

ಶ್ರೀನಿವಾಸಪುರ : ಪಟ್ಟಣದ ಜಾಕಿರ್ ಹುಸೇನ್ ಮೊಹಲ್ಲಾದ ಸರ್ಕಾರಿ ಉರ್ದು ಹಾಗೂ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲ ರೀತಿಯ ಶೈಕ್ಷಣಿಕ ನೆರವು ನೀಡಲಾಗುವುದು ಎಂದು ಎಪಿಜೆ ಅಬ್ದುಲ್ ಕಲಾಂ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಹಾಗೂ ಎಂ.ಪಿ. ಫ್ರೂಟ್ಸ್ ಮಾಲಿಕ ಅಬ್ದುಲ್ ಮುಜೀದ್ ಭರವಸೆ ನೀಡಿದರು.
ಶಾಲೆಯಲ್ಲಿ ಎಪಿಜೆ ಅಬ್ದುಲ್ ಕಲಾಂ ವೆಲ್ಫೇರ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಉರ್ದು ಶಾಲೆಯ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಸ್ಥಾನವನ್ನು ಗಳಿಸಬೇಕು ಎಂಬುದೇ ಟ್ರಸ್ಟ್ನ ಮುಖ್ಯ ಉದ್ದೇಶವಾಗಿದೆ. ಈ ದಿಶೆಯಲ್ಲಿ ಟ್ರಸ್ಟ್ ಸದಾ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಶಿಕ್ಷಕರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಬೇಕು. ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹಾಗೂ ಆತ್ಮವಿಶ್ವಾಸ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ ಎಂದು ಹೇಳಿದರು.
ಟ್ರಸ್ಟ್ ಕಾರ್ಯದರ್ಶಿ ಅಕ್ರಂ ಪಾಷ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತಮ ಹಾಗೂ ಗುಣಾತ್ಮಕ ಫಲಿತಾಂಶ ಗಳಿಸುವತ್ತ ಹೆಚ್ಚಿನ ಗಮನ ಹರಿಸಬೇಕು. ಶಿಸ್ತು, ಪರಿಶ್ರಮ ಹಾಗೂ ಆತ್ಮವಿಶ್ವಾಸವೇ ಯಶಸ್ವಿ ಜೀವನದ ಮೂಲಮಂತ್ರ ಎಂದು ಹೇಳಿದರು.
ಉಪಾಧ್ಯಕ್ಷ ಇಲಿಯಾಜ್ ಪಾಷ ಮಾತನಾಡಿ, ಉರ್ದು ಶಾಲೆಯ ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮದ ಮೂಲಕವೂ ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು. ಸರ್ಕಾರದಿಂದ ಲಭ್ಯವಿರುವ ಶೈಕ್ಷಣಿಕ ಸೌಲಭ್ಯಗಳು ಹಾಗೂ ವಿದ್ಯಾರ್ಥಿವೇತನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಟ್ರಸ್ಟ್ ಖಜಾಂಚಿ ಎಟಿಸ್ ರಿಜ್ವಾನ್ ಮಾತನಾಡಿ, ಸರ್ಕಾರದ ಸೌಲಭ್ಯಗಳ ಜೊತೆಗೆ ದಾನಿಗಳಿಂದ ದೊರೆಯುವ ನೆರವನ್ನು ಸಮರ್ಪಕವಾಗಿ ಬಳಸಿಕೊಂಡು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುನ್ನಡೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಸಂಘಟನಾ ಕಾರ್ಯದರ್ಶಿ ಇಂತಿಯಾಜ್, ಎಸ್ಡಿಎಂಸಿ ಅಧ್ಯಕ್ಷ ಇದಿಯಾತುಲ್ಲಾ ಖಾನ್, ಸದಸ್ಯ ಅಲ್ಲಾ ಬಕಾಶ್, ಮುಖ್ಯ ಶಿಕ್ಷಕ ಮಹ್ಮದ್ ಸಾದಿಕ್, ಶಿಕ್ಷಕರಾದ ರಿಯಾನಾ ಖಾನಂ, ನೂರ್ ಉನ್ನೀಸಾ, ಅಸ್ಮಾ ಸುಲ್ತಾನಾ, ಭಾರತಮ್ಮ, ನಹೀಮ್ ಉನ್ನೀಸಾ, ಚಂದ್ರಶೇಖರರೆಡ್ಡಿ, ನೂರತ್ಮ ಅಮ್ಮಜಾನ್, ಆಯಿಷಾ ಸೇರಿದಂತೆ ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

