ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ಅರ್ಥಪೂರ್ಣ ಗುರು ಪೂರ್ಣಿಮೆ ಆಚರಣೆ


ಕುಂದಾಪುರ, ಜುಲೈ 29, 2026: “ಗುರು ಪೂರ್ಣಿಮೆ ಬರುವುದು ಆಷಾಢ ಮಾಸದ ಹುಣ್ಣಿಮೆಯಂದು. ಆಯುರ್ವೇದದ ಪ್ರಕಾರ ಈ ಅವಧಿಯಲ್ಲಿ ವಾತಾವರಣದ ಬದಲಾವಣೆಯಿಂದ ಜಠರಾಗ್ನಿ (ಜೀರ್ಣಶಕ್ತಿ) ಮಂದವಾಗುತ್ತದೆ ಮತ್ತು ದೇಹದಲ್ಲಿ ವಾತ-ಪಿತ್ತ ದೋಷಗಳು ಏರುಪೇರಾಗುತ್ತವೆ. ಇದರಿಂದ ಮೈಕೈ ನೋವು, ಅಜೀರ್ಣ ಹಾಗೂ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತವೆ. ಇದನ್ನು ಶಮನಗೊಳಿಸಲು ಆಷಾಢದಲ್ಲಿ ಹಗುರವಾದ ಬಿಸಿ ಆಹಾರ, ಕಷಾಯ ಮತ್ತು ಸಾತ್ವಿಕ ಉಪವಾಸದ ಅಗತ್ಯವಿದೆ” ಎಂದು ತಜ್ಞ ಆಯುರ್ವೇದ ವೈದ್ಯರಾದ ಡಾ. ರಾಜೇಶ್ ಬಾಯರಿ ತಿಳಿಸಿದರು.
ಕುಂದಾಪುರ ಆಲೂರಿನ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ನಡೆದ ಗುರುನಮನ ಕಾರ್ಯಕ್ರಮದಲ್ಲಿ ಅವರು ಈ ಮಾತು ಹೇಳಿದರು.
ಈ ಸಂದರ್ಭದಲ್ಲಿ ಅವರು, “ಆಯುರ್ವೇದವು ಕೇವಲ ರೋಗ ನಿವಾರಿಸುವ ವೈದ್ಯಕೀಯ ಪದ್ಧತಿಯಲ್ಲ, ಅದೊಂದು ಜೀವನ ವಿಜ್ಞಾನ. ಸಾಗರ ಮಂಥನದ ಸಂದರ್ಭದಲ್ಲಿ ಅಮೃತ ಕಲಶ ಹಾಗೂ ಅಮೂಲ್ಯ ಗಿಡಮೂಲಿಕೆಗಳೊಂದಿಗೆ ಅವತರಿಸಿದ ಭಗವಾನ್ ಧನ್ವಂತರಿಯನ್ನು ಆಯುರ್ವೇದದ ಅಧಿಪತಿ ಹಾಗೂ ಚಿಕಿತ್ಸೆಯ ದೇವರೆಂದು ಪೂಜಿಸಲಾಗುತ್ತದೆ. ವೈದ್ಯರಾದ ನಮಗೆ ಧನ್ವಂತರಿ ಅಭಯ ನೀಡುವ ಪ್ರಥಮ ಗುರು. ಗುರು ಒಬ್ಯ ವ್ಯಕ್ತಿ ಮಾತ್ರವಲ್ಲ, ಅವರು ಬೋಧಿಸುವ ತತ್ವಗಳು ನಮಗೆ ದಾರಿದೀಪ. ಗುರುಪೂರ್ಣಿಮೆಯ ಈ ಶುಭ ದಿನದಂದು ಗುರುವಿನ ತತ್ವಗಳನ್ನು ನೆನೆಯುವ, ಗುರು ಪರಂಪರೆಗೆ ನಮಿಸುವ ಮೂಲಕ ಅವರಿಗೆ ನಮನ ಸಲ್ಲಿಸುತ್ತೇವೆ” ಎಂದು ಹೇಳಿದರು.
ಸಿಂಗಾಪುರ ನ್ಯಾಷನಲ್ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿರುವ ಪ್ರಕಾಶ್ ಹಂದೆ ಮುಖ್ಯ ಅತಿಥಿಯಾಗಿ ಭಾಗವಹಿಸಿ, “ಮಾನವನ ಜೀವನದಲ್ಲಿ ಗುರುವಿನ ಸ್ಥಾನ ಅತ್ಯುನ್ನತವಾದದ್ದು. ನಮಗೆ ಜನ್ಮ ನೀಡಿ, ಸಂಸ್ಕಾರ ಕಲಿಸುವ ತಂದೆತಾಯಿಗಳೇ ನಮ್ಮ ಬದುಕಿನ ಪ್ರಥಮ ಗುರುಗಳು. ಅವರ ಜೊತೆಗೆ ಅಕ್ಷರ ಹಾಗೂ ಜೀವನಜ್ಞಾನ ಧಾರೆ ಎರೆದ ಗುರುಗಳನ್ನು ಸದಾ ಸ್ಮರಿಸುವುದು ಮತ್ತು ಅವರಿಗೆ ಕೃತಜ್ಞತೆ ಸಲ್ಲಿಸುವುದು ನಮ್ಮ ಧರ್ಮ” ಎಂದು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಆಯುರ್ವೇದದ ಪಿತಾಮಹ, ಆಯುರ್ವೇದ ಸಂಹಿತೆಯ ಮಹಾಪ್ರವರ್ತಕರಾದ ಚರಕ ಮಹರ್ಷಿಗಳ ಭಾವಚಿತ್ರಕ್ಕೆ ದೀಪ ಬೆಳಗಿಸಿ, ಭಾವಪೂರ್ಣ ನಮನಗಳನ್ನು ಸಲ್ಲಿಸಲಾಯಿತು. ಈ ಶುಭ ಸಂದರ್ಭದಲ್ಲಿ ಮಹಾಬಲ ಬಾಯರಿ, ಡಾ. ಅನುಲೇಖಾ ಬಾಯರಿ, ವೀಣಾ ಹಂದೆ ಉಪಸ್ಥಿತರಿದ್ದರು. ಚಿಕಿತ್ಸಾಲಯಕ್ಕೆ ಆಗಮಿಸಿರುವವರು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

