

ಶ್ರೀನಿವಾಸಪುರ : ಶ್ರೀನಿವಾಸಪುರ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ವ್ಯವಸ್ಥಾಪಕರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದ ಡಿ.ಆರ್. ಮಂಜುನಾಥ್ ಅವರು ಇಂದು ವಯೋನಿವೃತ್ತಿ ಹೊಂದಿದ್ದು, ಅವರ ಸೇವೆಯನ್ನು ಗೌರವಿಸುವ ನಿಟ್ಟಿನಲ್ಲಿ ತಾ.ಪಂ. ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಯಿತು.
ಸಮಾರಂಭದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮಂಜುನಾಥ್ ಅವರ ಆಡಳಿತ ಕೌಶಲ್ಯ, ಪ್ರಾಮಾಣಿಕತೆ ಹಾಗೂ ಕರ್ತವ್ಯನಿಷ್ಠೆಯನ್ನು ಸ್ಮರಿಸಿ ಪ್ರಶಂಸಿಸಿದರು. ತಮ್ಮ ಸೇವಾ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿಗೆ ನೀಡಿದ ಕೊಡುಗೆ, ಸಹೋದ್ಯೋಗಿಗಳೊಂದಿಗೆ ಹೊಂದಿದ್ದ ಸ್ನೇಹಪೂರ್ಣ ನಂಟು ಹಾಗೂ ಶಿಸ್ತುಬದ್ಧ ಕಾರ್ಯಪದ್ಧತಿ ಎಲ್ಲರಿಗೂ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ. ಸರ್ವೇಶ್ ಮಾತನಾಡಿ, ಮಂಜುನಾಥ್ ಅವರು ಇಲಾಖೆಯ ಅಭಿವೃದ್ಧಿಗೆ ಮಹತ್ವದ ಪಾತ್ರವಹಿಸಿದ್ದು, ಅವರ ಅನುಭವ ಮತ್ತು ಮಾರ್ಗದರ್ಶನ ಸದಾ ಸ್ಮರಣೀಯವಾಗಿರುತ್ತದೆ ಎಂದು ಹೇಳಿದರು.
ಸಹಾಯಕ ನಿರ್ದೇಶಕ ರಾಮಪ್ಪ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಂ. ಬೈರೇಗೌಡ, ಜಿಲ್ಲಾ ಪಿ.ಡಿ.ಓ. ನೌಕರರ ಸಂಘದ ಅಧ್ಯಕ್ಷ ಕೆ. ಮಹೇಶ್ ಅವರು ಕೂಡ ಮಂಜುನಾಥ್ ಅವರ ಸೇವೆಯನ್ನು ಶ್ಲಾಘಿಸಿ, ನಿವೃತ್ತಿ ಜೀವನವು ಆರೋಗ್ಯಕರ ಮತ್ತು ಸಂತೋಷಕರವಾಗಿರಲಿ ಎಂದು ಹಾರೈಸಿದರು.
ವಾಟರ್ ಬೋರ್ಡ್ ಜೆ.ಇ. ಸಂತೋಷ್, ತಾ.ಪಂ. ಸಿಬ್ಬಂದಿಗಳಾದ ಕೆ.ಎಂ. ಶ್ರೀನಾಥ್, ಅರುಣಾದೇವಿ, ಸೌಮ್ಯ ಹಾಗೂ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದು, ನಿವೃತ್ತರಾದ ಮಂಜುನಾಥ್ ಅವರನ್ನು ಸನ್ಮಾನಿಸಿ ಶುಭಾಶಯ ಕೋರಿದರು.
ಕಾರ್ಯಕ್ರಮವು ಭಾವನಾತ್ಮಕ ವಾತಾವರಣದಲ್ಲಿ ನೆರವೇರಿತು. ಸಹೋದ್ಯೋಗಿಗಳೊಂದಿಗೆ ಕಳೆದ ಸೇವಾ ಕ್ಷಣಗಳನ್ನು ಸ್ಮರಿಸಿಕೊಂಡ ಮಂಜುನಾಥ್ ಅವರು, ಎಲ್ಲರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿ, ನಿವೃತ್ತಿ ನಂತರವೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಸಂಕಲ್ಪ ವ್ಯಕ್ತಪಡಿಸಿದರು.

