

ಶ್ರೀನಿವಾಸಪುರ: ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಮೌಲಾನಾ ಆಜಾದ್ ಮಾದರಿ ಶಾಲೆಯಲ್ಲಿ ಈ ಶೈಕ್ಷಣಿಕ ವರ್ಷದಿಂದ ಎಲ್ಕೆಜಿ ತರಗತಿಯನ್ನು ಅಧಿಕೃತವಾಗಿ ಪ್ರಾರಂಭಿಸಲಾಗಿದೆ. ಸರ್ಕಾರ ಹಾಗೂ ಇಲಾಖೆಯ ನಿರ್ದೇಶನದಂತೆ, ತರಗತಿ ಆರಂಭವನ್ನು ಸಿಹಿ ಹಂಚುವ ಮೂಲಕ ಹರ್ಷಭರಿತ ವಾತಾವರಣದಲ್ಲಿ ನೆರವೇರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಲೆಯ ಮುಖ್ಯಶಿಕ್ಷಕಿ ವಿ.ಬಿ. ಅರುಣ ಅವರು, ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ನೀಡುವುದು ನಮ್ಮೆಲ್ಲರ ಜವಾಬ್ದಾರಿ. ಪ್ರತಿಯೊಬ್ಬ ಮಗುವನ್ನೂ ಶಾಲೆಗೆ ಸೇರಿಸುವುದು ಪೋಷಕರ ಪ್ರಮುಖ ಕರ್ತವ್ಯ. ಶಿಕ್ಷಣವೇ ಮಕ್ಕಳ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಮೂಲಾಧಾರ ಎಂದು ಹೇಳಿದರು. ಪೋಷಕರು ತಮ್ಮ ಮಕ್ಕಳನ್ನು ಮೌಲಾನಾ ಆಜಾದ್ ಮಾದರಿ ಶಾಲೆಯಲ್ಲಿ ದಾಖಲಿಸಿ ಅವರ ಭವಿಷ್ಯ ರೂಪಿಸುವ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಮಕ್ಕಳ ಹಾಜರಾತಿ ಶೇ.100ಕ್ಕೆ ತಲುಪಿಸುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಜಾಗೃತಿ ಕಾರ್ಯಕ್ರಮಗಳು, ಪೋಷಕರ ಸಭೆಗಳು, ಬಾಗಿಲು ಬಾಗಿಲಿಗೆ ಭೇಟಿ ಮತ್ತು ಸಮುದಾಯ ಮಟ್ಟದ ಸಂವಾದಗಳನ್ನು ಹಮ್ಮಿಕೊಳ್ಳುವುದಾಗಿ ಶಾಲಾ ಸಿಬ್ಬಂದಿ ತಿಳಿಸಿದರು.
ಮೌಲಾನಾ ಆಜಾದ್ ಮಾದರಿ ಶಾಲೆ ತನ್ನ ಉನ್ನತ ಶಿಕ್ಷಣ ಗುಣಮಟ್ಟ, ಪಠ್ಯೇತರ ಚಟುವಟಿಕೆಗಳು ಹಾಗೂ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಹೆಸರುವಾಸಿಯಾಗಿದ್ದು, ಎಲ್ಕೆಜಿ ತರಗತಿಯ ಆರಂಭದಿಂದ ಸ್ಥಳೀಯ ಮಕ್ಕಳಿಗೆ ಇನ್ನಷ್ಟು ಶೈಕ್ಷಣಿಕ ಅವಕಾಶಗಳು ಲಭ್ಯವಾಗಲಿವೆ.
ಈ ಸಂದರ್ಭದಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಚೇರಿಯ ವಿಸ್ತರಣಾಧಿಕಾರಿ ವಿಜಿ ಕುಮಾರ್ , ಶಾಲೆಯ ಶಿಕ್ಷಕರು, ಚೌದರಿ ಕೆ.ಸಿ, ನಾಗಮಣಿ ಸಿ, ಆಸಿಫ್ ಪಾಷ, ಶಬಾನಾ ತಾಜ್, ಹೀನಾ ಕೌಸರ್, (ಎಲ್ಕೆಜಿ) ಶಾಜಿಯಾ ಪರ್ವೀನ್ , ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

