

ಹಳ್ನಾಡಿನ ತುಳಸಿ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡದ ಲೋಕಾರ್ಪಣಾ ಕಾರ್ಯಕ್ರಮ ನೆರವೇರಿತು. ಕಟ್ಟಡದ ಉದ್ಘಾಟನೆಯನ್ನು ಬೈಲೂರಿನ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಸ್ವಾಮಿ ವಿನಾಯಕಾನಂದ ಸ್ವಾಮೀಜಿಯವರು ನೆರವೇರಿಸಿ ದೀಪ ಪ್ರಜ್ವಲನಗೊಳಿಸಿ ಆರ್ಶೀರ್ವಚನ ನೀಡಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಉದ್ಯಮಿಗಳು ಹಾಗೂ ಕಟ್ಕೇರಿ ನಂದಗೋಕುಲ ಶಿಶುಮಂದಿರದ ವ್ಯವಸ್ಥಾಪಕರಾದ ಶ್ರೀ ಪ್ರೇಮಾನಂದ ಶೆಟ್ಟಿ ಯವರು ಶುಭಾಶಂಸನೆಯನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರಾದ ಶ್ರೀ ನರೇಂದ್ರ ಕುಮಾರ ಕೋಟರವರು ಮಾತನಾಡಿ ತುಳಸಿ ವಿದ್ಯಾ ಸಂಸ್ಥೆಯು ಹೀಗೆ ಎತ್ತರವಾಗಿ ಬೆಳೆದು ವಿದ್ಯಾರ್ಥಿಗಳ ಜೀವನವು ಪ್ರಜ್ವಲಿಸಲಿ ಎಂದು ಹಾರೈಸಿದರು. ಇನ್ನೋರ್ವ ಮುಖ್ಯ ಅತಿಥಿಯಾದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರರಾದ ಹಳ್ನಾಡಿನ ಶ್ರೀ ದೇವಾನಂದ ಶೆಟ್ಟಿ ಯವರು ಮಾತನಾಡಿ ಉತ್ತಮ ಸಮಾಜಕ್ಕಾಗಿ ಒಳ್ಳೆಯ ಶಿಕ್ಷಣ ಕೊಡಬೇಕೆಂಬ ಉದ್ದೇಶದಿಂದ ಸ್ಥಾಪಿತಗೊಂಡ ತುಳಸಿ ಎಂಬ ಶಿಕ್ಷಣ ಸಂಸ್ಥೆಯು ಇನ್ನಷ್ಟು ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವನ್ನು ನೀಡುವಂತಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ತುಳಸಿ ಎಜುಕೇಶನಲ್ & ಕಲ್ಚರಲ್ ಟ್ರಸ್ಟ್ ನ ವಿಶ್ವಸ್ಥರಾದ ಶ್ರೀಯು ಕೃಷ್ಣರಾಯ ಶಾನುಭಾಗ್ ರವರು ವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇಷ್ಮ ಪ್ರದೀಪ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶಾಲಾ ವಾರ್ಷಿಕ ವರದಿಯನ್ನು ವಾಚಿಸಿದರು.
ಎಂಟನೇ ತರಗತಿಯ ವಿದ್ಯಾರ್ಥಿಗಳಾದ ಸಾಕ್ಷರ್ ಆರ್ ಶೆಟ್ಟಿ ಹಾಗೂ ಪ್ರಣೀತ ಕೇಶವ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ಶಿಕ್ಷಕಿಯರಾದ ಶಿಲ್ಪಾ ಶೆಟ್ಟಿ ಹಾಗೂ ರೂಪಾ ಬಹುಮಾನಿತ ವಿದ್ಯಾರ್ಥಿಗಳ ಹೆಸರನ್ನು ವಾಚಿಸಿದರು. ಶಿಕ್ಷಕಿ ಜಯಶೀಲ ನಾಯಕ್ ಸ್ವಾಗತಿಸಿ, ಶಿಕ್ಷಕಿ ಆಶ್ರಿತ ವಂದಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಶಾಲಾ ವಿದ್ಯಾರ್ಥಿಗಳಿಂದ ವೈಭವದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗದವರು, ಪೋಷಕರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


