


ಶ್ರೀನಿವಾಸಪುರ: ಮಾವಿನ ಬೆಲೆ ಭಾರೀ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಬೆಳೆಗಾರರ ರಕ್ಷಣೆಗೆ ಪ್ರತಿ ಕೆ.ಜಿ.ಗೆ ಕನಿಷ್ಠ ₹10 ಬೆಂಬಲ ಬೆಲೆ ಘೋಷಿಸಬೇಕು ಎಂದು ಆಗ್ರಹಿಸಿ ಜೂನ್ 15ರಂದು ರೋಜರನಹಳ್ಳಿ ಗೇಟ್ನಲ್ಲಿ ಮಾವು ಸಮೇತ ರಾಜ್ಯ ಹೆದ್ದಾರಿ ಬಂದ್ ನಡೆಸಲು ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ, ರಾಜ್ಯದಲ್ಲಿ ಮಾವು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಕೋಲಾರ ಜಿಲ್ಲೆಯ ಬೆಳೆಗಾರರು ಇಂದು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು. ಹವಾಮಾನ ವೈಪರೀತ್ಯ, ರೋಗಬಾಧೆ, ಮಳೆ-ಗಾಳಿ ಹಾವಳಿ ಹಾಗೂ ಕಾಡು ಪ್ರಾಣಿಗಳ ಕಾಟದ ನಡುವೆಯೂ ರೈತರು ಬೆಳೆದ ಮಾವಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ ಎಂದರು.
ಒಂದು ತಿಂಗಳ ಹಿಂದೆ ಬಾದಾಮಿ ತಳಿಯ ಮಾವು ಪ್ರತಿ ಕೆ.ಜಿ.ಗೆ ₹120 ರಿಂದ ₹150ರವರೆಗೆ ಮಾರಾಟವಾಗುತ್ತಿದ್ದರೆ, ಇದೀಗ ₹10 ರಿಂದ ₹15ಕ್ಕೆ ಕುಸಿದಿದೆ. ಇದರಿಂದ ಮಾವು ಕೀಳುವ ಕೂಲಿಯನ್ನೇ ರೈತರು ತಮ್ಮ ಜೇಬಿನಿಂದ ಪಾವತಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವೆಡೆ ತೋಟಗಳಲ್ಲೇ ಹಣ್ಣುಗಳು ಉದುರುತ್ತಿವೆ ಎಂದು ಅವರು ತಿಳಿಸಿದರು.
ತಾಲ್ಲೂಕು ಅಧ್ಯಕ್ಷ ತೆರ್ನಹಳ್ಳಿ ಅಂಜಿನಪ್ಪ ಮಾತನಾಡಿ, ಕಳೆದ ಐದು ವರ್ಷಗಳಿಂದ ಜಿಲ್ಲೆಯ ಮಾವು ಬೆಳೆಗಾರರು ನಿರಂತರ ಸಂಕಷ್ಟ ಅನುಭವಿಸುತ್ತಿದ್ದು, ಸರ್ಕಾರ ಶಾಶ್ವತ ಪರಿಹಾರ ಕಂಡುಹಿಡಿಯುವಲ್ಲಿ ವಿಫಲವಾಗಿದೆ ಎಂದು ದೂರಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಕ್ಷಣ ಮಧ್ಯಪ್ರವೇಶಿಸಿ ಪ್ರತಿ ಕೆ.ಜಿ. ಮಾವಿಗೆ ಕನಿಷ್ಠ ₹10 ಬೆಂಬಲ ಬೆಲೆ ಘೋಷಿಸಬೇಕು ಎಂದು ಒತ್ತಾಯಿಸಿದರು.
ಅಮೆರಿಕ ಸೇರಿದಂತೆ ವಿದೇಶಗಳಿಗೆ ರಫ್ತಾಗುತ್ತಿದ್ದ ಜಿಲ್ಲೆಯ ಮಾವಿಗೆ ಈಗ ಬೇಡಿಕೆ ಕುಸಿದಿದ್ದು, ರಫ್ತು ಚಟುವಟಿಕೆಗಳ ಮೇಲೂ ಪರಿಣಾಮ ಬೀರಿದೆ. ಜೊತೆಗೆ ಆಂಧ್ರಪ್ರದೇಶ ಸೇರಿದಂತೆ ಇತರೆ ರಾಜ್ಯಗಳಿಂದಲೂ ಮಾವು ಮಾರುಕಟ್ಟೆಗೆ ಬರುತ್ತಿರುವುದರಿಂದ ಸ್ಥಳೀಯ ಉತ್ಪನ್ನದ ಬೆಲೆ ಮತ್ತಷ್ಟು ಕುಸಿದಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕನಿಷ್ಠ 20 ಮಾವು ಸಂಸ್ಕರಣಾ ಘಟಕಗಳು ಹಾಗೂ ಕಾರ್ಖಾನೆಗಳನ್ನು ಸ್ಥಾಪಿಸಿ ರೈತರಿಗೆ ನೆರವಾಗಬೇಕು. ಮಾವು ಅಭಿವೃದ್ಧಿ ಮಂಡಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಬೆಳೆಗಾರರ ಹಿತ ಕಾಪಾಡಬೇಕು ಎಂದು ಮುಖಂಡರು ಆಗ್ರಹಿಸಿದರು.
ಮಾವು ಬೆಳೆಗಾರರ ರಕ್ಷಣೆಗೆ ಬೆಂಬಲ ಬೆಲೆ ಘೋಷಣೆ, ಮಾರುಕಟ್ಟೆಗಳಲ್ಲಿ ಮೂಲಭೂತ ಸೌಲಭ್ಯಗಳ ಒದಗಿಕೆ, ಕಮಿಷನ್ ಹಾವಳಿ ನಿಯಂತ್ರಣ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜೂನ್ 15ರಂದು ರೋಜರನಹಳ್ಳಿ ಗೇಟ್ನಲ್ಲಿ ಮಾವು ಸಮೇತ ಹೆದ್ದಾರಿ ಬಂದ್ ನಡೆಸುವ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಸಭೆಯಲ್ಲಿ ರಾಜ್ಯ ಮುಖಂಡ ಬಂಗವಾದಿ ನಾಗರಾಜಗೌಡ, ಜಿಲ್ಲಾಧ್ಯಕ್ಷ ವಾನರಾಶಿ ವೀರಭದ್ರಪ್ಪ, ಈಕಂಬಳ್ಳಿ ಮಂಜುನಾಥ, ರಾಜೇಂದ್ರ ರೆಡ್ಡಿ, ಅಲವಾಟಿ ಶಿವು, ಶಫಿವುಲ್ಲಾ, ತಿಮ್ಮಣ್ಣ, ರಾಜೇಶ್, ಗಿರೀಶ್, ಸಹದೇವಣ್ಣ, ಗಂಗಾಧರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

