

ಕೋಟ: ಪ್ರಭು ಕ್ರಿಸ್ತರ ಪುನರುಜ್ಜೀವನವನ್ನು ಸ್ಮರಿಸುವ ಹಬ್ಬವಾದ “ಈಸ್ಟರ್” ಹಬ್ಬವನ್ನು ಕೋಟ ಸಂತ ಜೋಸೆಫರ ಇಗರ್ಜಿಯಲ್ಲಿ ಭಕ್ತಿಪೂರ್ವವಾಗಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಧರ್ಮಗುರುಗಳಾದ ವಂದನೀಯ ಸ್ಟ್ಯಾನಿ ತಾವ್ರೊ ಅವರು ಪವಿತ್ರ ಬಲಿಪೂಜೆಯನ್ನು ನೆರವೇರಿಸಿದರು. ಅತಿಥಿ ಧರ್ಮಗುರುಗಳಾಗಿ ಆಗಮಿಸಿದ ಉಡುಪಿ ಧರ್ಮ ಪ್ರಾಂತ್ಯದ ಯುವಜನ ಆಯೋಗದ ನಿರ್ದೇಶಕರಾದ ವಂದನೀಯ ಸ್ಟೀವನ್ ಫೆರ್ನಾಂಡಿಸ್ ಅವರು ಬಲಿಪೂಜೆಯಲ್ಲಿ ಸಹಕರಿಸಿದರು.
ಸಂಪ್ರದಾಯದಂತೆ ಪ್ರಾರಂಭದಲ್ಲಿ ಅಗ್ನಿಯನ್ನು ಹೊತ್ತಿಸಿ, ಅದರಿಂದ “ಈಸ್ಟರ್ ಬತ್ತಿಯನ್ನು” ಹೊತ್ತಿಸುವುದರೊಂದಿಗೆ ಹೊಸ ಬೆಳಕನ್ನು ಸ್ವಾಗತಿಸಲಾಯಿತು. ಹಳೆ ಓಡಂಬಡಿಕೆ ಹಾಗೂ ಹೊಸ ಓಡಂಬಡಿಕೆ ಗಳಿಂದ ಆಯ್ದ ವಾಚನಗಳನ್ನು ವಾಚಿಸಲಾಯಿತು. ತದನಂತರ “ಪವಿತ್ರ ಜಲ” ವನ್ನು ಆಶೀರ್ವಾದಿಸಲಾಯಿತು.
ಭಕ್ತಿಕರು ಬಹುಸಂಖ್ಯೆಯಲ್ಲಿ ಭಕ್ತಿಪೂರ್ವಕವಾಗಿ ಬಲಿಪೂಜೆಯಲ್ಲಿ ಭಾಗವಹಿಸಿ, ಪವಿತ್ರ ಪರಮ ಪ್ರಸಾದವನ್ನು ಸ್ವೀಕರಿಸಿದರು.
ಬಲಿಪೂಜೆಯ ನಂತರ ನಡೆದ ಸರಳ ಸಹಮಿಲನ ಸಮಾರಂಭದಲ್ಲಿ ಪರಸ್ಪರ ಈಸ್ಟರ್ ಹಬ್ಬದ ಶುಭಾಶಯಗಳನ್ನು ಹಂಚಿಕೊಂಡರು. ಲಘು ಉಪಹಾರವನ್ನು ವಿತರಿಸಲಾಯಿತು.





































