

ಬೆಂಗಳೂರು : ಕರ್ನಾಟಕ ಸರ್ಕಾರವು ಮಂಗಳವಾರ (ಸೆಪ್ಟೆಂಬರ್ 9) ಆಡಳಿತಾತ್ಮಕ ಬದಲಾವಣೆಗಳನ್ನು ಜಾರಿಗೊಳಿಸಿದ್ದು, ಹಿರಿಯ ಐಎಎಸ್ ಅಧಿಕಾರಿ ಶ್ರೀ ಮೊಹಮ್ಮದ್ ಮೊಹ್ಸಿನ್ (ಕೆಎನ್:1996) ಅವರಿಗೆ ಹೊಸ ಹೆಚ್ಚುವರಿ ಜವಾಬ್ದಾರಿ ನೀಡಿದೆ.
ಪ್ರಸ್ತುತ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ವೈದ್ಯಕೀಯ ಶಿಕ್ಷಣ) ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಅವರಿಗೆ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನು ಕೂಡ ಸರ್ಕಾರ ಹಂಚಿಕೆ ಮಾಡಿದೆ.
ಈ ಬದಲಾವಣೆ ತಕ್ಷಣದಿಂದಲೇ ಜಾರಿಗೆ ಬರುವುದಾಗಿ ಮತ್ತು ಮುಂದಿನ ಆದೇಶ ಹೊರಬರುವವರೆಗೆ ಇದು ಮುಂದುವರಿಯುವುದಾಗಿ ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದರಿಂದ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಐಎಎಸ್ ಅಧಿಕಾರಿ ಎಸ್.ಎಂ. ರೋಹಿಣಿ ಸಿಂಧೂರಿ ದಾಸರಿ ಅವರನ್ನು ಆ ಹುದ್ದೆಯಿಂದ ವರ್ಗಾಯಿಸಲಾಗಿದೆ.
ಈ ಸಂಬಂಧ ಅಧಿಕೃತ ಅಧಿಸೂಚನೆಯನ್ನು ಕರ್ನಾಟಕ ಸರ್ಕಾರ ಮಂಗಳವಾರ ಹೊರಡಿಸಿದೆ.


