

ಹಂಗಾರಕಟ್ಟೆ ; ವ್ಯಕ್ತಿಗಳ ನಡುವಿನ ಮನಃಸ್ತಾಪಗಳು, ಹಲವು ಬಗೆಯ ನೋವುಗಳು, ನಿರಾಶೆಗಳು, ಹಣಕಾಸಿನ ಮುಗ್ಗಟ್ಟು, ಉದ್ಯೋಗ ಸಮಸ್ಯೆಗಳು, ಅತೃಪ್ತಿ, ಲೈಂಗಿಕ ಸಮಸ್ಯೆಗಳು ಇತ್ಯಾದಿ ನಾನಾ ಬಗೆಯ ಕಾರಣಗಳಿಂದ ದುಃಖಿತರಾದ ಜನ ಮಾದಕ ವಸ್ತುಗಳಿಂದ ಉಂಟು ಮಾಡುವ ಸುಖದ ಭ್ರಮೆಯಲ್ಲಿ ತಮ್ಮ ನೋವು ದುಃಖಗಳನ್ನು ಮರೆಯಲು ಪ್ರಯತ್ನ ಮಾಡುತ್ತಾ ದುಃಖವಾದಾಗಲೆಲ್ಲಾ ಮಾದಕ ವಸ್ತುಗಳನ್ನು ಸೇವಿಸುತ್ತಾ ಅದರ ದಾಸಾನು ದಾಸರಾಗಿ ಸಮಾಜಕ್ಕೆ ಕಂಟಕರಾಗಿ ಬದುಕುವ ಜನರನ್ನು ಎಚ್ಚರಿಸಬೇಕಾಗಿದೆ. ಅದು ವಿದ್ಯಾರ್ಥಿ ದೆಸೆಯಿಂದಲೇ ಜಾಗ್ರತೆಗೊಳಿಸಿದಾಗ ಮಾತ್ರ ಸ್ವಾಸ್ಥ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಶ್ರೀ ಪ್ರತಾಪ ಹೆಗ್ಡೆ, ಅಧ್ಯಕ್ಷರು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಸರಕಾರಿ ಪ್ರೌಢಶಾಲೆ ನಾಲ್ಕೂರು ಇವರು ಹೇಳಿದರು.
ಅವರು ಇತ್ತೀಚೆಗೆ ಬಾಳ್ಕುದ್ರು ಹಂಗಾರಕಟ್ಟೆ ಅಭಿವೃದ್ಧಿ ಸಂಸ್ಥೆ (ರಿ.) ಹಾಗೂ ಗ್ರಾಮ ಪಂಚಾಯತ್, ನಾಲ್ಕೂರು, ಸರಕಾರಿ ಪ್ರೌಢಶಾಲೆ ನಾಲ್ಕೂರು ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಡೆದ “ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳು ಮಾಹಿತಿ ಶಿಬಿರ-2025” ಉದ್ಘಾಟಿಸಿ ಮಾದಕ ವಸ್ತುಗಳ ಸೇವನೆ ಈಗ ವಿರಾಟ್ ರೂಪ ತಾಳಿ ವಿಶ್ವವ್ಯಾಪಿಯಾಗಿದೆ. ವಿದ್ಯಾರ್ಥಿ ಸಮುದಾಯದಲ್ಲಂತೂ ಅಪರಿಮಿತವಾಗಿ ಹೆಚ್ಚುತ್ತಲಿದೆ, ಮೋಜಿಗಾಗಿ ಕಲಿತದ್ದು ಜೀವನದ ಕೊನೆಯ ಹಂತಕ್ಕೆ ತಳ್ಳುತ್ತದೆ ಎಂದು ಎಚ್ಚರಿಸಿದರು.
ಮುಖ್ಯ ಅತಿಥಿಯಾಗಿ ಶ್ರೀ ವಿಶ್ವನಾಥ ಶೆಟ್ಟಿ, ರೋಟರಿ ಕ್ಲಬ್ ಕೊಕ್ಕರ್ಣೆ ಇವರು ಮಾತನಾಡಿ ವ್ಯಕ್ತಿ ವಿಪರೀತ ಸ್ವಾರ್ಥಿ. ಸುಖ, ಮೈ ಮನಸ್ಸುಗಳ ಕಾಮನೆಗಳನ್ನು ಹತೋಟಿಯಲ್ಲಿಡಲು ಅಸಾಧ್ಯವಾದಾಗ ಈ ಮಾದಕ ವಸ್ತುಗಳ ರಮಣೀಯ ಲೋಕಕ್ಕೆ ಹೋಗುತ್ತಾನೆ. ಆದ್ದರಿಂದ ಇದನ್ನು ಸಕಾಲದಲ್ಲಿ ಎಚ್ಚರಿಸುವ ಈ ಮಾಹಿತಿ ಶಿಬಿರ ಅರ್ಥಪೂರ್ಣವಾಗಿದೆ ಎಂದು ಅಭಿಪ್ರಾಯಪಟ್ಟರು.
ಇನ್ನೋರ್ವ ಮುಖ್ಯ ಅತಿಥಿ ಶ್ರೀ ಭಕ್ತವತ್ಸಲ ಶೆಟ್ಟಿ, ಅಧ್ಯಕ್ಷರು, ಅಮೂಲ್ಯ ಸೌಹಾರ್ದ ಸಹಕಾರಿ ಸಂಘ (ನಿ.), ನಾಲ್ಕೂರು ಇವರು ಮಾತನಾಡಿ, ನಮ್ಮ ದಿನನಿತ್ಯದ ಕೆಲಸವನ್ನು ನಿತ್ಯ ಸರಿ ಸಮಯಕ್ಕೆ ಮಾಡಿದಾಗ ಅದು ಅಭ್ಯಾಸವಾಗುತ್ತದೆ. ಒಮ್ಮೆ ಅಭ್ಯಾಸವಾದ ಮೇಲೆ ಅದನ್ನು ಬಿಡುವುದು ಕಷ್ಟ. ಅದೇ ರೀತಿ ಮದ್ಯ ವ್ಯಸನಗಳೂ ಕೂಡ ಅಭ್ಯಾಸವಾದ ಮೇಲೆ ಬಿಡುವುದು ಅತೀ ಕಷ್ಟ. ಅದು ಮುಂದೆ ಚಟವಾಗಿ ಒಬ್ಬನ/ಒಬ್ಬಳ ದೈಹಿಕ, ಮಾನಸಿಕ ಕ್ರಿಯೆಗಳು ಏರುಪೇರಾಗಿ ಧನಹಾನಿ, ಮಾನಹಾನಿ, ಸ್ಥಾನಹಾನಿಯಾಗುತ್ತದೆ ಎಂದು ಎಚ್ಚರಿಸಿದರು.
ಸಂಪನ್ಮೂಲ ವ್ಯಕ್ತಿ ಗಿರೀಶ್ ಅಚ್ಲಾಡಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಮಾದಕ ವಸ್ತುಗಳ ಬಳಕೆಯಿಂದ ಜೀವನವೇ ನರಕವಾಗುತ್ತದೆ. ವಿದ್ಯಾರ್ಥಿಗಳು ಬಹಳ ಎಚ್ಚರದಿಂದ ನಮ್ಮ ವಿದ್ಯಾಭ್ಯಾಸ ಮುಗಿಸಿ ಉದಾತ್ತ ಉತ್ತಮ ನಾಗರೀಕರಾಗಿ ಸಮಾಜಕ್ಕೆ ಬಹು ಪ್ರಿಯರಾಗಬೇಕೇ ಹೊರತು ಕಂಟಕರಾಗಿ ಬದುಕಬಾರದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಶೋಭ ಪೂಜಾರಿ, ಅಧ್ಯಕ್ಷರು ನಾಲ್ಕೂರು ಗ್ರಾಮ ಪಂಚಾಯತ್, ಮುಖ್ಯ ಶಿಕ್ಷಕ ಕೃಷ್ಣ ನಾಯ್ಕ, ಸರಕಾರಿ ಪ್ರೌಢ ಶಾಲೆ ನಾಲ್ಕೂರು, ಪ್ರತಾಪ ಹೆಗ್ಡೆ, ಅಧ್ಯಕ್ಷರು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಸರಕಾರಿ ಪ್ರೌಢಶಾಲೆ ನಾಲ್ಕೂರು, ರಮೇಶ್ ವಕ್ವಾಡಿ, ಕಾರ್ಯದರ್ಶಿ, ಅಭಿವೃದ್ಧಿ ಸಂಸ್ಥೆ (ರಿ.), ಬಾಳ್ಕುದ್ರು ಹಂಗಾರಕಟ್ಟೆ, ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿ, ರೋಟರಿ ಕ್ಲಬ್, ಕೊಕ್ಕರ್ಣೆ, ಭಕ್ತವತ್ಸಲ ಶೆಟ್ಟಿ, ಅಧ್ಯಕ್ಷರು, ಅಮೂಲ್ಯ ಸೌಹಾರ್ದ ಸಹಕಾರಿ ಸಂಘ (ನಿ.), ನಾಲ್ಕೂರು ಇವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವು ಶ್ರೀಮತಿ ದಿವ್ಯ ಉಡುಪಿ ನಿರೂಪಿಸಿ, ಮುಖ್ಯ ಶಿಕ್ಷಕ ಕೃಷ್ಣ ನಾಯ್ಕ ಸ್ವಾಗತಿಸಿ, ರಮೇಶ್ ವಕ್ವಾಡಿ ಪ್ರಸ್ತಾವನೆ ಮಾಡಿ ಸ್ವಾಗತಿಸಿದರು. ಸುಮಾರು 65 ವಿದ್ಯಾರ್ಥಿಗಳು ಈ ಶಿಬಿರದಿಂದ ಪ್ರಯೋಜನ ಪಡೆದರು.

