

ಕುಂದಾಪುರ,ನ.27: 455ವರ್ಷಗಳ ಐತಿಹಾಸಿಕ ಚರಿತ್ರೆಯುಳ್ಳ ಹೋಲಿ ರೋಜರಿ ಮಾತಾ ಇಗರ್ಜಿಯ ವಾರ್ಷಿಕ ಮಹಾ ಹಬ್ಬವು ನ. 26 ರಂದು ಮಹಾಉತ್ಸವವನ್ನು ಸಡಗರ ಸಂಭ್ರಮದ ಜೊತೆ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.
ಹಬ್ಬದ ಮಹಾ ಬಲಿದಾನದ ನೇತ್ರತ್ವವನ್ನು ವಹಿಸಿಕೊಂಡ ಶಿವಮೊಗ್ಗ ಧರ್ಮಪ್ರಾಂತ್ಯದ ಕಬಳೆ ಸಂತ ಫ್ರಾನ್ಸಿಸ್ ಸಾವೆರ್ ಚರ್ಚಿನ ಧರ್ಮಗುರು ವಂ।ರೋಮನ್ ಪಿಂಟೊ ‘ಈ ಪ್ರಪಂಚದಲ್ಲಿ ಯಾರ ಮೇಲೂ ಭರವಸೆ ಇಡಲು ಸಾಧ್ಯವಿಲ್ಲ, ಮನುಷ್ಯ ಸಂಬಂಧದ ಮೇಲೆ, ಪ್ರಪಂಚದ ವಸ್ತುಗಳ ಮೇಲೆ ಭರವಸೆ ಇಡಲು ಸಾಧ್ಯವಿಲ್ಲ, ಎಲ್ಲವೂ ಕೆಟ್ಟು ಹೋಗುತ್ತೆ. ಆದರೆ ದೇವರ ಮಾತೆ, ರೋಜರಿ ಮಾತೆಯ ಮೇಲೆ ಭರವಸೆ ಇಟ್ಟು ನಮ್ಮ ಜೀವನದ ಪಯಣ ಮಾಡಿದರೆ ಯಶಸು ಲಭಿಸುವುದು. ಮೇರಿ ಮಾತೆ ಭರವಸೆಯ ತಾರೆಯಾಗಿದ್ದಾಳೆ. ನಾವು ಜೀವನದಲ್ಲಿ ಗೊಂದಲಕ್ಕೆ ಸಿಲುಕಿದಾಗ, ಸಂರಕ್ಷಣೆ ಇಲ್ಲದಾಗ, ನಿರಾಶೆಯಾದಗ, ಒಬ್ಬಂಟಿತನ ಉಂಟಾದಾಗ ನಾವು ಮೇರಿ ಮಾತೆಯ ಹತ್ತಿರ ಪ್ರಾರ್ಥಿಸೋಣ, ಹಳೆಯ ದ್ವೇಷವನ್ನು ಮರೆತು, ಹೊಸ ಜೀವನ ಜೀವಿಸೋಣ, ದೇವರಲ್ಲಿ ಹಿಂತಿರುಗಿ ಒಳ್ಳೆಯ ಜೀವನ ಜಿವಿಸೋಣ’ ’ ಎಂದು ಅವರು ಸಂದೇಶ ನೀಡಿದರು.
ಕುಂದಾಪುರದವರೇ ಆದ ಉಡುಪಿಧರ್ಮಪ್ರಾಂತ್ಯದ ಮೊನ್ಸಿಂಝ್ಹೊರ್ ಅ।ವಂ।ಫರ್ಡಿನಾಂಡ್ ಗೊನ್ಸಾಲ್ವೆಸ್ ಬಲಿಪೂಜೆಯಲ್ಲಿ ಭಾಗವಹಿಸಿದ್ದರು. ಕುಂದಾಪುರ ಚರ್ಚಿನ ಧರ್ಮಗುರು ಅ|ವಂ|ಪೌಲ್ ರೇಗೊ ಬಲಿ ಪೂಜೆಯಲ್ಲಿ ಭಾಗವಹಿಸಿ ಹಬ್ಬದ ಶುಭಾಶಯಗಳನ್ನು ನೀಡಿ ಮತ್ತು ಧನ್ಯವಾದಗಳನ್ನು ಅರ್ಪಿಸಿದರು, ಗಂಗೊಳ್ಳಿ ಚರ್ಚಿನ ಧರ್ಮಗುರು ವಂ| ತೋಮಸ್ ರೋಶನ್ ಡಿಸೋಜಾ ಧರ್ಮಗುರುಗಳಿಗೆ ಶುಭಾಷಯ ಅರ್ಪಿಸುತ್ತಾ, ಅ|ವಂ|ಪೌಲ್ ರೇಗೊ ನಮ್ಮನೆಲ್ಲ ಉತ್ತಮ ರೀತಿಯಲಿ ಮುನ್ನಡೆಸಿಕೊಂಡು ಹೋಗುತಿದ್ದಾರೆ, ಕುಂದಾಪುರದ ದೇವ ಪ್ರಜೆಗಳಾದ ನೀವು ದೇವರ ಸ್ಥುತಿಯಲ್ಲಿ, ಮತ್ತು ಚಟುವಟಿಕೆಳಲ್ಲಿ ಉತ್ತಮವಾಗಿ ಸ್ಪಂದಿಸುತ್ತೀರಿ ’ ಎಂದು ತಿಳಿಸಿದರು. ಕುಂದಾಪುರ ವಲಯದ ಧರ್ಮಕೇಂದ್ರಗಳ ಅನೇಕ ಧರ್ಮಗುರುಗಳು, ಕಟ್ಕೆರೆ ಕಾರ್ಮೆಲ್ ಸಂಸ್ಥೆಯ ಧರ್ಮಗುರುಗಳು, ಅತಿಥಿ ಧರ್ಮಗುರುಗಳು, ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯಾ ಮತ್ತು ಧರ್ಮಭಗಿನಿಯರು, ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಗುರಿಕಾರರು, ಪಾಲನ ಮಂಡಳಿ ಸದಸ್ಯರು ಹಾಗೇ ಬಹು ಸಂಖ್ಯೆಯ ಭಕ್ತಾಧಿಗಳು ರೋಜರಿ ಮಾತೆಯ ವಾರ್ಷಿಕ ಜಾತ್ರೆಯ ದಿವ್ಯ ಬಲಿಪೂಜೆಯಲ್ಲಿ ಭಾಗಿಯಾದರು.























































































