

ಕುಂದಾಪುರ: ಭವಿಷ್ಯದ ಭವ್ಯ ಭಾರತವನ್ನು ಕಟ್ಟುವ ಕೆಲಸ ಇಂದಿನ ಯುವಜನತೆಯ ಮೇಲಿದೆ. ದೇಶವನ್ನು ಸುಪರ್ ಪವರ್ ಆಗಬೇಕು ಅಂದರೆ ಮೊದಲು ಇಂದಿನ ಯುವಜನತೆ ಆ ನಿಟ್ಟಿನಲ್ಲಿ ಕನಸು ಕಾಣಬೇಕು ಎಂದು ಉಡುಪಿ ಜಿಲ್ಲಾ ಪೋಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್ ಕರೆ ನೀಡಿದರು.
ಅವರು ಸೆಪ್ಟೆಂಬರ್ 10ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಜೆಸಿಐ ಸಹಯೋಗದಲ್ಲಿ ಕಾಲೇಜಿನ ಭರವಸೆ ಗುಣಮಟ್ಟ ಭರವಸೆ ಕೋಶ, ರಾಷ್ಟ್ರೀಯ ಸೇವಾ ಯೋಜನೆ ಘಟಕ, ಯೂಥ್ ರೆಡ್ ಕ್ರಾಸ್ ಮತ್ತು ಎನ್.ಸಿ.ಸಿ ನೇವಿ ಮತ್ತು ಆರ್ಮಿ ಘಟಕಗಳು ಆಶ್ರಯದಲ್ಲಿ ನಡೆದ ಮಾದಕ ವ್ಯಸನದ ದುಷ್ಪರಿಣಾಮಗಳು, ಸೈಬರ್ ಅಪರಾಧ, ವೃತ್ತಿ ಮಾರ್ಗದರ್ಶನ ಕುರಿತ ವಿಶೇಷ ಉಪನ್ಯಾಸ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಜೀವನದಲ್ಲಿ ಒಂದು ಗುರಿಯನ್ನು ಇಟ್ಟುಕೊಂಡು ಆ ಗುರಿಯಲ್ಲಿ ಸಫಲತೆ ಪಡೆಯುವವರೆಗೂ ಸುತ್ತ ಪ್ರಯತ್ನ ಪಡಬೇಕು. ಯಾವುದೇ ಕಾರಣಕ್ಕೂ ಮಧ್ಯೆ ನಿಲ್ಲಿಸಬಾರದು. ನಿರಂತರವಾದ ಅಪರಿಚಿತ ಪ್ರಯತ್ನ ಮತ್ತು ಛಲ ಇರಬೇಕು. ದೊಡ್ಡ ದೊಡ್ಡ ಕನಸುಗಳನ್ನು ಕಾಣುವ ಮೂಲಕ ದೇಶವನ್ನು ಎತ್ತರಕ್ಕೆ ತರಬೇಕು ಎಂದು ಹೇಳಿದರು.
ಮಾದಕ ವಸ್ತುಗಳ ವ್ಯಸನಿ ಎಂಬುದು ಅತಿಮೂಲ್ಯ ಜೀವನವನ್ನು ಹಾಳುಗೆಡವಿ ಬಿಡುತ್ತದೆ. ಅದರ ವ್ಯಸನಕ್ಕೆ ಒಳಗಾಗಿ ಸುಂದರ ಬದುಕನ್ನು ಹಾಳು ಮಾಡಿಕೊಳ್ಳಬೇಡಿ. ನಿಮಗೆ ಒಳ್ಳೆಯ ಭವಿಷ್ಯ ಇದೆ. ಭಾರತದ ಭವಿಷ್ಯ ನಿಮ್ಮಂತಹ ಯುವಕರು ಮೇಲಿದೆ. ಹಾಗೆ ಪ್ರಸ್ತುತ ಮೊಬೈಲ್ ಬಳಕೆಯ ಪರಿಣಾಮವಾಗಿ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಯಾವುದೇ ಆನ್ ಲೈನ್ ಜಾಲಗಳ ಮೋಸಕ್ಕೆ ಒಳಗಾಗಬೇಡಿ. ಜಾಗೃತವಾಗಿರಿ. ಯಾಕೆಂದರೆ ನಿಮ್ಮ ಎಲ್ಲಾ ಡೇಟಾಗಳನ್ನು ಬೇರೆ ಬೇರೆ ನೆಲೆಯಲ್ಲಿ ಬಳಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಹಾಗಾಗಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ತುಂಬಾ ಜಾಗೃತವಾಗಿರಬೇಕು. ನಿಮ್ಮ ಗಮನ ಏನಿದ್ದರು ಒಳ್ಳೆಯ ಬದುಕನ್ನು ಕಟ್ಟಿಕೊಳ್ಳುವಲ್ಲಿ ಇರಲಿ. ದೇಶಕ್ಕಾಗಿ ದೊಡ್ಡ ಕನಸು ಕಂಡು ದೇಶ ಸೇವೆ ಮಾಡಿ ಅದರಲ್ಲಿ ಬದುಕಿನ ಸಾರ್ಥಕತೆಯನ್ನು ಕಂಡುಕೊಳ್ಳಿರಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಸತ್ಯನಾರಾಯಣ ಹತ್ವಾರ್ , ರಾಷ್ಟ್ರೀಯ ಸೇವಾ ಯೋಜನೆ ಘಟಕದ ಯೋಜನಾಧಿಕಾರಿ ರಾಮಚಂದ್ರ ಆಚಾರ್ಯ, ಎನ್.ಸಿ.ಸಿ ಅಧಿಕಾರಿ ಅಂಜನ್ ಕುಮಾರ್ ಎಂ.ಎಲ್, ಜೆಸಿಐ ಕುಂದಾಪುರ ಸಿಟಿ ಇದರ ಅಧ್ಯಕ್ಷರಾದ ಸಲೀಮ್, ಜೆಸಿಐ ಸಪ್ತಾಹದ ಸಭಾಪತಿ ರಾಘವೇಂದ್ರ ಚರಣ ನಾವಡ, ನಿಕಟಪೂರ್ವ ಅಧ್ಯಕ್ಷರಾದ ರಾಘವೇಂದ್ರ ಕುಲಾಲ್, ಮುಂತಾದವರು ಉಪಸ್ಥಿತರಿದ್ದರು.
ಜೆಸಿಐ ಕುಂದಾಪುರ ಸಿಟಿ ಇದರ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ವಿದ್ಯಾರಾಣಿ ವಂದಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿನಿ ಅಶ್ವಿನಿ ಕಾರಂತ ಕಾರ್ಯಕ್ರಮ ನಿರೂಪಿಸಿದರು.






