

ಶ್ರೀನಿವಾಸಪುರ ( www.vknews.in ): ಸರ್ಕಾರಿ ಶಾಲೆಗಳ ಜಮೀನುಗಳನ್ನು ಉಳಿಸುವಲ್ಲಿ ಶಿಕ್ಷಕರು ಸಕ್ರಿಯವಾಗಿ ಕ್ರಮಕೈಗೊಳ್ಳಬೇಕು.
ಸರ್ಕಾರಿ ಶಾಲೆಗಳ ಜಮೀನುಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಕಂಡುಬಂದಲ್ಲಿ ತಕ್ಷಣವೇ ಮೇಲಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ (ಡಿಡಿಪಿಐ) ಅಲ್ಮಾಸ್ ಫರ್ವೀನ್ತಾಜ್ ಅವರು ಸೂಚಿಸಿದರು.
ಪಟ್ಟಣದ ಬಿಆರ್ಸಿ ಕಚೇರಿಯಲ್ಲಿ ಮಂಗಳವಾರ ಓದು ಕರ್ನಾಟಕ ನೈತಿಕ ಗಣಿತ, ಎಲ್ ಬಿ ಎಂ ಹಾಗೂ ಮೌಲ್ಯ ಶಿಕ್ಷಣ ವಿಷಯಗಳ ಕುರಿತು ಆಯೋಜಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇನ್ನೂ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಕೇವಲ ಮೂರು ತಿಂಗಳು ಮಾತ್ರ ಉಳಿದಿರುವ ಹಿನ್ನೆಲೆಯಲ್ಲಿ ಶೇಕಡಾ ನೂರರಷ್ಟು ಫಲಿತಾಂಶ ಸಾಧಿಸುವ ಗುರಿಯನ್ನು ಶಿಕ್ಷಕರು ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಹಾಗೂ ಸಂಜೆ ವಿಶೇಷ ತರಗತಿಗಳನ್ನು ನಡೆಸಬೇಕು. ಗಣಕ ಯಂತ್ರದ ಮೂಲಕ ಪಠ್ಯ ಸಂಬಂಧಿತ ಪಾಠಪ್ರವಚನಗಳನ್ನು ನೀಡುವಂತೆ ಶಿಕ್ಷಕರಿಗೆ ಸಲಹೆ ನೀಡಿದರು.
ಶಾಲೆಗಳಲ್ಲಿ ನಿಯಮಿತವಾಗಿ ತಾಯಂದಿರ ಸಭೆಗಳನ್ನು ನಡೆಸಬೇಕು.
ಪ್ರತಿ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯ ಬಗ್ಗೆ ಪೋಷಕರಿಗೆ ಮೊಬೈಲ್ ಮೂಲಕ ಮಾಹಿತಿ ನೀಡಬೇಕು.
ಹಿಂದಿನ ಸಾಲಿನಲ್ಲಿ ೬೨೫ ಅಂಕಗಳಲ್ಲಿ ೬೧೫ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಅನುಸರಿಸಿದ ಅಧ್ಯಯನ ವಿಧಾನಗಳನ್ನು ಪೋಷಕರಿಗೆ ವಿವರಿಸಬೇಕು ಎಂದು ಸೂಚಿಸಿದರು.
ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಅವರ ಅಧ್ಯಯನದಲ್ಲಿ ಶಿಕ್ಷಕರು ಹೆಚ್ಚಿನ ಶ್ರಮ ವಹಿಸಬೇಕು ಎಂದು ಹೇಳಿದರು.
೨೦೧೧ರಲ್ಲಿ ಶಿಕ್ಷಕ ವೃತ್ತಿಗೆ ಸೇರಿದವರು ಕಡ್ಡಾಯವಾಗಿ ಟಿಇಟಿ ಪರೀಕ್ಷೆಯನ್ನು ಉತ್ತೀರ್ಣರಾಗಬೇಕು ಎಂಬ ಮಾಹಿತಿಯನ್ನೂ ಅವರು ನೀಡಿದರು.
ಕಾರ್ಯಕ್ರಮದಲ್ಲಿ ಬಿಇಒ ಬಿ.ಸಿ. ಮುನಿಲಕ್ಷ್ಮಯ್ಯ, ಬಿಆರ್ಸಿ ಕೆ.ಸಿ. ವಸಂತ, ಬಿಐಆರ್ಟಿ ಜಿ.ವಿ. ಚಂದ್ರಪ್ಪ, ಇಸಿಒ ಕೆ.ಸಿ. ಶ್ರೀನಿವಾಸ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಎಸ್. ರೆಡ್ಡಪ್ಪ, ಕಾರ್ಯದರ್ಶಿ ರಘುನಾಥ ರೆಡ್ಡಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಜಾಂಚಿ ಸಿ. ಶಿವಣ್ಣ ಹಾಗೂ ಬಿಆರ್ಪಿ ವೆಂಕಟಾಚಲಪತಿ ಉಪಸ್ಥಿತರಿದ್ದರು.

