

ಉಡುಪಿ: ಕಲ್ಮಾಡಿಯಲ್ಲಿರುವ ಸ್ಟೆಲ್ಲಾ ಮಾರಿಸ್ ದೇವಾಲಯದ ವೆಲಂಕಣಿ ಆರೋಗ್ಯ ಮಾತೆಯ ಪುಣ್ಯಕ್ಷೇತ್ರ ಪ್ರತಿಷ್ಠಾಪನೆಯ ವಾರ್ಷಿಕ ಮಹೋತ್ಸವದ ಪ್ರಯುಕ್ತ ವೆಲಂಕಣಿ ಮಾತೆಯ ಪ್ರತಿಮೆಯ ಮೆರವಣಿಗೆಯು ಗುರುವಾರ ಆದಿಉಡುಪಿಯಿಂದ ಕಲ್ಮಾಡಿ ಚರ್ಚಿನವರೆಗೆ ಅದ್ದೂರಿಯಿಂದ ನಡೆಯಿತು.
ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಗುರುಗಳಾದ ವಂ|ಫ್ರಾಂಕ್ಲಿನ್ ಡಿಸೋಜಾ ವೆಲಂಕಣಿ ಮಾತೆಯ ಮೂರ್ತಿಯನ್ನು ಆಶೀರ್ವದಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ವಾರ್ಷಿಕ ಹಬ್ಬಗಳ ಸಂದರ್ಭದಲ್ಲಿ ಚರ್ಚುಗಳ ಪಾಲಕರ ಮಂಜೂಶಾ (ಮೂರ್ತಿ)ಗಳನ್ನು ಸಾರ್ವಜನಿಕವಾಗಿ ಮೆರವಣಿಗೆಯಲ್ಲಿ ಕೊಂಡೊಯ್ದು ಗೌರವ ಸೂಚಿಸುವುದು ಕ್ರೈಸ್ತ ಸಂಪ್ರದಾಯದ ಒಂದು ಭಾಗವಾಗಿದೆ. ವೆಲಂಕಣಿ ಮಾತೆ ಪವಾಡದ ಮಾತೆ ಎಂದು ಜನಜನಿತವಾಗಿದ್ದು ಆಕೆಯ ಮೂಲಕ ಯೇಸುಕ್ರಿಸ್ತರ ಕ್ರಪಾವರಗಳು ಪ್ರತಿಯೊಬ್ಬರ ಮೇಲೆ ಹರಿದು ಬರಲಿ ಎಂದು ವಂ|ಫ್ರಾಂಕ್ಲಿನ್ ಡಿಸೋಜಾ ಆಶೀರ್ವಚನ ನೀಡಿದರು
ಮೆರವಣಿಗೆಯು ಆದಿ ಉಡುಪಿ ಮಾರ್ಗವಾಗಿ ಆರಂಭಗೊಂಡು ಚರ್ಚಿನ ತನಕ ಕಾಲ್ನಡಿಗೆಯ ಮೂಲಕ ನಡೆಯಿತು.
ತದ ನಂತರ ನಡೆದ ಬಲಿಪೂಜೆಯನ್ನು ವಂ|ಫ್ರಾಂಕ್ಲಿನ್ ಡಿಸೋಜಾ ನೆರವೇರಿಸಿ ಸಂದೇಶ ನೀಡಿದರು.
ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವವು ಆ.15ರಂದು ನಡೆಯಲಿದ್ದು, ಬೆಳಗ್ಗೆ 10.30 ಗಂಟೆಗೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂ.ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಹಬ್ಬದ ಬಲಿಪೂಜೆ ನೆರೆವೇರಿಸಲಿರು ವರು.
ಪುಣ್ಯಕ್ಷೇತ್ರದ ರೆಕ್ಟರ್ ವಂದನೀಯ ಬ್ಯಾಪ್ಟಿಸ್ಟ್ ಮಿನೇಜಸ್, ಚರ್ಚಿನ ಪಾಲನಾ ಮಂಡಳಿ ಉಪಾಧ್ಯಕ್ಷರಾದ ನವೀನ್ ಫೆರ್ನಾಂಡಿಸ್, ಕಾರ್ಯದರ್ಶಿ ಪ್ರೆಸಿಲ್ಲಾ ಆಳ್ವಾ, ಆಯೋಗಗಳ ಸಂಯೋಜಕರಾದ ಡೆನಿಸ್ ಲಸ್ರಾದೊ ಹಾಗೂ ಚರ್ಚಿನ ಮಹೋತ್ಸವ ಆಚರಣಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.















