

ಶ್ರೀನಿವಾಸಪುರ : ಗ್ಯಾರಂಟಿ ಯೋಜನೆಗಳು ತಾಲ್ಲೂಕಿನ ನಾಗರಿಕರಿಗೆ ಯಾವ ಮಟ್ಟಿನಲ್ಲಿ ತಲುಪುತ್ತಿವೆ ಹಾಗೂ ಜಾರಿಯ ಸ್ಥಿತಿ ಹೇಗಿದೆ ಎಂಬುದನ್ನು ಪರಿಶೀಲಿಸಲು ಈ ಸಭೆಯನ್ನು ಕರೆಯಲಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಎ.ವಿ. ಮನೋರ್ ಹೇಳಿದರು.
ಬುಧವಾರ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ತಾಲ್ಲೂಕು ಮಟ್ಟದ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದಿಂದ ಬಿಡುಗಡೆಗೊಳ್ಳುವ ಅನುದಾನ ಯಾವುದೇ ಕಾರಣಕ್ಕೂ ದುರಪಯೋಗವಾಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಸಭೆಯಲ್ಲಿ ಮಾತನಾಡಿದ ಮನೋರ್, ನ್ಯಾಯಬೆಲೆ ಅಂಗಡಿಗಳಲ್ಲಿ ಕೆಲವುಡೆ 10 ರೂ. ವಸೂಲಿ ಮಾಡಲಾಗುತ್ತಿದೆ ಎಂಬ ದೂರು ಬಂದಿರುವ ಹಿನ್ನೆಲೆಯಲ್ಲಿ, ಪ್ರತಿ ಶನಿವಾರ ಬೆಳಗ್ಗೆ 8 ರಿಂದ 10 ಗಂಟೆವರೆಗೆ ಆಹಾರ ಇಲಾಖೆ ನಿರ್ದೇಶಕ ಹಾಗೂ ಗ್ಯಾರಂಟಿ ಯೋಜನೆ ಸದಸ್ಯರ ತಂಡವು ತಾಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಗಳನ್ನು ಪರಿಶೀಲಿಸಬೇಕು ಎಂದು ಆದೇಶಿಸಿದರು.
ಇದೇ ಸಂದರ್ಭದಲ್ಲಿ ಮುಂದಿನ ಎರಡು ತಿಂಗಳ ಸಭೆಗೆ ಐದು ಇಲಾಖೆಗಳು ಸ್ಥಿತಿಗತಿ ವರದಿಗಳನ್ನು ಕಡ್ಡಾಯವಾಗಿ ತರಬೇಕೆಂದು ಸೂಚಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮತ್ತು ಯೋಜನೆ ಕಾರ್ಯದರ್ಶಿ ಕೆ. ಸರ್ವೇಶ್ ಮಾತನಾಡಿ, ಆಹಾರ ಇಲಾಖೆಯಲ್ಲಿ ಹಿಂದಿನ ಸಭೆಯಲ್ಲಿ ಚರ್ಚಿಸಿದ್ದ 6 ಅಂಶಗಳನ್ನು ಪಾಲನೆ ಮಾಡಲಾಗಿದೆ. ಉಳಿದ 6–7 ಅಂಶಗಳು ಇನ್ನೂ ಜಾರಿಯಾಗಿಲ್ಲ. ಮುಂದಿನ ಸಭೆಯೊಳಗೆ ಎಲ್ಲ ಅಂಶಗಳು ಜಾರಿಯಾಗುವಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದರು.
ಬಿಸ್ಕಾಂ ವಿಭಾಗದಲ್ಲಿ 3,374 ಫಲಾನುಭವಿಗಳು ಯೋಜನೆ ವ್ಯಾಪ್ತಿಯಿಂದ ಹೊರಗುಳಿದಿರುವುದು ಗಮನಕ್ಕೆ ಬಂದಿದ್ದು, ಅವರನ್ನು ಯೋಜನೆಗೆ ಸೇರಿಸುವ ಪ್ರಕ್ರಿಯೆ ತಕ್ಷಣ ಆರಂಭಿಸಬೇಕೆಂದು ತಿಳಿಸಲಾಗಿದೆ. ಸಾರಿಗೆ ಇಲಾಖೆ ಕಾರ್ಯಚಟುವಟಿಕೆ ತೃಪ್ತಿಕರವಾಗಿದ್ದು, ಇನ್ನಷ್ಟು ಸುಧಾರಣೆಗಾಗಿ ನಿರ್ವಾಹಕರಿಗೆ ಸೂಚಿಸಲಾಗಿದೆ.
ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 3.9% ಫಲಾನುಭವಿಗಳು ಹೊರಗುಳಿದಿದ್ದು, ಅವರ ಮನೆಗಳಿಗೆ ಭೇಟಿಯಾಗಿ ಹೊರಗುಳಿದ ಕಾರಣಗಳನ್ನು ಪತ್ತೆಹಚ್ಚಿ ಮುಂದಿನ ಸಭೆಯಲ್ಲಿ ವಿವರ ನೀಡಬೇಕು ಎಂದು ಆದೇಶಿಸಲಾಗಿದೆ.
ಯುವ ನಿಧಿ ಬಗ್ಗೆ ಮಾತನಾಡಿದ ಸರ್ವೇಶ್, ಪದವಿ, ಐಟಿಐ, ಡಿಪ್ಲೊಮಾ ಓದಿರುವ ಯುವಕರನ್ನು ಗುರುತಿಸಿ ಪಟ್ಟಿ ಮಾಡಲು ಸಂಬಂಧಿಸಿದ ಇಲಾಖೆಗೆ ಸೂಚಿಸಲಾಗಿದೆ ಎಂದರು.
ಪ್ರಸ್ತುತ 96.1% ಫಲಾನುಭವಿಗಳು ಗ್ಯಾರಂಟಿ ಯೋಜನೆಗಳನ್ನು ಬಳಸುತ್ತಿದ್ದಾರೆ.
ಉಳಿದ ನಾಗರಿಕರೂ ಪೂರ್ಣ ಪ್ರಯೋಜನ ಪಡೆಯುವಂತೆ ಶೇಕಡಾ 100% ಗ್ಯಾರಂಟಿ ಯೋಜನೆ ಜಾರಿಗೆ ಕ್ರಮ ಕೈಗೊಳ್ಳುವುದಾಗಿ ಸಭೆಯಲ್ಲಿ ತಿಳಿಸಲಾಯಿತು.
ಸಭೆಯಲ್ಲಿ ಗ್ಯಾರಂಟಿ ಯೋಜನೆ ಸದಸ್ಯರಾದ ಎಸ್.ಎನ್. ಶ್ರೀನಿವಾಸ್, ಫಯಾಜ್ ಅಹ್ಮದ್, ಚಾಂದಪಾಷ, ವೆಂಕಟರಮಣಾರೆಡ್ಡಿ, ಶಂಕರ ಎ.ಯು, ಮುನಿರಾಜು, ಕೃಷ್ಣಾರೆಡ್ಡಿ, ಶಿವರಾಮಶರ್ಮ.ಆರ್, ಬಿ.ಎಲ್. ವೆಂಕಟರೆಡ್ಡಿ, ಸುರೇಶ್, ವೆಂಕಟಾದ್ರಿ ಡಿ.ಎಸ್, ರಾಮಚಂದ್ರಪ್ಪ, ವೇಣುಗೋಪಾಲ್ ಎಸ್.ಎಲ್, ವಿಶ್ವನಾಥ್ ಕೆ.ಎಸ್, ತಾ.ಪಂ. ವ್ಯವಸ್ಥಾಪಕ ಮಂಜುನಾಥ್ ಹಾಗೂ ಸಿಬ್ಬಂದಿ ಕೆ. ಅರುಣದೇವಿ, ಕೆ.ಎಂ. ಶ್ರೀನಾಥ್, ಸುದರ್ಶನ್, ಕಲ್ಯಾಣಿ ಉಪಸ್ಥಿತರಿದ್ದರು.

