

ಬೆಂಗಳೂರು: ಸರ್ಕಾರದ ಪ್ರಧಾನಮಂತ್ರಿ ಹೊಸ 15 ಅಂಶಗಳ ವಿಶೇಷ ಕಾರ್ಯಕ್ರಮದ ಪರಿಣಾಮಕಾರಿಯಾದ ಅನುಷ್ಠಾನಕ್ಕಾಗಿ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ವತಿಯಿಂದ ಜಿಲ್ಲೆಯ ಮಟ್ಟದ ಅನುಷ್ಠಾನ ಸಮಿತಿಯ ಸದಸ್ಯರಿಗೆ ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು ಬೆಂಗಳೂರಿನ ಬನ್ನೇರುಘಟ್ಟದ ಜಂಗಲ್ ಲಾಡ್ಜ್ಗಳ ಪ್ರಕೃತಿ ಶಿಬಿರದಲ್ಲಿ ನಡೆಸಲಾಯಿತು.
ಈ ಶಿಬಿರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸಮಿತಿ ಸದಸ್ಯರು ಭಾಗವಹಿಸಿದ್ದರು. ಯೋಜನೆಯ ಉದ್ದೇಶ, ಅನುದಾನದ ಸರಿಯಾದ ವಿನಿಯೋಗ, ಫಲಾನುಭವಿಗಳ ಆಯ್ಕೆ, ಹಾಗೂ ಯೋಜನೆ ಜಾರಿಗೆ ತಾಂತ್ರಿಕ ಮಾಹಿತಿ ಹಂಚಿಕೊಳ್ಳಲಾಯಿತು. ಈ ಕಾರ್ಯಾಗಾರವು ಸಮಿತಿಗೆ ಯೋಜನೆಗಳ ಬಗ್ಗೆ ಸ್ಪಷ್ಟತೆ ನೀಡಿದಷ್ಟೇ ಅಲ್ಲದೇ, ಅನುಭವ ವಿನಿಮಯದ ವೇದಿಕೆಯಾಗಿ ಕಾರ್ಯನಿರ್ವಹಿಸಿತು.
ಕಾರ್ಯಾಗಾರವನ್ನು ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ, ನಿವೃತ್ತ ಐಪಿಎಸ್ ಅಧಿಕಾರಿ ಯು. ನಿಸಾರ್ ಅಹ್ಮದ್ ಉದ್ಘಾಟಿಸಿ ‘ಅಲ್ಪಸಂಖ್ಯಾತರ ಶಿಕ್ಷಣ, ಉದ್ಯೋಗ, ಆರೋಗ್ಯ ಹಾಗೂ ಆರ್ಥಿಕ ಸಬಲೀಕರಣಕ್ಕೆ ಪ್ರಧಾನಮಂತ್ರಿಗಳ 15 ಅಂಶಗಳ ಯೋಜನೆ ಮಹತ್ವದ್ದಾಗಿದೆ. ಈ ಯೋಜನೆಗಳ ಪ್ರಯೋಜನ ದೇಶದಾದ್ಯಾಂತ ಅಲ್ಪಸಂಖ್ಯಾತ ಸಮುದಾಯಗಳಿಗೆ ತಲುಪುತ್ತಿದೆ. ರಾಜ್ಯದಲ್ಲೂ ಗ್ರಾಮೀಣ ಮಟ್ಟದವರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ಸಮಿತಿಯ ಸದಸ್ಯರು ಶಿಸ್ತಿನಿಂದ ಹಾಗೂ ನಿಷ್ಠೆಯಿಂದ ಕೆಲಸ ಮಾಡಿದರೆ ಮಾತ್ರ ಯೋಜನೆಯ ಫಲಿತಾಂಶಗಳು ಜನತೆಗೆ ತಲುಪಬಹುದು‘ ಅವರು ಹೇಳಿದರು
ಕಾರ್ಯಾಗಾರದಲ್ಲಿ ಕೆ.ಎಸ್.ಎಂ.ಸಿ ಕಾರ್ಯದರ್ಶಿ ಡಾ. ಮಾಜುದ್ದೀನ್ ಖಾನ್, ಯೋಜನಾ ತಜ್ಞರು ಹಾಗೂ ಇತರ ಅಧಿಕೃತ ವ್ಯಕ್ತಿಗಳು ಉಪನ್ಯಾಸ ನೀಡಿದರು. ಉಪನ್ಯಾಸಗಳಲ್ಲಿ ಯೋಜನೆಯ ತಾಂತ್ರಿಕ ಮಾಹಿತಿ, ಅನುದಾನಗಳ ವ್ಯವಹಾರ, ಫಲಾನುಭವಿಗಳ ತಪಾಸಣೆ ಮತ್ತು ನಿಗದಿತ ಗಡುವಿನಲ್ಲಿ ಯೋಜನೆಯ ಅನುಷ್ಠಾನ ಕುರಿತ ಮಾಹಿತಿಗಳು ಒಳಗೊಂಡಿದ್ದವು.
ಕಾರ್ಯಕ್ರಮದಲ್ಲಿ ಕೆ.ಆರ್. ಜಾಬಿ ಕೆಎಸ್ಎಂಸಿ ಸದಸ್ಯರು, ವಿವಿಧ ಜಿಲ್ಲೆಗಳ ಪಿಎಂ15 ಸಮಿತಿ ಸದಸ್ಯರು, ಹಾಗೂ ಆಯೋಗದ ಅಧಿಕಾರಿಗಳು ಭಾಗವಹಿಸಿದ್ದರು.



