

ಶ್ರೀನಿವಾಸಪುರ, ಸೆಪ್ಟೆಂಬರ್ 10 : ಪಟ್ಟಣದ ಪುರಸಭೆ ಸಂಕೀರ್ಣದಲ್ಲಿರುವ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರದಲ್ಲಿ ನಿರಂತರ ತಾಂತ್ರಿಕ ತೊಂದರೆ ಉಂಟಾಗುತ್ತಿರುವುದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿ ವೇತನ (ಸ್ಕಾಲರ್ಶಿಪ್) ಸೇರಿದಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸುವ ವೇಳೆ ಅಡಚಣೆಗಳು ಎದುರಾಗುತ್ತಿದ್ದು, ಬಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳ ಭವಿಷ್ಯವೇ ಅಸ್ಪಷ್ಟವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಾಹಿತಿ ಕೇಂದ್ರದಲ್ಲಿ ಇಂಟರ್ನೆಟ್ ಸೇವೆ ಸರಿಯಾಗಿ ಕಾರ್ಯನಿರ್ವಹಿಸದಿರುವುದು ಹಾಗೂ ಸುಮಾರು ಎಂಟು ವರ್ಷ ಹಳೆಯದಾದ ವಿಂಡೋಸ್–7 ಆಧಾರಿತ ಹಳೆಯ ಮಾದರಿಯ ಕಂಪ್ಯೂಟರ್ಗಳನ್ನು ಬಳಸುತ್ತಿರುವುದೇ ಪ್ರಮುಖ ತೊಂದರೆಯಾಗಿದೆ. ಇದರಿಂದ ಅರ್ಜಿ ಪ್ರಕ್ರಿಯೆ ನಿಧಾನಗತಿಯಾಗಿದೆ. ಅರ್ಜಿ ಸಲ್ಲಿಸಲು ಬಂದಿರುವ ವಿದ್ಯಾರ್ಥಿಗಳು ಹಾಗೂ ಪೋಷಕರು ಕಚೇರಿಯಲ್ಲಿ ತಾಸುಗಟ್ಟಲೆ ಕಾಯಬೇಕಾದ ದುಸ್ಥಿತಿ ಎದುರಿಸುತ್ತಿದ್ದಾರೆ.
ತಾಲೂಕು ಕೇಂದ್ರವಾಗಿರುವ ಶ್ರೀನಿವಾಸಪುರ ಪುರಸಭೆ ಸಂಕೀರ್ಣದಲ್ಲಿರುವ ಈ ಕಚೇರಿಗೆ ತಾಲೂಕಿನ ನೂರಾರು ಹಳ್ಳಿಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಆದರೆ ತಾಂತ್ರಿಕ ಸಮಸ್ಯೆಯಿಂದ ಅರ್ಜಿ ಪ್ರಕ್ರಿಯೆ ವಿಳಂಬವಾಗುತ್ತಿರುವುದರಿಂದ ಕೆಲವರು ನಿರಾಶೆಯಿಂದ ಕೈಮುಗಿದು ಹೊರಟು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಕೆಲವೊಮ್ಮೆ ಸಂಜೆ ಐದು ಗಂಟೆಗೆ ಬಂದ ವಿದ್ಯಾರ್ಥಿಗಳು ಆರು ಗಂಟೆಯವರೆಗೂ ಕಾಯ್ದು, ಕೊನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಹಿಂತಿರುಗುವ ಘಟನೆಯೂ ಸಾಮಾನ್ಯವಾಗಿದೆ.
ಪೋಷಕರು ತಮ್ಮ ಉದ್ಯೋಗ, ಕೃಷಿ ಹಾಗೂ ಇತರ ದೈನಂದಿನ ಕೆಲಸಗಳನ್ನು ಬಿಟ್ಟು ಮಕ್ಕಳ ಭವಿಷ್ಯಕ್ಕಾಗಿ ದಿನಪೂರ್ತಿ ಕಚೇರಿಯಲ್ಲಿ ಅಲೆದಾಡಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. “ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರ ನೀಡುವ ಸ್ಕಾಲರ್ಶಿಪ್ ಹಾಗೂ ಇತರ ಸೌಲಭ್ಯಗಳ ಅರ್ಜಿ ಸಲ್ಲಿಕೆಯಲ್ಲಿ ತಾಂತ್ರಿಕ ತೊಂದರೆಯಿಂದಾಗಿ ವಿದ್ಯಾರ್ಥಿಗಳು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಇಂಟರ್ನೆಟ್ ವ್ಯವಸ್ಥೆ ಸರಿಪಡಿಸುವುದರ ಜೊತೆಗೆ ಎಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಿಗೆ ಹೊಸ ಕಂಪ್ಯೂಟರ್ಗಳನ್ನು ಒದಗಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು,” ಎಂದು ಮಾನ್ಯ ಪ್ರಧಾನ ಮಂತ್ರಿ ಹೊಸ 15 ಅಂಶಗಳ ಕಾರ್ಯಕ್ರಮ ಜಿಲ್ಲಾ ಸಮಿತಿಯ (ಡಿ.ಎಲ್.ಸಿ) ಸದಸ್ಯ ಶಬ್ಬೀರ್ ಅಹಮದ್ ಪಾಷ ಬೇಡಿಕೆ ವ್ಯಕ್ತಪಡಿಸಿದರು.
ಈ ಸಮಸ್ಯೆಯನ್ನು ಸರ್ಕಾರ ಹಾಗೂ ಇಲಾಖೆಯ ಮೇಲಾಧಿಕಾರಿಗಳು ತಕ್ಷಣ ಗಮನಿಸಿ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


