

ಸಿದ್ದರಾಮಯ್ಯ ನಂತರ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವುದು ನಿಶ್ಚಿತ – ಸಚಿವ ಬಿ.ಝೆಡ್. ಜಮೀರ್ ಅಹ್ಮದ್ ಖಾನ್
ಶ್ರೀನಿವಾಸಪುರ: ಕಾಂಗ್ರೆಸ್ ಪಕ್ಷವು ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಂತರ ಡಿ.ಕೆ.ಶಿವಕುಮಾರ್ ಅವರೇ ರಾಜ್ಯದ ಮುಖ್ಯಮಂತ್ರಿಯಾಗುವುದು ನಿಶ್ಚಿತ ಎಂದು ವಸತಿ ಸಚಿವ ಬಿ.ಝೆಡ್. ಜಮೀರ್ ಅಹ್ಮದ್ ಖಾನ್ ಹೇಳಿದರು.
ತಾಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ಶುಕ್ರವಾರ ನೂತನವಾಗಿ ನಿರ್ಮಾಣಗೊಂಡ ನೂರಾನಿ ಮಸೀದಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ನವೆಂಬರ್ ತಿಂಗಳಲ್ಲಿ ಕ್ರಾಂತಿ ಆಗಲಿದೆ ಎಂದು ಕೆಲವರು ವದಂತಿ ಹಬ್ಬಿಸಿದ್ದರು. ಬಳಿಕ ನವೆಂಬರ್, ಡಿಸೆಂಬರ್, ಜನವರಿ ಅಥವಾ ಸಂಕ್ರಾಂತಿಯ ನಂತರ ಬದಲಾವಣೆ ಆಗಲಿದೆ ಎಂದು ಹೇಳುತ್ತಿದ್ದರು. ಇಂತಹ ವದಂತಿಗಳಿಗೆ ಅರ್ಥವಿಲ್ಲ. ನಮಗೆ ಹೈಕಮಾಂಡ್ ಇದೆ. ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಎಲ್ಲರೂ ಬದ್ಧರಾಗಿರುತ್ತೇವೆ ಎಂದು ಸ್ಪಷ್ಟಪಡಿಸಿದರು.
ಒಟ್ಟಿನಲ್ಲಿ 2028ರವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಇತಿಹಾಸವನ್ನು ಜನರ ಮುಂದೆ ಇಡಲಾಗುವುದು. ನಮ್ಮ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಮತದಾರರ ಬಳಿಗೆ ಹೋಗುತ್ತೇವೆ. 2013ರಿಂದ 2018ರವರೆಗೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿತ್ತು ಎಂದು ಜಮೀರ್ ಅಹ್ಮದ್ ಖಾನ್ ತಿಳಿಸಿದರು.
ಹಿಂದಿನ ಕಾಂಗ್ರೆಸ್ೇತರ ಸರ್ಕಾರಗಳು ಹಾಗೂ ಪ್ರಸ್ತುತ ಕೇಂದ್ರ ಸರ್ಕಾರಕ್ಕಿಂತಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರವು ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ವರ್ಗಗಳಿಗೂ ಹೆಚ್ಚಿನ ಒತ್ತು ನೀಡಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ಕೆ.ಆರ್. ರಮೇಶ್ ಕುಮಾರ್, ಜೀವನ ಶಾಶ್ವತವಲ್ಲ; ನಾವು ಮಾಡುವ ಒಳ್ಳೆಯ ಕೆಲಸಗಳೇ ಶಾಶ್ವತವಾಗಿರುತ್ತವೆ ಎಂದರು. ಗ್ರಂಥಾಲಯಗಳಲ್ಲಿ ಎಲ್ಲ ಧರ್ಮಗಳ ಗ್ರಂಥಗಳನ್ನು ಇಟ್ಟು, ಎಲ್ಲರಿಗೂ ಪುಸ್ತಕ ಓದುವ ಅವಕಾಶ ಕಲ್ಪಿಸಬೇಕು. ಗ್ರಂಥಾಲಯ ದೇವಾಲಯದಂತೆಯೇ ಇರಬೇಕು; ಇಲ್ಲಿ ಎಲ್ಲರೂ ಆಹ್ವಾನಿತರಾಗಿರಬೇಕು ಎಂದು ಸಲಹೆ ನೀಡಿದರು.
ಮಸೀದಿ ಹಾಗೂ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡ ಅವರು, ವಸತಿ ಸಚಿವರು ಹಾಗೂ ಮುಖ್ಯಮಂತ್ರಿಗಳ ನಡುವಿನ ಒಡನಾಟ ಉತ್ತಮವಾಗಿದ್ದು, ಸಚಿವರು ತಮ್ಮಿಂದಾದಷ್ಟು ಜನಪರ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮೌಲಾನಾ ಸಯ್ಯದ್ ತನ್ವೀರ್ ಹಾಶ್ಮಿ, ಎಂಎಲ್ಸಿ ಜನಾಬ್ ಅಬ್ದುಲ್ ಜಬ್ಬಾರ್, ಮೌಲಾನಾ ಶಫಿ ಸಾದಿ, ಮಾಜಿ ವಕ್ಫ್ ಮಂಡಳಿ ಅಧ್ಯಕ್ಷ ಜನಾಬ್ ಅನ್ವರ್ ಬಾಷಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್. ಅಕ್ಬರ್ ಶರೀಫ್, ಮಾಜಿ ಪುರಸಭೆ ಅಧ್ಯಕ್ಷ ಟಿ.ಎಂ.ಬಿ. ಮುಕ್ತಾರ್ ಅಹ್ಮದ್, ಕೋಲಾರ ಜಿಲ್ಲಾ ಮಾಜಿ ವಕ್ಫ್ ಮಂಡಳಿ ಅಧ್ಯಕ್ಷ ನಿಸಾರ್ ಅಹ್ಮದ್ ಖಾನ್, ಲಕ್ಷ್ಮಿಪುರ ಗ್ರಾಮದ ಮಸೀದಿ ಅಧ್ಯಕ್ಷ ಅಬ್ದುಲ್ ರಿಯಾಜ್ ಖಾನ್, ಕಾರ್ಯದರ್ಶಿ ಅಪ್ಸರ್ ಪಾಷ, ಸದಸ್ಯರಾದ ಸೈಯದ್ ಜಮೀಲ್ ಪಾಷ, ಸಮೀವುಲ್ಲಾ, ಶೇಖ್ ಇಸ್ಮಾಯಿಲ್ ಹಾಗೂ ಮುಖಂಡರಾದ ಗೌನಿಪಲ್ಲಿ ಬಕ್ಷು ಸಾಬ್, ಅಕ್ಷಂ ಪಾಷ, ಸೈಯದ್ ಯಾಸಿನ್ ಸೇರಿದಂತೆ ಹಲವರು ಭಾಗವಹಿಸಿದ್ದರು.




