

ಬೆಂಗಳೂರು: ನಗರದ ಆಸ್ಟಿನ್ ಟೌನ್ ನೀಲಸಂದ್ರ ಪ್ರದೇಶದಲ್ಲಿರುವ ಸರ್ಕಾರಿ ಮಾದರಿ ಉರ್ದು ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಹಾಗೂ ಗಣಿತ (ಸ್ಟೆಮ್) ವಿಷಯಗಳ ಮೇಲೆ ಆಸಕ್ತಿ ಮತ್ತು ಕೌಶಲ್ಯ ಹೆಚ್ಚಿಸುವ ಉದ್ದೇಶದಿಂದ ಸ್ಥಾಪಿಸಲಾದ ಸ್ಟೆಮ್ ಲ್ಯಾಬ್ ಅನ್ನು ಶುಕ್ರವಾರ (ಜನವರಿ 16, 2025) ಬೆಳಿಗ್ಗೆ 11 ಗಂಟೆಗೆ ಭಾವ್ಯವಾಗಿ ಉದ್ಘಾಟಿಸಲಾಯಿತು.
ಈ ಸ್ಟೆಮ್ ಲ್ಯಾಬ್ನ್ನು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಯೋಜನೆಯಡಿ ಆಪ್ಟಮ್ ಸಂಸ್ಥೆಯ ಆರ್ಥಿಕ ಸಹಕಾರದೊಂದಿಗೆ, ಹೋಪ್ ಫೌಂಡೇಶನ್ ಸಂಸ್ಥೆಯು ಅನುಷ್ಠಾನಗೊಳಿಸಿದೆ.
ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಆಧುನಿಕ ವಿಜ್ಞಾನಾಧಾರಿತ ಕಲಿಕಾ ಸೌಲಭ್ಯಗಳನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಸದಸ್ಯರಾದ ಮೊಹಮ್ಮದ್ ಅಫ್ಸರ್,
ಆಪ್ಟಮ್ ಸಂಸ್ಥೆಯ ಹಿರಿಯ ನಿರ್ದೇಶಕ (OGA Operations) ಜಿಗ್ನೇಶ್ ಪಿಳ್ಳೈ,
ಹೋಪ್ ಫೌಂಡೇಶನ್
ದಕ್ಷಿಣ ಪ್ರದೇಶದ ಮಾನವ ಸಂಪನ್ಮೂಲ ಮತ್ತು ಕಾರ್ಯಕ್ರಮಗಳ ನಿರ್ದೇಶಕ ಜಾನ್ಸನ್ ಅರವೋಕಿಯನಾಥನ್, ಹೋಪ್ ಫೌಂಡೇಶನ್ ಪ್ರಾದೇಶಿಕ ನಿರ್ದೇಶಕಿ ಮಲರವಿಳಿ, ಸ್ಟೆಮ್ ಯೋಜನಾ ವ್ಯವಸ್ಥಾಪಕ ಡಾ. ಅಶೋಕ್ ಕುಮಾರ್ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ ಸೈಯದ್ ಸಾಜಿದ್ ಹುಸೈನ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅತಿಥಿಗಳು, ಸ್ಟೆಮ್ ಲ್ಯಾಬ್ ಮೂಲಕ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅಧ್ಯಯನ, ತಾರ್ಕಿಕ ಚಿಂತನೆ, ಸಮಸ್ಯೆ ಪರಿಹಾರ ಸಾಮರ್ಥ್ಯ ಮತ್ತು ಹೊಸ ಆವಿಷ್ಕಾರಗಳತ್ತ ಒಲವು ಹೆಚ್ಚಲಿದೆ ಎಂದು ಅಭಿಪ್ರಾಯಪಟ್ಟರು. ಸರ್ಕಾರಿ ಉರ್ದು ಮಾಧ್ಯಮ ಶಾಲೆಯಲ್ಲಿಯೇ ಈ ರೀತಿಯ ಸೌಲಭ್ಯ ಲಭ್ಯವಾಗುತ್ತಿರುವುದು ಶಿಕ್ಷಣ ಕ್ಷೇತ್ರದಲ್ಲಿ ಸಮಾನ ಅವಕಾಶಗಳತ್ತ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದರು.
ಸ್ಟೆಮ್ ಲ್ಯಾಬ್ನಲ್ಲಿ ವಿಜ್ಞಾನ ಪ್ರಯೋಗೋಪಕರಣಗಳು, ರೋಬೋಟಿಕ್ಸ್ ಕಿಟ್ಗಳು, ಗಣಿತ ಮಾದರಿಗಳು, ತಂತ್ರಜ್ಞಾನ ಆಧಾರಿತ ಕಲಿಕಾ ಸಾಧನಗಳನ್ನು ಅಳವಡಿಸಲಾಗಿದ್ದು, ವಿದ್ಯಾರ್ಥಿಗಳು ಪಠ್ಯಾಧಾರಿತ ಕಲಿಕೆಗೆ ಮಾತ್ರ ಸೀಮಿತವಾಗದೆ ಅನುಭವಾಧಾರಿತ ಅಧ್ಯಯನಕ್ಕೆ ಅವಕಾಶ ಪಡೆಯಲಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯದ ವೃತ್ತಿ ಆಯ್ಕೆಗಳಿಗೆ ಸಹ ನೆರವಾಗಲಿದೆ ಎಂದು ಶಿಕ್ಷಕರು ಅಭಿಪ್ರಾಯಪಟ್ಟರು.
ಶಾಲೆಯ ಮುಖ್ಯೋಪಾಧ್ಯಾಯ ಸೈಯದ್ ಸಾಜಿದ್ ಹುಸೈನ್ ಮಾತನಾಡಿ,
ಆಪ್ಟಮ್ ಹಾಗೂ ಹೋಪ್ ಫೌಂಡೇಶನ್ ಸಂಸ್ಥೆಗಳ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಈ ಲ್ಯಾಬ್ ಶಾಲೆಯ ಶೈಕ್ಷಣಿಕ ಮಟ್ಟವನ್ನು ಮತ್ತಷ್ಟು ಎತ್ತಿಹಿಡಿಯುವುದರ ಜೊತೆಗೆ ಉರ್ದು ಮಾಧ್ಯಮ ಸರ್ಕಾರಿ ಶಾಲೆಗಳಿಗೂ ಹೊಸ ಗುರುತನ್ನು ನೀಡಲಿದೆ ಎಂದು ತಿಳಿಸಿದರು.
ಸ್ಟೆಮ್ ಲ್ಯಾಬ್ ಉದ್ಘಾಟನೆಯೊಂದಿಗೆ ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಕನಸುಗಳನ್ನು ಕಾಣಲು ಆರಂಭಿಸಿದ್ದು, ಭವಿಷ್ಯದ ವಿಜ್ಞಾನಿಗಳು, ಇಂಜಿನಿಯರ್ಗಳು ಮತ್ತು ನಾವೀನ್ಯತೆಯ ಚಿಂತಕರನ್ನು ರೂಪಿಸುವ ದಿಕ್ಕಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.



