

ಬೆಂಗಳೂರು : ಸಾರ್ವಜನಿಕರ ಸುರಕ್ಷತೆ ಹಾಗೂ ಕಾನೂನು ಜಾರಿಗೆ ನಿರಂತರ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ವೈಯಕ್ತಿಕ ಬದುಕಿನ ಮಹತ್ವದ ಕ್ಷಣಗಳಿಗೆ ಗೌರವ ನೀಡುವ ನಿಟ್ಟಿನಲ್ಲಿ, ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವದ ದಿನ ರಜೆ ಕೋರಿದಲ್ಲಿ ಕಡ್ಡಾಯವಾಗಿ ಮಂಜೂರು ಮಾಡಬೇಕೆಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಆರಕ್ಷಕ ಮಹಾನಿರೀಕ್ಷಕರಾದ ಡಾ. ಎಂ.ಎ. ಸಲೀಂ ಐಪಿಎಸ್ ಅವರು ಸುತ್ತೋಲೆ ಹೊರಡಿಸಿದ್ದಾರೆ.
ಕಠಿಣ ಪರಿಸ್ಥಿತಿಗಳಲ್ಲಿಯೂ ನಿರಂತರ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಭಾವನಾತ್ಮಕ ಪುನಶ್ಚೇತನ ಹಾಗೂ ಕುಟುಂಬದೊಂದಿಗೆ ಗುಣಮಟ್ಟದ ಸಮಯ ಕಳೆಯಲು ಅವಕಾಶ ಕಲ್ಪಿಸುವುದು ಈ ಆದೇಶದ ಉದ್ದೇಶವಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಇದರಿಂದ ಕರ್ತವ್ಯ ಮತ್ತು ವೈಯಕ್ತಿಕ ಜೀವನದ ಸಮತೋಲನ ಸಾಧಿಸಲು ನೆರವಾಗುವುದರೊಂದಿಗೆ, ಮನೋಬಲ ಹೆಚ್ಚಳ, ಒತ್ತಡ ಕಡಿತ ಹಾಗೂ ಕಾರ್ಯತೃಪ್ತಿ ಮತ್ತು ಉತ್ಪಾದಕತೆ ವೃದ್ಧಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.
ಪೊಲೀಸ್ ಸಿಬ್ಬಂದಿಯ ತ್ಯಾಗ ಹಾಗೂ ಸೇವೆಯನ್ನು ಗುರುತಿಸುವ ಮಾನವೀಯ ಕ್ರಮವಾಗಿದ್ದು, ಇದರ ಮೂಲಕ ಪಡೆಗೆ ನಿಷ್ಠೆ, ಶಿಸ್ತು ಮತ್ತು ಕಾರ್ಯಕ್ಷಮತೆ ಮತ್ತಷ್ಟು ಬಲಪಡಲಿದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. ಈ ಸೂಚನೆಯನ್ನು ಎಲ್ಲಾ ಘಟಕಾಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ನಿರ್ದೇಶನ ನೀಡಲಾಗಿದೆ.


