
ತಾಲೂಕು ಆಡಳಿತ ಗ್ರಾಮ ಕಡೆ ಕಾರ್ಯಕ್ರಮಕ್ಕೆ ಚಾಲನೆ : ಅರ್ಹರಿಗೆ ಸವಲತ್ತು ತಲುಪಿಸುವುದು ನನ್ನ ಗುರಿ – ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ : ಬಡಬಗ್ಗರ ಪರ ಕಾಳಜಿ ಹೊಂದಿರುವ ನಾನು, ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತುಗಳು ಅರ್ಹರಿಗೆ ತಲುಪುವಂತೆ ನಿರಂತರವಾಗಿ ಪ್ರಯತ್ನಿಸುತ್ತಿದ್ದೇನೆ ಎಂದು ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಹೇಳಿದರು.
ತಾಲೂಕಿನ ಅಡ್ಡಗಲ್ ಗ್ರಾಮದ ಪ್ರೌಢಶಾಲಾ ಆವರಣದಲ್ಲಿ ಸೋಮವಾರ ನಡೆದ ತಾಲೂಕು ಆಡಳಿತ ಗ್ರಾಮ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಐದು ಬಾರಿ ಶಾಸಕನನ್ನಾಗಿ ಮಾಡಿದ ಮತದಾರರ ಋಣ ತೀರಿಸಿಕೊಳ್ಳಲು ಹಗಲಿರುಳು ಶ್ರಮಿಸುತ್ತಿದ್ದೇನೆ ಎಂದರು.
ರಾಯಲ್ಪಾಡು ಗ್ರಾಮಕ್ಕೆ ಸಂಬಂಧಿಸಿದ 30 ಎಕರೆ ಜಮೀನನ್ನು ಒತ್ತುವಾರಿದಾರರಿಂದ ವಶಪಡಿಸಿಕೊಂಡು ಅಲ್ಲಿ ಟೌನ್ಶಿಪ್ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು. ಸುಮಾರು 500ರಿಂದ 1,000 ನಿವೇಶನಗಳನ್ನು ರೂಪಿಸುವ ಯೋಜನೆ ಇದ್ದು, ನಿವೇಶನರಹಿತರನ್ನು ಗುರುತಿಸಿ ಒಂದು ತಿಂಗಳೊಳಗೆ ಅವರಿಗೆ ನಿವೇಶನ ನೀಡುವಂತೆ ನಿರ್ದೇಶನ ನೀಡಲಾಗಿದೆ ಎಂದರು.
ರಾಯಲ್ಪಾಡು ಗ್ರಾಮದ ಬ್ರಾಹ್ಮಣ ಮತ್ತು ಆರೈವ್ಯಶ್ಯ ಸಮುದಾಯದ ಸ್ಮಶಾನ ಅಭಿವೃದ್ಧಿ ಮನವಿಯನ್ನು ಪರಿಶೀಲಿಸಲಾಗುವುದು ಎಂದು ಹೇಳಿದರು. ಕಳೆದ 10 ವರ್ಷಗಳಿಂದ ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳಿಗೆ ಕೊಳವೆಬಾವಿ ನೀಡದಿರುವ ಹಿನ್ನೆಲೆಯಲ್ಲಿ ತಮ್ಮ ಅವಧಿಯಲ್ಲಿ 500ರಿಂದ 600 ಕೊಳವೆಬಾವಿಗಳನ್ನು ಕೊರೆಸಲಾಗಿದೆ ಎಂದು ತಿಳಿಸಿದರು.
ಮುದಿಮಡುಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲ ಕುಟುಂಬಗಳ ರೇಷನ್ ಕಾರ್ಡ್ ರದ್ದುಗೊಂಡಿರುವ ಕುರಿತು ಬಂದ ದೂರಿನ ಮೇರೆಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಬಡ ಕುಟುಂಬಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸುಮಾರು ₹20 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು, 5 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ವಲಯ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಯುವಕರು, ರೈತರು ಹಾಗೂ ಕಾರ್ಮಿಕರಿಗೆ ಉದ್ಯೋಗಾವಕಾಶ ಸಿಗಲಿದೆ ಎಂದು ಹೇಳಿದರು. ಅಭಿವೃದ್ಧಿಗೆ ಅಡ್ಡಿಪಡಿಸುವವರ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದರು.
ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ₹8 ಕೋಟಿ ಅನುದಾನ ನೀಡಲಾಗಿದ್ದು, ರಾಯಲ್ಪಾಡು ಗ್ರಾಮದಲ್ಲಿ ₹65 ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು. ಅಧಿಕಾರಿಗಳು ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ಇಒ ಕೆ. ಸರ್ವೇಶ್ ಮಾತನಾಡಿ, ಸಾರ್ವಜನಿಕರು ಸಣ್ಣಪುಟ್ಟ ಕೆಲಸಗಳಿಗೆ ಕಚೇರಿಗಳಿಗೆ ಅಲೆದಾಡಬಾರದೆಂಬ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಬೇಸಿಗೆ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು. 420 ನರೇಗಾ ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿದವುಗಳನ್ನು ಮುಂದಿನ ವರ್ಷದಲ್ಲಿ ಪೂರ್ಣಗೊಳಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮುದಿಮಡುಗು (33), ರಾಯಲ್ಪಾಡು (34), ಯರಂವಾರಿಪಲ್ಲಿ (14), ಅಡ್ಡಗಲ್ (9) ಗ್ರಾಮಗಳಿಂದ ಬಂದ ಒಟ್ಟು ಅರ್ಜಿಗಳನ್ನು ಸ್ವೀಕರಿಸಲಾಯಿತು. ತಹಶೀಲ್ದಾರ್ ಜಿ.ಎನ್. ಸುಧೀಂದ್ರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಮುಖಂಡರು ಉಪಸ್ಥಿತರಿದ್ದರು.

