

ಕೋಟೇಶ್ವರ : ಜಿಲ್ಲಾ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಬೀಜಾಡಿ-ಗೋಪಾಡಿ ಮಿತ್ರ ಸಂಗಮದ ೨೯ನೇ ವಾರ್ಷಿಕೋತ್ಸವ ಜ.೨೪ರಂದು ಶನಿವಾರ ಸಂಜೆ ೭ಗಂಟೆಗೆ ಬೀಜಾಡಿ ಮಿತ್ರಸೌಧ ವಠಾರ ಜರುಗಲಿದೆ. ಈ ಸಂದರ್ಭದಲ್ಲಿ ಸಮಾಜ ಸೇವಕ,ಕೋಟೇಶ್ವರ ಗ್ರಾಮ ಪಂಚಾಯಿತಿ ಸದಸ್ಯ ಲೋಕೇಶ್ ಅಂಕದಕಟ್ಟೆ ಅವರಿಗೆ ಸಂಸ್ಥೆಯ ವತಿಯಿಂದ ಪ್ರತಿವರ್ಷ ಕೊಡಮಾಡುವ ಊರ ಗೌರವದ ನಮ್ಮೂರ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಾಧಕರಾದ ಉಡುಪಿ ಜಿಲ್ಲಾ ಶಿಕ್ಷಕ ತರಬೇತಿ ಕೇಂದ್ರ ನಿವೃತ್ತ ಉಪನ್ಯಾಸಕ ಪ್ರಭಾಕರ ಮಿತಂತ್ಯಾಯ, ಬೀಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ ಪೂಜಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಣೇಶ, ಕ್ರೀಡಾಪಟುಗಳಾದ ಕು.ರಚಿತಾ ಹತ್ವಾರ್, ಕು.ಜನನಿ, ಕು.ಅನನ್ಯ, ಯಶಸ್ ವೈ ಆಚಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಸಮಾರಂಭದ ಅಧ್ಯಕ್ಷತೆಯನ್ನು ಧಾರ್ಮಿಕ ಮುಖಂಡ ಮಲ್ಯಾಡಿ ಶಿವರಾಮ ಶೆಟ್ಟಿ ವಹಿಸಲಿದ್ದಾರೆ. ಪ್ರಸಂಗಕರ್ತ,ಕಲ್ಮಾಡಿ ಆಸೆಮ್ಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಪವನ್ ಕಿರಣಕೆರೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಪ್ರತಿಭೆಗಳಿಂದ ವಿವಿಧ ವಿನೋದಾವಳಿಗಳು, ಕುಂದಾಪುರದ ಕಲಾ ಸ್ಪೂರ್ತಿ ಹವ್ಯಾಸಿ ನಾಟಕ ತಂಡದ ಸದಸ್ಯರಿಂದ ಕುಂದಗನ್ನಡದ ಹಾಸ್ಯಮಯ ನಗೆ ನಾಟಕ ಜರುಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಹೇಶ್ ಮೊಗವೀರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

