

ಶ್ರೀನಿವಾಸಪುರ : ಪದೇ ಪದೇ ಅರಣ್ಯ ಇಲಾಖೆ ರೈತರ ಭೂಮಿಯನ್ನು ಕಿತ್ತುಕೊಳ್ಳುವದರ ಮೂಲಕ ಹಿಂಸೆ ಮಾಡುತ್ತಿದ್ದು ಇದನ್ನ ಪ್ರಾಂತ ರೈತ ಸಂಘ ಖಂಡಿಸುತ್ತಿದೆ ಎಂದು ಕೆಪಿಆರ್ಎಸ್ ಸಂಘದ ರಾಜ್ಯ ಉಪಾಧ್ಯಕ್ಷ ಪಿ.ಆರ್. ಸೂರ್ಯನಾರಾಯಣ ಹೇಳಿದರು.
ಪಟ್ಟಣದ ಶಂಕರಮಠದ ರಸ್ತೆಯಲ್ಲಿನ ಕೆಪಿಆರ್ಎಸ್ ರೈತ ಸಂಘದ ಕಚೇರಿಯಲ್ಲಿ ಮಂಗಳವಾರ ಅರಣ್ಯ ಇಲಾಖೆವತಿಯಿಂದ ರೈತರನ್ನ ಒಕ್ಕಲೆಬ್ಬಿಸುತ್ತಿರುವುದನ್ನ ವಿರೋಧಿಸಿ ಪತ್ರಿಕಾ ಗೋಷ್ಟಿ ನಡೆಸಿ ಮಾತನಾಡಿದರು.
ಈ ಹಿಂದೆ 2021 ಇಸ್ವಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿ ಸರ್ಕಾರದೊಂದಿಗೆ ಸಮಾಲೋಚಿಸದೆ ತಮ್ಮದೇ ಆದ ಕಾನೂನು ಬಾಹಿರ ರೀತಿಯಲ್ಲಿ ನಡೆದುಕೊಂಡಿರುವುದು ಸರಿಯಾದ ಮಾರ್ಗವಲ್ಲ. ರೈತರಿಗೆ ಸರ್ಕಾರವೇ ಭೂಮಿಯನ್ನ ಮಂಜೂರು ಮಾಡಿದ್ದು ಅದನ್ನ ಪುನಃ ಅರಣ್ಯ ಇಲಾಖೆಯು ಭೂಮಿಯನ್ನ ವಶಪಡಿಸಿಕೊಂಡಿರುವುದು ಸರಿಯಲ್ಲ.
ಶ್ರೀನಿವಾಸಪುರ ತಾಲೂಕಿನ ಸುಮಾರು 97 ಗ್ರಾಮಗಳ 25 ಸಾವಿರ ಎಕರೆ ಭೂಮಿಯನ್ನ ಒಂದೇ ರಾತ್ರಿ ಅರಣ್ಯಿಕರಣಕ್ಕೆ ಸೇರಿಸಿಬಿಡುತ್ತಾರೆ. ಇದರಿಂದ ರೈತರು ಕಂಗಲಾಗಿ ಹೋಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು, ನ್ಯಾಯಾಲಯದಲ್ಲಿ ನ್ಯಾಯಾದೀಶರು ಸಹ ಅರಣ್ಯ ಅಧಿಕಾರಿಗೆ ಚೀಮಾರಿ ಹಾಕಿದ್ದರು. ನಂತರದ ದಿನಗಳಲ್ಲಿ ಪುನಃ ರೈತರ ಜಮೀನು ಕಿತ್ತುಕೊಳ್ಳುವದರ ಮೂಲಕ ದಮನಕಾರ್ಯಕ್ಕೆ ಮುಂದಾಗಿದ್ದು, ಇದನ್ನ ಪ್ರಾಂತ ರೈತಸಂಘ ಖಂಡಿಸುತ್ತಿದೆ ಎಂದರು. ಜಿಲ್ಲೆಯ ಹಿರಿಯ ಅಧಿಕಾರಿಗಳು ಮಧ್ಯ ಪ್ರವೇಶಿಸಿ ರೈತರಿಗೆ ನ್ಯಾಯದೊರಕಿಸಬೇಕು ಎಂದು ಮನವಿ ಮಾಡಿದರು.
ಕೆಪಿಆರ್ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟೆ ನವೀನ್ಕುಮಾರ್, ಶ್ರೀನಿವಾಸಪುರ ಭೂಮಿಹೋರಾಟ ಸಮಿತಿ ಮುಖಂಡ ಶಂಕರಪ್ಪ, ಕೋಲಾರ ತಾಲೂಕು ಭೂಮಿ ಹೋರಾಟ ಸಮಿತಿ ಮುಖಂಡ ಹರಟಿ ಪ್ರಕಾಶ್, ಮುಖಂಡರಾದ ಗುಲ್ಜರ್ಪಾಷ, ವೆಂಕಟಸ್ವಾಮಿ ಇದ್ದರು.

