

ಶ್ರೀನಿವಾಸಪುರ : ಇಂದಿನ ದಿನಗಳಲ್ಲಿ ಬಹುತೇಕ ರೈತರು ಕೃಷಿಯಲ್ಲಿ ನಿರಂತರ ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಕೃಷಿಯನ್ನು ತೊರೆದು ನಗರ ಪ್ರದೇಶಗಳತ್ತ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿನ್ನಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗೆ ಅನುಕೂಲವಾಗುವಂತೆ ಪರಿಣಾಮಕಾರಿ ಕೃಷಿ ಬೆಂಬಲ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದು ಕೆಎಸ್ಎಫ್ಸಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ವಿ. ಮೋಕ್ಷ ಅವರು ಹೇಳಿದರು.
ತಾಲೂಕಿನ ನಲ್ಲಪಳ್ಳಿ ಗ್ರಾಮದಲ್ಲಿ ಶನಿವಾರ ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ರೈತರು ಗಂಭೀರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕಳೆದ ಸಾಲಿನಲ್ಲಿ ಮಾವು ಸೇರಿದಂತೆ ಹಲವು ಬೆಳೆಗಳಿಗೆ ಸಮರ್ಪಕ ಮಾರುಕಟ್ಟೆ ಬೆಲೆ ಲಭ್ಯವಾಗದ ಕಾರಣ ರೈತರು ನಷ್ಟ ಅನುಭವಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸರ್ಕಾರ ಮಾವು ಬೆಳೆಗೆ ಬೆಂಬಲ ಬೆಲೆ ಘೋಷಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಇದೇ ಮಾದರಿಯಲ್ಲಿ ರಾಗಿಯಂತಹ ಆಹಾರ ಬೆಳೆಗಳಿಗೂ ಸೂಕ್ತ ಬೆಂಬಲ ಬೆಲೆ ಘೋಷಿಸಿ ರೈತರ ಸಂಕಷ್ಟಗಳಿಗೆ ಕಾಲಕಾಲಕ್ಕೆ ಪರಿಹಾರ ಒದಗಿಸಬೇಕಿದೆ ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆಹಾರ ಶಿರಸ್ತೇದಾರ್ ಜುನೈದ್ ಅಲಾಂಖಾನ್, ತಾಲೂಕಿನಲ್ಲಿ ೪೦೪ ರೈತರು ನೋಂದಾಯಿಸಿಕೊಂಡಿದ್ದು, ಒಟ್ಟು ೭೭೪೩.೫೦ ಕ್ವಿಂಟಾಲ್ ರಾಗಿಯನ್ನು ಯಾವುದೇ ದಲ್ಲಾಳಿಗಳ ಮಧ್ಯಸ್ಥಿಕೆ ಇಲ್ಲದೆ, ಸ್ವಚ್ಛ ಹಾಗೂ ಗುಣಮಟ್ಟದ ರಾಗಿಯನ್ನು ನೇರವಾಗಿ ರೈತರಿಂದ ಖರೀದಿಸಲಾಗುವುದು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ತೂತಿನಲ್ಲಿ ಆರ್. ನಾರಾಯಣಸ್ವಾಮಿ, ತಾಲೂಕು ರೈತ ಸಂಪರ್ಕ ಕಾರ್ಯದರ್ಶಿ ರಮೇಶ್ಗೌಡ, ಆಹಾರ ನಿರೀಕ್ಷಕ ಹಬೀಬ್ ಉರ್ ರೆಹಮಾನ್, ನಿಗಮದ ಅಧಿಕಾರಿ ರಾಜಪ್ಪ, ನ್ಯಾಯಬೆಲೆ ಅಂಗಡಿ ಮಾಲೀಕ ಮಂಜುನಾಥ್, ನಿಗಮದ ಸಿಬ್ಬಂದಿ ಡಿ. ವೆಂಕಟರಮಣಪ್ಪ ಹಾಗೂ ಮುಖಂಡ ಮನು ಉಪಸ್ಥಿತರಿದ್ದರು.

