ನಸೀರ್ ಅಹ್ಮದ್, ಅಬ್ದುಲ್ ಜಬ್ಬಾರ್ ವಿರುದ್ಧದ ಕ್ರಮ ಹಿಂಪಡೆಯಲು ಒತ್ತಾಯ ಕಾಂಗ್ರೆಸ್ಗೆ ತೀವ್ರ ಸಂದೇಶ


ಶ್ರೀನಿವಾಸಪುರ, ಮೇ 2: ಅಲ್ಪಸಂಖ್ಯಾತ ನಾಯಕರು ಎಂಎಲ್ಸಿ ನಸೀರ್ ಅಹ್ಮದ್ ಹಾಗೂ ಎಂಎಲ್ಸಿ ಅಬ್ದುಲ್ ಜಬ್ಬಾರ್ ಅವರಿಗೆ ಪುನಃ ಹುದ್ದೆಗಳನ್ನು ನೀಡುವವರೆಗೆ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಶ್ರೀನಿವಾಸಪುರದ ಉಲಮಾಗಳು ತೀವ್ರ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ಆಜಾದ್ ರಸ್ತೆಯ ಜಾಮಿಯಾ ಮಸೀದಿ ಸಮೀಪ ಶುಕ್ರವಾರ ನಡೆದ ರಾಷ್ಟ್ರೀಯ ಏಕತಾ ಕಾರ್ಯಕ್ರಮದಲ್ಲಿ ಮಾತನಾಡಿದ ಧಾರ್ಮಿಕ ಮುಖಂಡರು, ರಾಜ್ಯದಲ್ಲಿ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ಕ್ರಮಗಳನ್ನು ಖಂಡಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಮೌಲವಿ ಕಲೀಮ್ ಉಲ್ಲಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೇಶದಾದ್ಯಂತ ನಡೆಸಿದ ಭಾರತ ಜೋಡೋ ಯಾತ್ರೆ ಮೂಲಕ ಏಕತೆ, ಸೌಹಾರ್ದತೆ ಮತ್ತು ಸಹೋದರತ್ವದ ಸಂದೇಶ ಸಾರಿದ್ದಾರೆ ಎಂದು ಹೇಳಿದರು.
ನಫ್ರತ್ ಕೆ ಬಜಾರ್ ಮೇ ಮೊಹಬ್ಬತ್ ಕೀ ದುಕಾನ್’ ಎಂಬ ಘೋಷಣೆಯೊಂದಿಗೆ ದೇಶದ ವಿವಿಧ ಭಾಗಗಳಲ್ಲಿ ಜನರನ್ನು ಒಂದಾಗಿಸಲು ಮಾಡಿದ ಪ್ರಯತ್ನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಆದರೆ ರಾಜ್ಯ ಮಟ್ಟದಲ್ಲಿ ಅಲ್ಪಸಂಖ್ಯಾತ ನಾಯಕರಿಗೆ ಅನ್ಯಾಯವಾಗುತ್ತಿರುವುದು ವಿಷಾದನೀಯ, ಎಂದು ಅವರು ಹೇಳಿದರು.
ವಿಧಾನಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರು, ವಿಶೇಷವಾಗಿ ಮುಸ್ಲಿಂ ಸಮುದಾಯದ ಬಹುಮತ ಮತಗಳು ಕಾಂಗ್ರೆಸ್ ಪಕ್ಷದ ಪರ ಹರಿದು ಬಂದ ಪರಿಣಾಮವೇ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂಬುದನ್ನು ರಾಜ್ಯ ನಾಯಕರು ಮರೆಯಬಾರದು ಎಂದು ಅವರು ಸೂಚಿಸಿದರು.
ದಾವಣಗೆರೆ ಉಪಚುನಾವಣೆಯ ಹಿನ್ನೆಲೆ ಅಲ್ಪಸಂಖ್ಯಾತ ಮತದಾರರ ಸಂಖ್ಯೆಯನ್ನು ಗಮನಿಸಿ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ನಾಯಕರು ಟಿಕೆಟ್ ಕೇಳಿರುವುದು ಅವರ ಹಕ್ಕು. ಈ ಹಿನ್ನೆಲೆಯಲ್ಲಿ ಎಂಎಲ್ಸಿ ಅಬ್ದುಲ್ ಜಬ್ಬಾರ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿರುವುದು ಹಾಗೂ ಹಿರಿಯ ನಾಯಕ ನಸೀರ್ ಅಹ್ಮದ್ ಅವರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಿರುವುದು ಸಮಂಜಸವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ ತಕ್ಷಣವೇ ಈ ನಿರ್ಧಾರಗಳನ್ನು ಹಿಂಪಡೆದು ಇಬ್ಬರು ನಾಯಕರಿಗೂ ಹುದ್ದೆಗಳನ್ನು ಮರಳಿ ನೀಡಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವರು ಎಂದು ಉಲಮಾಗಳು ಎಚ್ಚರಿಕೆ ನೀಡಿದರು.
ಈ ವೇಳೆ ಹಲವು ಉಲಮಾಗಳು ಮಾತನಾಡಿ, ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಸಂಘಟಿತ ಹೋರಾಟ ಅನಿವಾರ್ಯವಾಗಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಾಮಿಯಾ ಮಸೀದಿ ಇಮಾಮ್ ಮೌಲಾನಾ ಆಸಿಫ್ ಉಲ್ಲಾ, ಚಾರ್ಮಿನಾರ್ ಮಸೀದಿ ಇಮಾಮ್ ಹಾಫಿಜ್ ಅಬೂಹುರೈರಾ ಶರೀಫ್ ಉಮ್ರಿ, ಮೌಲಾನಾ ಸಯ್ಯದ್ ನಿಶಾತ್ ಉಲ್ಲಾ, ಕೋಲಾರದ ಮೌಲಾನಾ ವಜೀರ್, ಹಾಫಿಜ್ ಲುಕ್ಮಾನ್, ಹಾಫಿಜ್ ತಬ್ರೇಜ್, ಹಾಫಿಜ್ ಯೂಸುಫ್ ಹಾಗೂ ಹಾಫಿಜ್ ಅಝೀಮುದ್ದೀನ್ ಸೇರಿದಂತೆ ಹಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಜಾಮಿಯಾ ಮಸೀದಿ ಮುತ್ತುವಲ್ಲಿ ಜಾಹಿದ್ ಅನ್ಸಾರಿ ಕೂಡ ಮಾತನಾಡಿದರು. ಪಟ್ಟಣದ ವಿವಿಧ ಮಸೀದಿಗಳ ಉಲಮಾಗಳು ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

