

ಶ್ರೀನಿವಾಸಪುರ, ಏ.27: ಮಹಿಳಾ ಸಬಲೀಕರಣದ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ಪಟ್ಟಣದ ಇಂದಿರಾ ಭವನ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಗೆ ಚಾಲನೆ ನೀಡಿ ಮಾತನಾಡಿದ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಡಾ. ಕೆ.ಎನ್. ವೇಣುಗೋಪಾಲ್, ಕಾಂಗ್ರೆಸ್ ಪಕ್ಷವು ದೇಶದಲ್ಲಿ ಹಲವು ದಶಕಗಳ ಆಡಳಿತ ನಡೆಸಿದರೂ ಮಹಿಳೆಯರ ಸಬಲೀಕರಣಕ್ಕಾಗಿ ಶಾಶ್ವತ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿದರು.
ಮಹಿಳಾ ಮೀಸಲಾತಿ ಸಂಬಂಧ ಸಂಸತ್ತಿನಲ್ಲಿ ಮಂಡನೆಯಾದ ನಾರಿ ಶಕ್ತಿ ಅಧಿನಿಯಮಕ್ಕೆ ಕಾಂಗ್ರೆಸ್ ಪಕ್ಷ ಅಡ್ಡಿಪಡಿಸಿದೆ. ಮಹಿಳೆಯರನ್ನು ಕೇವಲ ಮತ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್, ಮಹಿಳೆಯರ ಹಕ್ಕುಗಳಿಗೆ ದ್ರೋಹ ಬಗೆದಿದೆ ಎಂದು ಟೀಕಿಸಿದರು.
ಮುಂದಿನ ಚುನಾವಣೆಯಲ್ಲಿ ಮಹಿಳೆಯರು ಮತ್ತು ಮತದಾರರು ಕಾಂಗ್ರೆಸ್ ವಿರುದ್ಧ ತೀರ್ಮಾನ ಕೈಗೊಂಡು ತಮ್ಮ ಮತದ ಮೂಲಕ ಉತ್ತರ ನೀಡಬೇಕು ಎಂದು ಕರೆ ನೀಡಿದರು. ಮಹಿಳಾ ಮೀಸಲಾತಿ ಬಿಲ್ ತಾತ್ಕಾಲಿಕ ವಿಳಂಬವಾದರೂ ಮುಂದಿನ ದಿನಗಳಲ್ಲಿ ಜಾರಿಗೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ರೋಣೂರು ಆರ್.ಎನ್. ಚಂದ್ರಶೇಖರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಹಿಳೆಯರ ರಾಜಕೀಯ ಸಬಲೀಕರಣಕ್ಕಾಗಿ ಸಂಸತ್ ಹಾಗೂ ವಿಧಾನಸಭೆಗಳಲ್ಲಿ 33 ಶೇಕಡಾ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ನಾರಿ ಶಕ್ತಿ ಅಧಿನಿಯಮ ಜಾರಿಗೆ ತರಲಾಗಿದೆ ಎಂದರು. ಆದರೆ ವಿರೋಧ ಪಕ್ಷಗಳ ಅಡ್ಡಿಪಡಿಸುವಿಕೆಯಿಂದ ಈ ಯೋಜನೆಗೆ ವಿಳಂಬವಾಗುತ್ತಿದ್ದು, ಇದರ ವಿರುದ್ಧ ಜನಜಾಗೃತಿ ಮೂಡಿಸಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಮುಂದಿನ ಚುನಾವಣೆಯಲ್ಲಿ ಮಹಿಳೆಯರು ಒಗ್ಗೂಡಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಶೆಟ್ಟಿಹಳ್ಳಿ ನಾಗಭೂಷಣ್, ಮುಖಂಡರಾದ ಲಕ್ಷಣಗೌಡ, ಈ. ಶಿವಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

