

ಕೋಲಾರ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಕೋಲಾರ ಘಟಕವು ಪ್ರಸಕ್ತ ಸಾಲಿನಲ್ಲಿ ವಿವಿಧ ಯೋಜನೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಶ್ರಮ ಶಕ್ತಿ ಸಾಲ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ವೃತ್ತಿ ಪ್ರೋತ್ಸಾಹ ಯೋಜನೆ, ವಿದೇಶಿ ವ್ಯಾಸಂಗ ಸಾಲ ಯೋಜನೆ, ರೇಷ್ಮೆ ನೂಲು ಬಿಚ್ಚಾಣಿಕೆ ಉದ್ಯಮ ಪ್ರೋತ್ಸಾಹ ಯೋಜನೆ, ಸಾಂತ್ವಾನ ಯೋಜನೆ ಹಾಗೂ ವ್ಯಾಪಾರ/ಉದ್ಯಮಗಳಿಗೆ ನೇರಸಾಲ ಯೋಜನೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಅರ್ಹರು ಅರ್ಜಿ ಸಲ್ಲಿಸಬಹುದು.
ಅರ್ಜಿಗಳನ್ನು ಆನ್ಲೈನ್ ಮೂಲಕ www.kmdconline.karnataka.gov.in ವೆಬ್ಸೈಟ್ನಲ್ಲಿ ಅಕ್ಟೋಬರ್ 16ರೊಳಗೆ ಸಲ್ಲಿಸಬೇಕಾಗಿದೆ. ಅರ್ಜಿದಾರರು ರಾಜ್ಯದ ಖಾಯಂ ನಿವಾಸಿಯಾಗಿದ್ದು, ಮತೀಯ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು. ಕುಟುಂಬದ ವಾರ್ಷಿಕ ಆದಾಯ ರೂ.6 ಲಕ್ಷದೊಳಗೆ ಇರಬೇಕು. ವಯೋಮಿತಿ ಕನಿಷ್ಠ 18 ವರ್ಷದಿಂದ ಗರಿಷ್ಠ 55 ವರ್ಷಗಳವರೆಗೆ ನಿಗದಿಪಡಿಸಲಾಗಿದೆ.
ಕುಟುಂಬದ ಯಾರೂ ಕೇಂದ್ರ ಅಥವಾ ರಾಜ್ಯ ಸರ್ಕಾರಿ ನೌಕರರಾಗಿರಬಾರದು. ಅರ್ಜಿದಾರರು ಆಧಾರ್ ಜೊಡನೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು. ಆಧಾರ್ ಕಾರ್ಡ್ನಲ್ಲಿರುವಂತೆ ಹೆಸರು, ಜಾತಿ-ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ಬುಕ್ ಮೊದಲಾದ ದಾಖಲೆಗಳಲ್ಲಿ ಹೊಂದಾಣಿಕೆಯಾಗಿರಬೇಕು.
ಒಮ್ಮೆ ನಿಗಮದ ಯಾವುದೇ ಯೋಜನೆ (ಶೈಕ್ಷಣಿಕ ಸಾಲ ಹೊರತುಪಡಿಸಿ) ಸೌಲಭ್ಯ ಪಡೆದಿದ್ದವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸಾಲಕ್ಕೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕೋಲಾರದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯ ದೂರವಾಣಿ ಸಂಖ್ಯೆ 08152-200786 ಅನ್ನು ಸಂಪರ್ಕಿಸಲು ಸೂಚಿಸಲಾಗಿದೆ.

