

ಶ್ರೀನಿವಾಸಪುರದ ಪುರಸಭಾ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಭೆಯಲ್ಲಿ ಪುರಸಭೆಯ ಮುಖ್ಯಾಧಿಕಾರಿ ವಿ.ನಾಗರಾಜ್ ಪೌರ ಕಾರ್ಮಿಕರಿಗೆ ಕಸ ವಿಂಗಣೆ ಕುರಿತು ತಿಳುವಳಿಕೆ ನೀಡಿದರು.
ಮೂಲದಲ್ಲಿಯೇ ಕಸ ವಿಂಗಡಿಸಿ ಪರಿಸರ ಉಳಿಸಿ
ಶ್ರೀನಿವಾಸಪುರ. ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪುರಸಭೆಯ ಪೌರಕಾರ್ಮಿಕರಿಗೆ ಕಸ ವಿಂಗಣೆ ಕುರಿತು ತಿಳುವಳಿಕೆ ನೀಡಲಾಯಿತು.
ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೌರ ಕಾರ್ಮಿಕರು ಮೂಲದಲ್ಲಿಯೇ ಹಸಿ ಕಸ, ಒಣ ಕಸ ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ವಿಂಗಡಿಸಿಕೊಳ್ಳಬೇಕು. ಹಾಗೆ ಮಾಡುವುದರಿಂದ ಕಸದ ಸಂಸ್ಕರಣೆ ಸುಲಭವಾಗುತ್ತದೆ ಎಂದು ಹೇಳಿದರು.
ಪಟ್ಟಣದ ನಾಗರಿಕರು ತಮ್ಮ ಮನೆಯಲ್ಲಿನ ತ್ಯಾಜ್ಯ ವಸ್ತುಗಳನ್ನು ನಿಯಮಾನುಸಾರ ವಿಂಗಡಿಸಿ ಪೌರ ಕಾರ್ಮಿಕರಿಗೆ ನೀಡುವುದರ ಮೂಲಕ ಸಹಕರಿಸಬೇಕು. ಪಟ್ಟಣದ ಸ್ವಚ್ಛತೆಗೆ ಪೂರಕವಾಗಿ ನಡೆದುಕೊಳ್ಳಬೇಕು ಎಂದು ಹೇಳಿದರು.
ಮೇ.೧ ರಂದು ಪಟ್ಟಣದಲ್ಲಿ ಸ್ವಚ್ಚತಾ ಆಂದೋಲನ ಏರ್ಪಡಿಸಲಾಗಿದೆ. ಆ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸುವುದರ ಮೂಲಕ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಪುರಸಭೆ ಆರೋಗ್ಯ ನಿರೀಕ್ಷಕ ವಿಜಯಕುಮಾರ್ ಮಾತನಾಡಿ, ಸ್ವಚ್ಛತೆ ನಾಗರಿಕತೆಯ ಮುಖ್ಯ ಲಕ್ಷಣ. ಪಟ್ಟಣದ ನಾಗರಿಕರು ವೈಯಕ್ತಿಕ ಸ್ವಚ್ಚತೆಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಪಟ್ಟಣದ ಸ್ವಚ್ಛತೆಗೆ ನೀಡಬೇಕು. ಅದಕ್ಕೆ ಪೂರಕವಾಗಿ ಕಸವನ್ನು ವಿಂಗಡಿಸಿ ಪೌರ ಕಾರ್ಮಿಕರಿಗೆ ನೀಡಬೇಕು ಎಂದು ಹೇಳಿದರು.
ಕಂದಾಯ ಅಧಿಕಾರಿ ಶಂಕರ್, ಪರಿಸರ ಅಭಿಯಂತರ ಲಕ್ಷ್ಮಿಶ ಆರೋಗ್ಯ ನಿರೀಕ್ಷಕ ಟಿ.ವಿ.ಸುರೇಶ್, ಪೌರಕಾರ್ಮಿಕರ ಮೇಸ್ರ್ತಿ ಬಾಲಕೃಷ್ಣ, ಸಿಬ್ಬಂದಿ ಸಂತೋಷ್, ನಾಗರಾಜ್, ಪ್ರಕಾಶ್, ಚೇತನ್ ಇದ್ದರು.

