
ಶ್ರೀನಿವಾಸಪುರ : ಮೂರು ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಪಕ್ಷದ ಗೆಲುವಿಗೆ ಸಂಬಂಧಿಸಿದಂತೆ ಪಟ್ಟಣದಲ್ಲಿ ಸೋಮವಾರ ಭಾರೀ ಸಂಭ್ರಮಾಚರಣೆ ನಡೆಯಿತು. ಪಟ್ಟಣದ ಇಂದಿರಾಭವನ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಮಿಠಾಯಿ ಹಂಚಿ ವಿಜಯೋತ್ಸವವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮಂಡಲ ಅಧ್ಯಕ್ಷ ಆರ್.ಎನ್. ಚಂದ್ರಶೇಖರ್, ಮೊದಲನೆಯದಾಗಿ ಮೂರು ರಾಜ್ಯಗಳ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮೂರು ರಾಜ್ಯಗಳು ಬಿಜೆಪಿ ಪಕ್ಷದ ತಕ್ಕೆಗೆ ಬಂದಿರುವುದು ಶುಭ ಸೂಚನೆಯಾಗಿದೆ. ಪಟ್ಟಣದಲ್ಲಿ ಎಲ್ಲಾ ಕಾರ್ಯಕರ್ತರ ಸಹಕಾರದೊಂದಿಗೆ ವಿಜೃಂಭಣೆಯಿಂದ ಸಂಭ್ರಮಾಚರಣೆ ಹಮ್ಮಿಕೊಂಡಿದ್ದೇವೆ.
ಮುಂದಿನ ದಿನಗಳಲ್ಲಿ ಮೂರು ರಾಜ್ಯಗಳಲ್ಲೂ ನಮ್ಮ ಪಕ್ಷದ ಮುಖ್ಯಮಂತ್ರಿಗಳನ್ನು ಕಾಣಲಿದ್ದೇವೆ, ಎಂದು ಹೇಳಿದರು. ಅವರು ಮುಂದುವರೆದು, ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಸಂಸ್ಕೃತಿ ಹಾಗೂ ಸನಾತನ ಧರ್ಮವನ್ನು ಕಾಪಾಡುವುದಲ್ಲದೆ, ಎಲ್ಲಾ ಸಮುದಾಯಗಳನ್ನು ಒಗ್ಗಟ್ಟಿನಲ್ಲಿ ಸಾಗಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಪುದುಚೇರಿ ಹಾಗೂ ಅಸ್ಸಾಂನಲ್ಲಿ ಮೂರನೇ ಬಾರಿ ವಿಜಯೋತ್ಸವ ಆಚರಿಸಲಾಗುತ್ತಿದೆ. ಪಶ್ಚಿಮ ಬಂಗಾಳದಲ್ಲೂ ಪಕ್ಷದ ಸಾಧನೆಗೆ ಅಲ್ಲಿನ ಮತದಾರರ ಬೆಂಬಲ ಮುಖ್ಯ ಕಾರಣವಾಗಿದೆ, ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸುಗುಟೂರು ಚಲಪತಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಶೆಟ್ಟಿಹಳ್ಳಿ ನಾಗಭೂಷಣ್, ರಾಜ್ಯ ರೈತ ಮೋರ್ಚಾ ಸದಸ್ಯ ಲಕ್ಷಣಗೌಡ, ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಈ. ಶಿವಣ್ಣ, ಎಸ್ಸಿ ಮೋರ್ಚಾ ಮುಖಂಡ ನಾರಾಯಣಸ್ವಾಮಿ, ಬಿ.ಎಲ್.ಎ.1 ನಾಗರಾಜ್ ಸೇರಿದಂತೆ ಗಟ್ಟಹಳ್ಳಿ ನಾಗೇಶ್, ಕೇಶವ, ಹೆಬ್ಬಟ್ಟ ಪ್ರಕಾಶ್, ಆವಲಕುಪ್ಪ ವೆಂಕಟರಮಣ, ವೆಂಕಟಾಚಲಪತಿ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

