

ಶ್ರೀನಿವಾಸಪುರ: ಪಟ್ಟಣದ ಪುರಸಭೆ ಕಚೇರಿಯಲ್ಲಿ ಸೋಮವಾರ ಜಿಲ್ಲಾ ಲೀಡ್ ಬ್ಯಾಂಕ್ ವತಿಯಿಂದ ಪೌರಕಾರ್ಮಿಕರಿಗಾಗಿ ವಿಮೆ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ನಗರಾಭಿವೃದ್ಧಿ ಪ್ರಾಧಿಕಾರ ಯೋಜನೆ ನಿರ್ದೇಶಕಿ ಎಸ್. ಅಂಬಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ಪೌರಕಾರ್ಮಿಕರು ಕುಟುಂಬದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ವಿಮೆ ಮಾಡಿಸಿಕೊಳ್ಳಬೇಕು. ಇದರಿಂದ ಅನಿರೀಕ್ಷಿತ ಆರ್ಥಿಕ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ” ಎಂದು ಸಲಹೆ ನೀಡಿದರು.
ಅವರು ಪುರಸಭೆ ಆವರಣದಲ್ಲಿರುವ ಪುಡ್ ಕೋರ್ಟ್ ಹಾಗೂ ಪೌರಕಾರ್ಮಿಕರ ವಿಶ್ರಾಂತಿ ಕೊಠಡಿಯನ್ನು ವೀಕ್ಷಿಸಿ, ಕಾರ್ಮಿಕರಿಗೆ ಗ್ಲೌಸ್ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮಹಾದೇವ ಜೋಷಿ ಮಾತನಾಡಿ, ವಿಮೆ ಯೋಜನೆಗಳ ಮಹತ್ವವನ್ನು ವಿವರಿಸಿ, ಪೌರಕಾರ್ಮಿಕರು ಸರ್ಕಾರದಿಂದ ದೊರೆಯುವ ವಿವಿಧ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ವಿ. ನಾಗರಾಜ್, ಪರಿಸರ ಅಭಿಯಂತರ ಲಕ್ಷ್ಮೀಶ, ಆರೋಗ್ಯ ಅಧಿಕಾರಿ ಸುರೇಶ್, ಎಫ್ಡಿಎ ಸಂತೋಷ, ನಾಗೇಶ್, ಬಾಲಕೃಷ್ಣ, ವೆಂಕಟೇಶ್, ಹಣಕಾಸು ಆರ್ಥಿಕ ಸಲಹೆಗಾರರು, ಮದರ್ ಸಂಸ್ಥೆಯ ಪ್ರತಿನಿಧಿಗಳು, ಎಸ್ಬಿಐ ಬ್ಯಾಂಕ್ ಉಪ ವ್ಯವಸ್ಥಾಪಕ ಭರತ್, ನಿವೃತ್ತ ವ್ಯವಸ್ಥಾಪಕ ಪಿ. ರಾಮಚಂದ್ರ ಸೇರಿದಂತೆ ಹಲವರು ಭಾಗವಹಿಸಿದ್ದರು.

