಟ್ನ ಭಗಿನಿಯರು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಗಿನಿ ರೀತಿಕಾ ಎ. ಸಿ .ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮವು ಭಗವಂತನ ಸ್ಮರಣೆಯೊಂದಿಗೆ ಪ್ರಾರ್ಥನಾ ವಿಧಿಯಿಂದ ಆರಂಭಗೊಂಡಿತು. ಬಳಿಕ ವಿದ್ಯಾರ್ಥಿಗಳಿಂದ ಮನಮೋಹಕ ಸ್ವಾಗತ ನೃತ್ಯ ಪ್ರಸ್ತುತಪಡಿಸಲಾಯಿತು. ದೇಶದ ಸ್ವಾತಂತ್ರ್ಯ ಹೋರಾಟ, ತ್ಯಾಗ ಹಾಗೂ ದೇಶಪ್ರೇಮವನ್ನು ಪ್ರತಿಬಿಂಬಿಸುವ ದೇಶಭಕ್ತಿ ನಾಟಕವು ನೆರೆದವರ ಮನಸೂರೆಗೊಂಡಿತು. ಇದಲ್ಲದೆ, ದೇಶಭಕ್ತಿಯ ಕಿಚ್ಚನ್ನು ಹೊತ್ತಿಸುವ ದೇಶಭಕ್ತಿ ಗೀತೆಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಮನೋಜ್ಞವಾಗಿ ಮೂಡಿಬಂದವು.
ಇಡೀ ಕಾರ್ಯಕ್ರಮವನ್ನು 10ನೇ ತರಗತಿಯ ‘ಎ’ ವಿಭಾಗದ ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿ ಹಾಗೂ ಅಚ್ಚುಕಟ್ಟಾಗಿ ನಿರ್ವಹಿಸಿದರು. ವಿದ್ಯಾರ್ಥಿಗಳ ಉತ್ಸಾಹ, ಪ್ರತಿಭೆ ಮತ್ತು ದೇಶಪ್ರೇಮ ಕಾರ್ಯಕ್ರಮದ ಪ್ರತಿಯೊಂದು ಹಂತದಲ್ಲೂ ಎದ್ದು ಕಾಣುತ್ತಿತ್ತು.
ಮುಖ್ಯ ಅತಿಥಿಗಳಾದ ಭಗಿನಿ ರೀತಿಕಾ ಎ. ಸಿ. ಅವರು ತಮ್ಮ ಸಂದೇಶದಲ್ಲಿ, “ಇಂದಿನ ವಿದ್ಯಾರ್ಥಿಗಳೇ ನಾಳಿನ ದೇಶದ ಭವಿಷ್ಯ. ನಾವು ಪಡೆದಿರುವ ಸ್ವಾತಂತ್ರ್ಯವನ್ನು ಕೇವಲ ಅನುಭವಿಸುವುದಷ್ಟೇ ಅಲ್ಲದೆ, ಅದನ್ನು ರಕ್ಷಿಸಿ, ಉಳಿಸಿ, ಬೆಳೆಸುವ ಹೊಣೆಗಾರಿಕೆಯೂ ನಮ್ಮ ಮೇಲಿದೆ. ಜೀವನದಲ್ಲಿ ಸದಾ ಸತ್ಯವನ್ನು ಮಾತನಾಡಬೇಕು, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳಬೇಕು. ದೃಢನಿರ್ಧಾರ, ನಿಷ್ಠೆ ಹಾಗೂ ಕರ್ತವ್ಯಪ್ರಜ್ಞೆಯಿಂದ ಮುನ್ನಡೆಯಬೇಕು” ಎಂದು ವಿದ್ಯಾರ್ಥಿಗಳಿಗೆ ಅಮೂಲ್ಯವಾದ ಮಾರ್ಗದರ್ಶನ ನೀಡಿದರು.
ಸ್ವಾತಂತ್ರ್ಯಕ್ಕಾಗಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ ಮಹನೀಯರನ್ನು ಸ್ಮರಿಸುತ್ತಾ, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಿದ ಈ ಕಾರ್ಯಕ್ರಮವು ದೇಶಪ್ರೇಮ, ಶಿಸ್ತು, ಸತ್ಯನಿಷ್ಠೆ ಹಾಗೂ ಕರ್ತವ್ಯಬದ್ಧತೆಯ ಮಹತ್ವವನ್ನು ಸಾರುವ ಮೂಲಕ ಅತ್ಯಂತ ಅರ್ಥಪೂರ್ಣವಾಗಿ ನೆರವೇರಿತು.
ಮುಖ್ಯ ಶಿಕ್ಷಕಿಯಾದ ಭಗಿನಿ ಅನೆಟ್ ಎ.ಸಿ.ಅವರ ಸಮರ್ಥ ಮಾರ್ಗದರ್ಶನ ಹಾಗೂ ಪ್ರೋತ್ಸಾಹದೊಂದಿಗೆ ಕಾರ್ಯಕ್ರಮವು ಅತ್ಯಂತ ಅಚ್ಚುಕಟ್ಟಾಗಿ ಹಾಗೂ ಸಾಂಗವಾಗಿ ನೆರವೇರಿತು.














