

ಕೋಲಾರ:- ಸಮಾಜಕ್ಕೆ ಸಮಾನತೆಯ ಸಂದೇಶ ನೀಡಿ, ಮಹಿಳೆಯರು ಪುರುಷರಷ್ಟೆ ಸಮಾನರು ಎಂದು ೧೨ನೇ ಶತಮಾನದಲ್ಲೇ ಸಾರಿ, ತಮ್ಮ ವಚನಗಳ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡಿದ ಬಸವಣ್ಣನವರ ಆದರ್ಶ ಪಾಲಿಸುವ ಮೂಲಕ ಸುಂದರ ಸಮಾಜ ನಿರ್ಮಿಸೋಣ ಎಂದು ಬೆಂಗಳೂರಿನ ಡಿಐಜಿಪಿ ಡಿ.ದೇವರಾಜ್ ಕರೆ ನೀಡಿದರು.
ನಗರದ ಡೂಂಲೈಟ್ ವೃತ್ತದಲ್ಲಿ ಡೂಂಲೈಟ್ ವೃತ್ತದ ಗೆಳಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಗುರು ಬಸವಣ್ಣ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಪಾನಕ,ಕೋಸಂಬರಿ ವಿತರಿಸಿ ಅವರು ಮಾತನಾಡುತ್ತಿದ್ದರು.
ವಚನಗಳು ತುಂಬಾ ಸರಳವಾಗಿದ್ದು ಎಲ್ಲರಿಗೂ ಅರ್ಥವಾಗುತ್ತದೆ. ಆದುದರಿಂದ ಮಕ್ಕಳೂ ಸಹ ಬಸವಣ್ಣನವರ ವಚನಗಳ ಬಗ್ಗೆ ತಿಳಿದುಕೊಂಡು ಪಾಲಿಸಬೇಕು, ವಚನಗಳ ಪ್ರತಿ ಸಾಲಿನಲ್ಲೂ ಬದುಕಿನ ಹಾದಿ ತೋರುವ ಸತ್ವವಿದೆ ಎಂದು ಕರೆ ನೀಡಿದರು.
ಅವರ ತತ್ವಗಳನ್ನು ಸಮಾಜಕ್ಕೆ ತಿಳಿಸುವ ಕೆಲಸ ಪ್ರತಿಯೊಬ್ಬರು ಮಾಡಬೇಕು, ಬಸವಣ್ಣನವರ ವಚನ ಪಾಲಿಸಿದರೆ ಪ್ರಪಂಚಲ್ಲಿ ಶಾಂತಿ ನೆಲಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದ ಅವರು, ಬಸವಣ್ಣನವರ ವಚನಗಳಲ್ಲಿ ಮೇಲು-ಕೀಳು, ಜಾತಿಯತೆ, ಅಸಮಾನತೆಯ ವಿರುದ್ದ ಹೋರಾಟದ ತತ್ವಾದರ್ಶಗಳಿವೆ, ಅವರ ವಚನಗಳು ಎಂದೆಂದಿಗೂ ಸ್ಪೂರ್ತಿಯಾಗಿದ್ದು, ಇತರೆ ಭಾಷೆಗಳಿಗೂ ತರ್ಜುಮೆಯಾಗಿ ವಿಶ್ವವ್ಯಾಪಿಯಾಗಿವೆ ಎಂದರು.
ವಿಶ್ವಮಾನವ ಬಸವಣ್ಣನವರ ಬಗ್ಗೆ ಮಕ್ಕಳು ತಿಳಿದುಕೊಳ್ಳಬೇಕು. ಅವರ ತತ್ವಗಳನ್ನು ಪಾಲಿಸಬೇಕು. ಮೇಲು ಕೀಳು, ಶ್ರೀಮಂತ ಬಡವ ಮುಂತಾದ ಬೇಧಗಳನ್ನು ತೊಡೆದುಹಾಕಬೇಕು ಎಂದು ತಿಳಿಸಿದರು.
ಅವರು ಇಡೀ ಮಾನವ ಕುಲಕೋಟಿಗೆ ತಮ್ಮ ಭಕ್ತಿ ಪ್ರಧಾನ ವಚನಗಳಲ್ಲಿ ಸಮಾಜದ ಅಂಕು ಡೊಂಕುಗಳನ್ನು ಅಂದಿನ ಕಾಲದ ಸಮಾಜದಲ್ಲಿದ್ದ ಮೇಲೂ ಕೀಳೂ ಢಂಬಾಚಾರ,ಮೂಢನಂಬಿಕೆ ಮುಂತಾದವುಗಳ ವಿರುದ್ದ ದ್ವನಿ ಎತ್ತಿದ ಬಸವಣ್ಣನವರು ವಚನಗಳೆಂಬ ಹೊಸ ಸಾಹಿತ್ಯ ಹುಟ್ಟು ಹಾಕಿದ ಕಾಯಕ ಯೋಗಿ ಇವರ ವಚನಗಳನ್ನು ಪ್ರತಿಯೊಬ್ಬರು ಸ್ಮರಿಸಬೇಕೆಂದು ತಿಳಿಸಿದರು.
ಮನುಷ್ಯ ಮನುಷ್ಯರ ನಡುವೆ ಯಾವುದೇ ರೀತಿಯ ಕಂದಕಗಳು ಇರಬಾರದು, ನಿಜ ಜೀವನದಲ್ಲಿ ನಾವು ಏನನ್ನು ಪಾಲನೆ ಮಾಡಬೇಕು ಎಂದು ಬಸವಣ್ಣ ಹೇಳಿದ್ದಾರೆ. ಸಾಮಾನ್ಯ ಭಾಷೆಯಲ್ಲಿ ವಚನಗಳನ್ನು ರಚಿಸಿ ಸಮಾಜವನ್ನು ತಿದ್ದುವಂತಹ ಕೆಲಸ ಮಾಡಿದ್ದಾರೆ. ಸಮಾಜ ಸುಧಾರಕರಾಗಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿರುವ ಬಸವಣ್ಣನವರನ್ನು ಸ್ಮರಿಸಿದರು.
ಕಾರ್ಯಕ್ರಮ ಆಯೋಜಕರು ಹಾಗೂ ಗುತ್ತಿಗೆದಾರರಾದ ಶೇಖರ್ ಮಾತನಾಡಿ, ಕಳೆದ ೧೦ ವರ್ಷಗಳಿಂದ ಡೂಂಲೈಟ್ ವೃತ್ತದಲ್ಲಿ ವಿಶ್ವಗುರು ಬಸವಣ್ಣ ಜಯಂತಿ ಆಚರಣೆ ಮಾಡುತ್ತಿದ್ದೇವೆ. ಪ್ರತೀ ವರ್ಷವೂ ಸಹ ಬೆಳಗ್ಗೆಯಿಂದ ಸಂಜೆವರೆಗೂ ಸಾವಿರಾರು ಮಂದಿಗೆ ಪಾನಕ, ಮಜ್ಜಿಗೆ, ಕೋಸಂಬರಿಯನ್ನು ವಿತರಿಸುತ್ತೇವೆ ಎಂದರು.
ಸಮಾಜದಲ್ಲಿ ಜಾತಿ, ಕುಲ ಯಾವುದೂ ಇಲ್ಲ ಎಲ್ಲರೂ ಒಂದೇ ಎಂದು ಜಗತ್ತಿಗೆ ಸಾರಿದ್ದಾರೆ. ಅದರಂತೆ ನಾವೂ ಸಹ ಶಾಂತಿ, ಸೌಹಾರ್ದತೆ ಮೂಡಿಸುವ ಸಲುವಾಗಿ ಪ್ರತೀ ವರ್ಷ ಕಾರ್ಯಕ್ರಮ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿಯೂ ಸಹ ಇದೇ ರೀತಿ ಆಚರಣೆ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀನಾಥ್, ವೀರಭದ್ರಪ್ಪ, ಬಸವರಾಜು, ಶಿವರಾಜು, ನಾಗೇಂದ್ರ (ನಾಗಿ), ಕುಮಾರ್, ವಕ್ಕಲೇರಿ ರಾಜಪ್ಪ, ಶ್ರೀನಿವಾಸಪ್ಪ, ಪೊಲೀಸ್ ಬಸವರಾಜ್, ವೆಂಕಟೇಶ್ ಮುಂತಾದವರಿದ್ದರು.
ಚಿತ್ರಶೀರ್ಷಿಕೆ:(ಫೋಟೊ-೨೧ಕೋಲಾರ೩);ಕೋಲಾರ ನಗರದ ಡೂಂಲೈಟ್ ವೃತ್ತದಲ್ಲಿ ಡೂಂಲೈಟ್ ಗೆಳಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಗುರು ಬಸವಣ್ಣ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಡಿಐಜಿಪಿ ಡಿ.ದೇವರಾಜ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಪಾನಕ,ಕೋಸಂಬರಿ ವಿತರಿಸಿದರು.

