

ಬೆಂಗಳೂರು : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಯ ಸಮೀಕ್ಷೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ, ಶಾಲಾ ಶಿಕ್ಷಣ ಇಲಾಖೆಯು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಸಮಯವನ್ನು ತಾತ್ಕಾಲಿಕವಾಗಿ ಮರುನಿಗದಿಪಡಿಸುವ ಆದೇಶ ಹೊರಡಿಸಿದೆ.
ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸುರಲ್ಕರ್ ವಿಕಾಸ್ ಕಿಶೋರ್ (ಭಾ.ಆ.ಸೇ) ಅವರು ಹೊರಡಿಸಿದ ಜ್ಞಾಪನದ ಪ್ರಕಾರ, ಸಮೀಕ್ಷಾ ಕಾರ್ಯಕ್ಕೆ ಶಿಕ್ಷಕರನ್ನು ನಿಯೋಜಿಸಿರುವುದರಿಂದ ವಿದ್ಯಾರ್ಥಿಗಳ ಪಾಠ ಕ್ರಮ ಕುಂಠಿತವಾಗದಂತೆ ಹೊಸ ವೇಳಾಪಟ್ಟಿ ಜಾರಿಗೊಳಿಸಲಾಗಿದೆ.
ಸಮೀಕ್ಷೆ ಗ್ರೇಟರ್ ಬೆಂಗಳೂರು ಮಹಾನಗರ ಪ್ರದೇಶದಲ್ಲಿ ಅಕ್ಟೋಬರ್ 4ರಿಂದ ಹಾಗೂ ರಾಜ್ಯದ ಇತರೆ ಭಾಗಗಳಲ್ಲಿ ಸೆಪ್ಟೆಂಬರ್ 22ರಿಂದ ಆರಂಭವಾಗಿದೆ. ಸಮೀಕ್ಷೆಯನ್ನು ಪೂರ್ಣಗೊಳಿಸಲು ಇನ್ನೂ ಕಾಲಾವಕಾಶ ಅಗತ್ಯವಿರುವ ಹಿನ್ನೆಲೆಯಲ್ಲಿ, ರಜಾ ಅವಧಿಯ ನಂತರವೂ ಕಾರ್ಯ ಮುಂದುವರಿಯಲಿದೆ.
ಹೊಸ ಶಾಲಾ ಸಮಯ ಹೀಗಿದೆ:
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ: ಅ. 8ರಿಂದ 24ರ ವರೆಗೆ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಪಾಠಗಳು ಬೆಳಿಗ್ಗೆ 8.00 ರಿಂದ ಮಧ್ಯಾಹ್ನ 1.00 ರವರೆಗೆ ನಡೆಯಲಿವೆ. ಬಳಿಕ ಶಿಕ್ಷಕರು ಸಮೀಕ್ಷಾ ಕಾರ್ಯದಲ್ಲಿ ತೊಡಗಿಕೊಳ್ಳಬೇಕು.
ರಾಜ್ಯದ ಇತರೆ ಭಾಗಗಳಲ್ಲಿ: ಅ. 8ರಿಂದ 12ರ ವರೆಗೆ ಶಾಲಾ ತರಗತಿಗಳು ಬೆಳಿಗ್ಗೆ 8.00 ರಿಂದ ಮಧ್ಯಾಹ್ನ 1.00 ರವರೆಗೆ ನಡೆಯಲಿದ್ದು, ನಂತರ ಶಿಕ್ಷಕರು ಸಮೀಕ್ಷಾ ಕಾರ್ಯ ನಿರ್ವಹಿಸಲಿದ್ದಾರೆ. ರಜಾದಿನಗಳಲ್ಲಿಯೂ ಸಮೀಕ್ಷೆ ಕೈಗೊಳ್ಳಲಾಗುವುದು.
ಆಯುಕ್ತರು ನೀಡಿದ ನಿರ್ದೇಶನದಲ್ಲಿ, ಶಾಲಾ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪಾಠ ಕ್ರಮದ ನಿರಂತರತೆಯನ್ನು ಕಾಪಾಡಿಕೊಳ್ಳಬೇಕು ಮತ್ತು ಕಾಲಕಾಲಕ್ಕೆ ಸರ್ಕಾರದಿಂದ ಬರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಲಾಗಿದೆ.
ಈ ಆದೇಶದಿಂದ ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಹೊಸ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸಲಿವೆ.



