

ಕುಂದಾಪುರ: ಪದವಿ ಯೊಂದಿಗೆ ಕೌಶಲ್ಯ ಅಭಿವೃದ್ಧಿ ಇಂದಿನ ಶಿಕ್ಷಣದ ಅಗತ್ಯ. ಪದವಿ ಪಾಠಗಳ ಜೊತೆಗೆ ಹಲವು ವಿಷಯಗಳ ಕುರಿತು ಡಿಪ್ಲೊಮಾ ಮಾಡಬಹುದಾಗಿದೆ. ಈ ಸರ್ಟಿಫಿಕೇಟ್ ಜೀವನದಲ್ಲಿ ಪದವಿ ನಂತರ ಮುನ್ನಡೆಯಲು ಸಹಕಾರಿ. ವಿದ್ಯಾರ್ಥಿಗಳಿಗೆ ಉತ್ತಮ ಸಂಪನ್ಮೂಲ ತಜ್ಞರು ತರಬೇತಿ ನೀಡಲಿದ್ದು ಈ ಪ್ರಯೋಗ ಬಹಳಷ್ಟು ಕಾಲೇಜುಗಳಲ್ಲಿ ಯಶಸ್ವಿಯಾಗಿದೆ ಎಂದು ಮಣಿಪಾಲದ
ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನ ಛೇರ್ಮನ್ ಬ್ರಿಗೇಡಿಯರ್ ಡಾ.ಸುರ್ಜಿತ್ ಸಿಂಗ್ ಪಾಬ್ಲಾ ಹೇಳಿದರು.
ಅವರು ಭಂಡಾರ್ಕಾರ್ಸ್ ಕಾಲೇಜು ಏರ್ಪಡಿಸಿದ “ಪದವಿಯೊಂದಿಗೆ ಕೌಶಲ್ಯಾಭಿವೃದ್ಧಿ ಡಿಪ್ಲೊಮಾ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾಹಿತಿ ನೀಡಿದರು.
ಭಾರತೀಯ ಸೇನೆಯ ಚೀಫ್ ಎಂಜಿನಿಯರ್ ಸೇವೆಯಿಂದ ನಿವೃತ್ತರಾದ ನಂತರ ಮಣಿಪಾಲ ಶಿಕ್ಷಣ ಸಂಸ್ಥೆಗಳ ಜೊತೆಗಿನ ಎರಡು ದಶಕಗಳ ಸೇವೆಯ ಅನುಭವವನ್ನು ವಿವರಿಸಿದ ಅವರು “ಜೈಪುರದ ಭಾರತೀಯ ಸ್ಕಿಲ್ ಡೆವಲಪ್ಮೆಂಟ್ ಯುನಿವರ್ಸಿಟಿ ಸಹಿತ ಹಲವು ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಯಲ್ಲಿ
ವಿದ್ಯಾರ್ಥಿಗಳ ಹಿತಾಸಕ್ತಿಗಾಗಿ ಕೈಗೊಂಡ ಪ್ರಯೋಗಗಳು ಯಶಸ್ವಿಯಾಗಿದೆ ಎಂದು ಹೇಳಿದರು.
ಪದವಿ ಕಾಲೇಜುಗಳಲ್ಲಿ ಶಿಕ್ಷಕರು ಮೊದಲು ಪ್ರೇರಣೆ ಪಡೆಯಬೇಕು. ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಉತ್ತೇಜಿಸಬೇಕು.ಇನ್ನಷ್ಟು ಸ್ಪೂರ್ತಿಯನ್ನು ಸಂಪನ್ಮೂಲ ವ್ಯಕ್ತಿಗಳು ನೀಡುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಕಾರ್ಯದರ್ಶಿ ಡಾ.ನಾರಾಯಣ ಸಭಾಹಿತ್ ಮಾತನಾಡಿ ಡಾ.ಸುರ್ಜಿತ್ ಸಿಂಗ್ ಪಾಬ್ಲಾ ಅವರು ಓರ್ವ ಉತ್ತಮ ಮಾರ್ಗದರ್ಶಕರಾಗಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಯಲ್ಲಿ ಯಶಸ್ಸು ಸಾಧಿಸಿದ್ದಾರೆ. ಕಾಲೇಜು ಶಿಕ್ಷಣದ ಅಭಿವೃದ್ಧಿಗೆ ರೂಪಿಸುವ ಯೋಜನೆಗಳಲ್ಲಿ ಇವರು ಪ್ರಮುಖ ಪಾತ್ರ ವಹಿಸುತ್ತಾರೆ.ವಿದ್ಯಾರ್ಥಿಗಳಿಗೆ ಪ್ರತಿ ಸೆಮಿಸ್ಟರ್ ಗೆ ಸರ್ಟಿಫಿಕೇಟ್ ಅಲ್ಲದೇ ಪದವಿ ಮುಗಿಯುವಾಗ ಡಿಪ್ಲೊಮಾ ದೊರಕಲಿದೆ. ಶಿಕ್ಷಕರು ಸಹ ಪಿ.ಹೆಚ್.ಡಿಗೆ ಪ್ರಯತ್ನಿಸಿ ಅಪ್ಗ್ರೇಡ್ ಆಗಬೇಕು ಎಂದು ಹೇಳಿದರು.
ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಆಡಳಿತಾಧಿಕಾರಿಕಾರಿಗಳಾದ ಡಾ.ಶ್ರೀಧರ ರಂಗನಾಥ ಪೈ ಮಾತನಾಡಿ ಅಕಾಡೆಮಿ ಕಾಲೇಜುಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಹಲವು ಅನುಕೂಲತೆಗಳಿವೆ. ಶಿಕ್ಷಕರು ಪಿಹೆಚ್ ಡಿ ಮಾಡಲು ಮಾಹೆ ಮುಕ್ತ ಅವಕಾಶ ನೀಡುತ್ತದೆ. ಶಿಕ್ಷಕರು ನೋಂದಣಿ ಮಾಡಿಕೊಂಡು ಸದಾವಕಾಶ ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷರಾದ ಕೆ.ಶಾಂತಾರಾಮ ಪ್ರಭು ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ ಟಿ.ಸೋನ್ಸ್ ಮತ್ತು ವಿಶ್ವಸ್ಥ ಮಂಡಳಿಯ ಸದಸ್ಯರಾದ ರಾಜೇಂದ್ರ ತೋಳಾರ್ . ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಯು.ಎಸ್ ಶೆಣೈ ಉಪಸ್ಥಿತರಿದ್ದರು . ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಸರೋಜ ಎಮ್ ವಂದಿಸಿದರು. ಉಪನ್ಯಾಸಕಿ ಶೈಲಾ ಆರ್ ಕಾರ್ಯಕ್ರಮ ನಿರೂಪಿಸಿದರು.


