ಎಸ್ಡಿಸಿ ಕಾಲೇಜಿನ ನವರಸ ಸ್ವಾಗತ ಸಮಾರಂಭ ; ಸುಹಾ ನಝೀನ್ಗೆ ಪದವಿ, ಎಂಬಿಎ, ಪಿಎಚ್ಡಿ ವರೆಗೆ ಉಚಿತ ಶಿಕ್ಷಣದ ಭರವಸೆ



ಶ್ರೀನಿವಾಸಪುರ : ವಿದ್ಯಾರ್ಥಿಗಳು ಜೀವನದಲ್ಲಿ ಸ್ಪಷ್ಟ ಗುರಿ ಹೊಂದಿ, ಆ ಗುರಿ ಸಾಧಿಸುವ ನಿಟ್ಟಿನಲ್ಲಿ ಗುರುಗಳ ಮಾರ್ಗದರ್ಶನ ಪಡೆದು ನಿರಂತರ ಪರಿಶ್ರಮಿಸಿದರೆ ಯಶಸ್ಸು ಖಚಿತ ಎಂದು ಎಸ್ಡಿಸಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಕಾರ್ಯದರ್ಶಿ ಉಷಾ ಗಂಗಾಧರ್ ಹೇಳಿದರು.
ಪಟ್ಟಣದ ಹೊರವಲಯದ ಮುಳಬಾಗಿಲು ಮುಖ್ಯ ರಸ್ತೆಯ ಕೇತಗಾನಹಳ್ಳಿ ಗ್ರಾಮದ ಸಮೀಪದ ಎಸ್ಡಿಸಿ ಕಾಲೇಜು ಆವರಣದಲ್ಲಿ ಮಹದೇವ ಶಿಕ್ಷಣ ಸಂಸ್ಥೆ, ಹೊಸಕೋಟೆ, ಎಸ್ಡಿಸಿ ಸ್ವತಂತ್ರ ಶಿಕ್ಷಣ ಸಂಸ್ಥೆ ಹಾಗೂ ಟಾಪ್ಕೋಚ್, ಬೆಂಗಳೂರು ಇವರ ಸಹಯೋಗದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ನವರಸ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ತಂತ್ರಜ್ಞಾನ ಎಷ್ಟೇ ಮುಂದುವರಿದರೂ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಗುರುಗಳ ಮಾರ್ಗದರ್ಶನ ಅತ್ಯಂತ ಅಗತ್ಯ. ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಮಿತಿಗೊಳಿಸಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ನನ್ನಿಂದ ಸಾಧ್ಯವಿಲ್ಲ ಎಂಬ ನಕಾರಾತ್ಮಕ ಮನೋಭಾವ ತೊರೆದು ನಾನು ಸಾಧಿಸಬಲ್ಲೆ ಎಂಬ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ದೊಡ್ಡ ಗುರಿ ಹೊಂದಿ ಅದನ್ನು ಸಾಧಿಸುವವರೆಗೆ ನಿರಂತರವಾಗಿ ಶ್ರಮಿಸಬೇಕು. ಶಿಕ್ಷಣದಿಂದ ಜ್ಞಾನ ಮಾತ್ರವಲ್ಲದೆ ಸಮಾಜದಲ್ಲಿ ಗೌರವ ಹಾಗೂ ಉತ್ತಮ ವ್ಯಕ್ತಿತ್ವವೂ ದೊರೆಯುತ್ತದೆ. ಮಕ್ಕಳು ಉತ್ತಮ ಶಿಕ್ಷಣ ಪಡೆದು ಜೀವನದಲ್ಲಿ ಸಾಧನೆ ಮಾಡಿದಾಗ ಪೋಷಕರಿಗೂ ಹೆಮ್ಮೆ ಹಾಗೂ ಸಮಾಜದಲ್ಲಿ ಗೌರವ ದೊರೆಯುತ್ತದೆ. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪೋಷಕರು ತಮ್ಮ ಕಷ್ಟ–ಸುಖಗಳನ್ನು ಲೆಕ್ಕಿಸದೆ ಶಿಕ್ಷಣ ನೀಡಲು ಶ್ರಮಿಸುತ್ತಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಪೋಷಕರ ಪರಿಶ್ರಮವನ್ನು ಗೌರವಿಸಿ, ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ಕಾಲೇಜು ಹಾಗೂ ಕುಟುಂಬಕ್ಕೆ ಕೀರ್ತಿ ತರಬೇಕು ಎಂದರು.
ಸುಹಾ ನಝೀನ್ಗೆ ಉಚಿತ ಉನ್ನತ ಶಿಕ್ಷಣ
ದೃಷ್ಟಿಹೀನರಾಗಿದ್ದರೂ ವಿದ್ಯಾಭ್ಯಾಸದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿ ಸುಹಾ ನಝೀನ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
2026–27ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸುಹಾ ನಝೀನ್ ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆ ಮಾಡುವ ವಿಶ್ವಾಸವಿದೆ ಎಂದು ಉಷಾ ಗಂಗಾಧರ್ ಹೇಳಿದರು. ಅವರು ಎಸ್ಡಿಸಿ ಸಂಸ್ಥೆಯಲ್ಲಿ ಉನ್ನತ ಶಿಕ್ಷಣ ಮುಂದುವರಿಸಲು ಆಸಕ್ತಿ ತೋರಿದರೆ ಪದವಿ, ಎಂಬಿಎ ಹಾಗೂ ಪಿಎಚ್ಡಿ ವರೆಗೆ ಸಂಪೂರ್ಣ ಉಚಿತ ಶಿಕ್ಷಣ ನೀಡುವುದಾಗಿ ಘೋಷಿಸಿದರು.
ಅಲ್ಲದೆ, ಅವರ ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ಪುಸ್ತಕಗಳು ಹಾಗೂ ಇತರೆ ಶೈಕ್ಷಣಿಕ ಸೌಲಭ್ಯಗಳನ್ನು ಸಂಸ್ಥೆಯ ವತಿಯಿಂದ ಒದಗಿಸಲಾಗುವುದು. ಪಿಯುಸಿ ಶಿಕ್ಷಣ ಪೂರ್ಣಗೊಂಡ ಬಳಿಕ ಕೋಲಾರದಲ್ಲಿರುವ ಎಸ್ಡಿಸಿ ಡಿಗ್ರಿ ಕಾಲೇಜಿನಲ್ಲಿ ಪದವಿ ಹಾಗೂ ನಂತರದ ಉನ್ನತ ಶಿಕ್ಷಣ ಪಡೆಯಲು ಅಗತ್ಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಇತರರಿಗೆ ಪ್ರೇರಣೆಯಾಗಲಿ
ಉಪನ್ಯಾಸಕ ರಾಮನಾಥ್ ಮಾತನಾಡಿ, ದೃಷ್ಟಿಹೀನತೆಯ ಸವಾಲಿನ ನಡುವೆಯೂ ಸುಹಾ ನಝೀನ್ ಅವರು ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದು ಶ್ಲಾಘನೀಯ. ಅವರ ಆತ್ಮವಿಶ್ವಾಸ, ಪರಿಶ್ರಮ ಹಾಗೂ ಸಾಧನೆಯ ಹಂಬಲ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ. ಮುಂದಿನ ದಿನಗಳಲ್ಲಿ ಅವರು ಉತ್ತಮ ಫಲಿತಾಂಶ ಪಡೆದು ಕಾಲೇಜು ಹಾಗೂ ಶ್ರೀನಿವಾಸಪುರ ತಾಲೂಕಿಗೆ ಕೀರ್ತಿ ತರುವ ವಿಶ್ವಾಸವಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್ಡಿಸಿ ಕಾಲೇಜಿನ ಉಪಪ್ರಾಂಶುಪಾಲ ಬಾಬಾಜಾನ್, ಕಾರ್ಯದರ್ಶಿ ರಾಮನಾಥ್, ಮಹದೇವ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ರಾಮಾಂಜಿ, ಸದಸ್ಯರಾದ ಹರೀಶ್ ಹಾಗೂ ಲಿಖಿತ್ ರಾವ್ ನಂದ, ಶ್ರೀನಿವಾಸ ಶಾಲೆಯ ಮುಖ್ಯೋಪಾಧ್ಯಾಯ ಎನ್.ಆರ್. ರಮೇಶ್, ಅಂಬರೀಶ್, ಪರಮಜ್ಯೋತಿ ಶಾಲೆಯ ಮಂಜುನಾಥ್ ಗೌಡ, ಸಮಾಜ ಸೇವಕ ಕಾರು ಬಾಬು ಸೇರಿದಂತೆ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಸಮಾರಂಭದಲ್ಲಿ ಭಾಗವಹಿಸಿದ್ದರು.

