

ಕುಂದಾಪುರ,ಅ.16: ಕುಂದಾಪುರ ಚರ್ಚಿನಲ್ಲಿ ಅಗೋಸ್ತ್ 15 ರಂದು ಭಾಗ್ಯವಂತೆ ಮೇರಿ ಮಾತೆಯ ಸ್ವರ್ಗಾರೋಹಣದ ಹಬ್ಬವನ್ನು ಧರ್ಮಗುರು ಅ।ವಂ। ಪೌಲ್ ರೇಗೊ ಮತ್ತು ಭಕ್ತಾಧಿಗಳು ಪವಿತ್ರ ಬಲಿದಾನವನ್ನು ಸಡಗರ ಮತ್ತು ಭಕ್ತಿಯಿಂದ ಆಚರಿಸಲಾಯಿತು. “ದೇವರ ಪುತ್ರ, ಪವಿತ್ರ ಆತ್ಮನ ಶಕ್ತಿಯಿಂದ ಮನುಜನಾಗಿ ಮೇರಿ ಮಾತೆಯ ಗರ್ಭದಲ್ಲಿ ಜನಿಸಿದ ಮಹಾಮಾತೆಯನ್ನು ದೇವರು ಜೀವಂತವಾಗಿ ಸ್ವರ್ಗಕ್ಕೆ ಕರೆದುಕೊಂಡ ಹಬ್ಬ ಇದಾಗಿದೆ. ಇದೇ ದಿವಸ ನಮ್ಮ ಭಾರತ ದೇಶಕ್ಕೆ ಸ್ವಾತಂತ್ರ ಲಭಿಸಿದ್ದು, ನಮ್ಮ ಭಾಗ್ಯವಾಗಿದೆ. ಮೇರಿ ಮಾತೆ ದಿನದಿಂದ ದಿನಕ್ಕೆ ಶಕ್ತಿಯುತಳಾದಳು, ಆ ಮಾಹಾ ಮಾತೆಗೆ ದೇವರ ಪುತ್ರನನ್ನೆ ಉಡುಗೊರೆಯಾಗಿ ನೀಡಿದನ್ನು ನಾವು ಮರೆಯಬಾರದು, ನಾವೆಲ್ಲ ಮೇರಿ ಮಾತೆಯ ಈ ಆದರ್ಶಗಳನ್ನು ಪಾಲಿಸಿಬೇಕು’ ಎಂದು ಧರ್ಮಗುರುಗಳು ಸಂದೇಶ ನೀಡಿದರು. ಬಲಿ ಪೂಜೆಯ ಪ್ರಾರ್ಥನ ವಿಧಿಯನ್ನು ಸಿ.ಎಲ್.ಸಿ. ಚಿಕ್ಕವರ ಸಂಘದ ಮಕ್ಕಳು ನಡೆಸಿಕೊಟ್ಟರು.
ಬಲಿದಾನದ ಬಳಿಕ ಕಥೊಲಿಕ್ ಸಭಾ ಕುಂದಾಪುರ ಚರ್ಚ್ ಘಟಕದ ವತಿಯಿಂದ ಕುಂದಾಪುರ ಚರ್ಚ್ ವ್ಯಾಪ್ತಿಗೆ ಒಳಪಟ್ಟ ಕಲಿಕೆ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಪ್ರತಿಭಾವಂತ ಮಕ್ಕಳನ್ನು ಧರ್ಮಗುರು ಪೌಲ್ ರೇಗೊ, ಕುಂದಾಪುರ ನಗರ ಯೋಜನ ಪ್ರಾಧಿಕಾರ ಅಧ್ಯಕ್ಷರಾದ ವಿನೋದ್ ಕ್ರಾಸ್ಟೊ, ಕಥೊಲಿಕ್ ಸಭಾ ಕುಂದಾಪುರ ವಲಯದ ಅಧ್ಯಕ್ಷ ವಿಲ್ಸನ್ ಡಿಆಲ್ಮೇಡಾ, ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ಸುಪ್ರಿಯಾ ಬಹುಮಾನ,ಪದಕ, ಪ್ರಮಾಣ ಪತ್ರಗಳನ್ನು ವಿತರಿಸಿದರು. ದಾನಿಗಳನ್ನು ಗೌರವಿಸಲಾಯಿತು.
ಘಟಕದ ನಿಕಟ ಪೂರ್ವ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ ಪ್ರತಿಭಾ ಪುರಸ್ಕಾರ ಪಡೆದವರನ್ನು ಪರಿಚಯಿಸಿದರು. ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಸರ್ವ ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ಕಥೊಲಿಕ್ ಸಭಾದ ಪದಾಧಿಕಾರಿಗಳಾದ, ಬರ್ನಾಡ್ ಡಿಕೋಸ್ತಾ, ಜೋಸೆಫ್ ಡಿಸೋಜಾ, ವಿನಯಾ ಡಿಕೋಸ್ತಾ, ಕ್ಲಿಫರ್ಡ್ ಡಿಸಿಲ್ವಾ ಮುಂತಾದವರು ಉಪಸ್ಥಿತರಿದ್ದರು. ಕಥೊಲಿಕ್ ಸಭಾ ಕುಂದಾಪುರ ಘಟಕದ ಅಧ್ಯಕ್ಷ ವಿಲ್ಸನ್ ಡಿಆಲ್ಮೇಡಾ ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕಿ ಜೂಲಿಯೆಟ್ ಪಾಯ್ಸ್, ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶಾಂತಿ ಪಿಂಟೊ ವಂದಿಸಿದರು.






























































