

ಕೋಲಾರ, ಫೆಬ್ರವರಿ 3 : ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆದರೂ ಕರ್ನಾಟಕ ಸೇರಿದಂತೆ ಭಾರತದ ಹಲವಾರು ರಾಜ್ಯಗಳಲ್ಲಿ ಆರೋಗ್ಯದ ಹಕ್ಕು ಇನ್ನೂ ಜಾರಿ ಆಗಿಲ್ಲ. ಭಾರತದಲ್ಲಿ ಪ್ರತಿ ವರ್ಷ ಆರೋಗ್ಯ ಚಿಕಿತ್ಸೆಯ ಖರ್ಚುಗಳಿಂದಾಗಿ 10 ಕೋಟಿ ಜನರು ಬಡತನಕ್ಕೆ ತಳ್ಳಲ್ಪಡುತ್ತಿದ್ದಾರೆ. ಆರೋಗ್ಯ ಸೇವೆ ಹಾಗು ಚಿಕಿತ್ಸೆ ವೆಚ್ಚಗಳು ದಿನೇ ದಿನೇ ದುಬಾರಿಯಾಗುತ್ತಿದ್ದು ಖರ್ಚು ಭರಿಸಲಾರದೆ ಎಷ್ಟೋ ಜನರು ಸಾವನ್ನಪ್ಪುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಕೋಲಾರ ಜಿಲ್ಲಾ ಆಸ್ಪತ್ರೆಗಳು ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಒಟ್ಟಾರೆಯಾಗಿ ಬಲಪಡಿಸುವ ಬದಲು, ಸರ್ಕಾರವು ಜಿಲ್ಲಾ ಆಸ್ಪತ್ರೆಗಳನ್ನು ಖಾಸಗೀಕರಣಗೊಳಿಸಲು ಯೋಜಿಸುತ್ತಿದೆ. ಇದನ್ನು ಖಂಡಿಸುವುದಕ್ಕೆ ಹಾಗೂ ನಮ್ಮ ಆರೋಗ್ಯ ಹಕ್ಕನ್ನು ಪಡೆಯೋಕ್ಕೆ ನಾವು ರಾಜ್ಯಾದ್ಯಂತ ಇಂದು ಬೀದಿಗೆ ಇಳಿಯಬೇಕಾಗಿದೆ.
ನೀತಿ ಆಯೋಗದ ಶಿಫಾರಿಸ್ಸಿನಂತೆ ಕರ್ನಾಟಕದ 8 ಜಿಲ್ಲೆಗಳಲ್ಲಿ (ತುಮಕೂರು, ವಿಜಯನಗರ, ಕೋಲಾರ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ವಿಜಯಪುರ ಮತ್ತು ದಾವಣಗೆರೆ) ವೈದ್ಯಕೀಯ ಶಿಕ್ಷಣ ಸಚಿವರು ಶರಣ್ ಪ್ರಕಾಶ್ ಪಾಟೀಲ್ (ಪಿಪಿಪಿ-ಸಾರ್ವಜನಿಕ-ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ನೆಪದಲ್ಲಿ ಜಿಲ್ಲಾ ಆಸ್ಪತ್ರೆಗಳನ್ನು ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸುವುದಾಗಿ ಹೇಳಿದ್ದಾರೆ. ಈ ರೀತಿ ಖಾಸಗೀ ಅವರಿಗೆ ಕೊಟ್ಟರೆ, ಸರ್ಕಾರಿ ಆಸ್ಪತ್ರೆಗಳನ್ನು ಅವಲಂಬಿಸಿರುವ ಬಡ ಜನರ ಆರೋಗ್ಯವನ್ನು ಕಾಪಾಡುವ ಬದಲು ಅವರನ್ನು ಕೊಂದಂತೆ ಆಗುತ್ತದೆ. ಮತ್ತು ಜನರಿಗಾಗಿ ಸೂಕ್ತ ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸುವುದರಿಂದ ಸರ್ಕಾರ ಕೈ ತೊಳೆದುಕೊಳ್ಳುತ್ತಿದೆ. ಚಿಕಿತ್ಸೆ ನಿರಾಕರಣೆ, ಚಿಕಿತ್ಸೆ ದುಬಾರಿ ಆಗುವುದಕ್ಕೆ ದಾರಿ ಮಾಡಿಕೊಡುತ್ತದೆ. ಈ ಖಾಸಗೀಕರಣವನ್ನು ವಿಜಯಪುರದಲ್ಲಿ ಕೈಬಿಡುವುದಾಗಿ ಭರವಸೆ ನೀಡಿದ್ದಾರೆ. ಅದೇ ರೀತಿಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಸಹ ಖಾಸಗೀಕರಣವನ್ನು ಕೈ ಬಿಡಬೇಕು. ಖಾಲಿ ಹುದ್ದೆಗಳನ್ನು ಭರ್ತಿ ಮಾಡದೆ, ಇನ್ನೂ ಉಚಿತ ಔಷಧಿಗಳು ಮತ್ತು ರಕ್ತ ಪರೀಕ್ಷೆಗಳನ್ನು ಪೂರೈಸದೆ, ಎಲ್ಲಾ ಸೇವೆಗಳನ್ನು ಖಚಿತಪಡಿಸದೆ, ಗುಣಮಟ್ಟದ ಹಾರೈಕೆಯನ್ನು ನಿರ್ವಹಿಸದೆ, ಜನರಿಗೆ ಸರ್ಕಾರಿ ಆರೋಗ್ಯ ವ್ಯವಸ್ಥೆಯ ಬಗ್ಗೆ ತಾತ್ಸಾರ ಬರುವಂತೆ ಮಾಡಿ ಈಗ ಅದನ್ನು ಖಾಸಗಿಯವರ ಕೈಗೊಪ್ಪಿಸಲು ಹೊರಟಿದೆ. ಅದಲ್ಲದೆ ಇದರಿಂದ ಬರುವ ಖಾಸಗಿ ವೈದ್ಯಕೀಯ ಕಾಲೇಜು ಹೆಚ್ಚಾಗಿ ಪ್ರಬಲ ವರ್ಗ ಮತ್ತು ಜಾತಿಯ ವಿದ್ಯಾರ್ಥಿಗಳಿಗೆ ಮಾತ್ರ ಕೈಗೆಟುಕುವುದು ಮತ್ತು ಬಹುಪಾಲು ಅರ್ಹ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗುತ್ತಾರೆ. ಸಿಬ್ಬಂದಿಗಳು ತಮ್ಮ ನೌಕರ ಹಕ್ಕುಗಳನ್ನು ಸಹ ಕಳೆದುಕೊಳ್ಳುತ್ತಾರೆ.
ಜನರು ಖಾಸಗೀಕರಣವನ್ನು ತೀವ್ರವಾಗಿ ಖಂಡಿಸಬೇಕು. ರಾಜ್ಯದಲ್ಲಿ ಆರೋಗ್ಯ ಎಲ್ಲಾ ಲಿಂಗ, ವರ್ಗ, ಜಾತಿಯವರ ಹಕ್ಕಾಗಬೇಕು -ಬಡವರಿಗೆ, ಎಲ್ಲಾ ಕಾರ್ಮಿಕರಿಗೆ, ದಲಿತ ಸಮೂದಾಯಗಳಿಗೆ, ಆದಿವಾಸಿ ಸಮುದಾಯಗಳಿಗೆ, ಸ್ಲಂ ನಿವಾಸಿಗಳಿಗೆ, ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗೆ ಹಾಗೂ ಇತರ ಶೋಷಿತ ಸಮುದಾಯಗಳಿಗೆ ಆರೋಗ್ಯ ಸೌಲಭ್ಯ ಉಚಿತವಾಗಿ ಸಿಗಬೇಕು. ಇದಕ್ಕಾಗಿ ಹಲವಾರು ಸಂಘಟನೆಗಳ ಸಹಭಾಗಿತ್ವದಲ್ಲಿ ರಾಜ್ಯಾದ್ಯಂತ, ಎಲ್ಲಾ 31 ಜಿಲ್ಲೆಗಳಲ್ಲಿ ಜಾಥಾ ನಡೆಯುತ್ತಿದೆ ಎಂದು ತಿಳಿಸಿದರು.
ಇದೇ ತಿಂಗಳು 13ರಂದು ಹಮ್ಮಿಕೊಂಡಿರುವ ಆರೋಗ್ಯ ಹಕ್ಕಿನ ಜಾಥಾವನ್ನು ಕೋಲಾರ ನಗರದ ಬಂಗಾರಪೇಟೆ ವೃತ್ತದಲ್ಲಿ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಗಾಂಧಿವನ, ಎಂ.ಜಿ.ರಸ್ತೆ, ಅಮ್ಮಾವಾರಿ ಪೇಟೆ ಸರ್ಕಲ್, ಮೆಕ್ಕೆ ವೃತ್ತ, ಹಳೆ ಬಸ್ನಿಲ್ದಾಣದಲ್ಲಿ ಬೀದಿ ನಾಟಕವನ್ನು ಹಮ್ಮಿಕೊಂಡಿದ ಬೀದಿ ನಾಟಕದ ಮೂಲಕ ಜನರಿಗೆ ಅರಿವು ಮೂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಕೂಡಲೇ ಸರ್ಕಾರಿ ಆಸ್ಪತ್ರೆ ಖಾಸಗೀಕರಣ (ಪಿಪಿಪಿ) ಮಾಡುವ ಯೋಜನೆ ಕೈಬಿಡಬೇಕು. ಯಾವುದೇ ಕಾರಣಕ್ಕೂ ಸರ್ಕಾರಿ ಆಸ್ಪತ್ರೆ ಖಾಸಗಿಯವರಿಗೆ ಹಸ್ತಾಂತರ ಮಾಡಬಾರದು. ಇದರ ಬದಲು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಗೊಳಿಸಬೇಕು. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿಯೊಬ್ಬರಿಗೂ ಗುಣಮಟ್ಟ ಔಷಧಗಳು ಉಚಿತವಾಗಿ ಲಭ್ಯವಾಗಬೇಕು. ಸರ್ಕಾರಿ ಆಸ್ಪತ್ರೆ ವೈದ್ಯರು ಯಾವುದೇ ಕಾರಣಕ್ಕೂ ಔಷಧಗಳನ್ನು ಹೊರಗಡೆ ಖರೀದಿಸಲು ಚೀಟಿಯನ್ನು ಬರೆದು ಕೊಡಬಾರದು. ಕರ್ನಾಟಕದಲ್ಲಿ ಆರೋಗ್ಯ ಹಕ್ಕಿನ ಕಾಯಿದೆಯನ್ನು ಜಾರಿಗೆ ತರಬೇಕು. ನಮಗೆ ಆರೋಗ್ಯ ರಕ್ಷಣೆಯನ್ನು ಮೂಲಭೂತ ಹಕ್ಕನ್ನಾಗಿ ಮಾಡುವ ಕಾನೂನು ಬೇಕಾಗಿದೆ, ಯಾವುದೇ ಸರ್ಕಾರವು ಹಿಂತೆಗೆದುಕೊಳ್ಳಬಹುದಾದ “ಯೋಜನೆ”ಯಲ್ಲ, ಖಾಸಗಿ ವಲಯದಲ್ಲಿ ಆಸ್ಪತ್ರೆಗಳ ಶುಲ್ಕವನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಹಿರಿಯ ದಲಿತ ಮುಖಂಡರಾದ ಟಿ.ವಿಜಯ್ ಕುಮಾರ್, ಪಂಡಿತ್ ಮನವೆಂಕಟಪ್ಪ, ಗಮನ ಶಾಂತಮ್ಮ, ರೈತ ಸಂಘ ಮುಖಂಡ ಅಬ್ಬಣಿ ಶಿವಣ್ಣ, ಗಾಂಧಿನಗರ ಸಿಪಿಎಂ ನಾರಾಯಣಸ್ವಾಮಿ, ಕ್ಲಾಕ್ ಟವರ್ ಇಮ್ರಾನ್, ಈ ನೆಲ ಈ ಜಲ ವೆಂಕಟಲಸಂಪತಿ, ಟಿಪ್ಪು ಸೆಕ್ಯೂಲರ್ ಸೇನೆ ಆಸಿಫ್ವುಲ್ಲಾಖಾನ್, ರೈತರ ಸಂಘದ ಆನಂದ್ ಕುಮಾರ್, ಪಕ್ರಿಯೆ ಗ್ರೇಸಿ, ಹೂವಳ್ಳಿ ನಾಗರಾಜ್, ಆರಿಫ್, ಗಮನ ಲಕ್ಷ್ಮಿ, ಗಾಂಧಿನಗರ ಮುರಳಿ, ಚಿನ್ನಮ್ಮ ಮುಂತಾದವರು ಉಪಸ್ಥಿತರಿದ್ದರು.
ಬಿ.ವೆಂಕಟಾಚಲಪತಿ
ಮೊ. 9008743256

