HOLY ROSARY CHURCH, KUNDAPUR – 450 th JUBILEE SOUVENIR 2021

ಡೆಂಗ್ಯೂ, ಚಿಕನ್ ಗುನ್ಯಾ ಬರದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಅರಿವು ಮೂಡಿಸಿ- ಜಿ.ಜಗದೀಶ್

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ 

ಡೆಂಗ್ಯೂ, ಚಿಕನ್ ಗುನ್ಯಾ ಬರದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಅರಿವು ಮೂಡಿಸಿ- ಜಿ.ಜಗದೀಶ್

ಕೋಲಾರ: ಡೆಂಗ್ಯೂ ಚಿಕನ್ ಗುನ್ಯಾ ಖಾಯಿಲೆಗಳು ಬರದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಮೂಲಕ ತಡೆಗಟ್ಟಲು ಕ್ರಮಕೈಗೊಳ್ಳಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಜಿ. ಜಗದೀಶ್ ಅವರು ತಿಳಿಸಿದರು. 

 ಇಂದು ತಮ್ಮ ಕಛೇರಿಯಲ್ಲಿ “ಡೆಂಗ್ಯೂ ವಿರೋಧಿ ಮಾಸಾಚರಣೆ” ಪ್ರಯುಕ್ತ ಹಮ್ಮಿಕೊಂಡಿದ್ದ ಅಂತರ್ ಇಲಾಖೆಯ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ನೀರು ನಿಲ್ಲದಂತೆ ನೋಡಿಕೊಳ್ಳಲು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಡೆಂಗ್ಯೂ ಚಿಕನ್‍ಗುನ್ಯಾ ಕಂಡು ಬಂದ ಪ್ರದೇಶಗಳ ಕಡೆ ಹೆಚ್ಚು ಮುನ್ನೆಚ್ಚರಿಕೆ ವಹಿಸಿ ಅಗತ್ಯ ಕ್ರಮಗಳನ್ನು ಆರೋಗ್ಯ ಇಲಾಖೆ ಕೈಗೊಳ್ಳಬೇಕು. ಹಳೆಯ ಟಯರ್, ತೆಂಗಿನ ಚಿಪ್ಪು ಹಾಗೂ ಚರಂಡಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಯಲ್ಲಿ ಸಂಗ್ರಹಿಸುವ ನೀರನ್ನು ಮುಚ್ಚಿ ಇಟ್ಟುಕೊಳ್ಳಬೇಕು ಎಂದು ಮಾಹಿತಿ ನೀಡಿದರು. 

 ಶಿಕ್ಷಕರು ಶಾಲೆಗಳಲ್ಲಿ 10 ನಿಮಿಷ ಮಕ್ಕಳಿಗೆ ಡೆಂಗ್ಯೂ ಹಾಗೂ ಚಿಕನ್‍ಗುನ್ಯಾ ಯಾವ ರೀತಿ  ಬರುತ್ತದೆ, ಅದು ಬರದಂತೆ ಯಾವ ರೀತಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಕ್ಕಳಿಗೆ ಅರಿವು ಮೂಡಿಸಬೇಕು. ಮಕ್ಕಳು ಶಿಕ್ಷಕರು ನೀಡಿದ ಮಾಹಿತಿಯನ್ನು ತಮ್ಮ ಮನೆಗಳಲ್ಲೂ ನೀಡಿ ಅಳವಡಿಸಿಕೊಳ್ಳುವಂತೆ ಪೋಷಕರಿಗೆ ತಿಳಿಸುತ್ತಾರೆ. ಜನನಿಬಿಡ ಪ್ರದೇಶಗಳು ಹಾಗೂ ಸ್ಲಂಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ಸಮನ್ವಯ ಸಮಿತಿಯ ಇಲಾಖೆಗಳಿಗೆ ವಹಿಸಿರುವ ಕೆಲಸಗಳನ್ನು 01 ತಿಂಗಳ ಮಾಸಾಚರಣೆ ಮುಗಿದ ನಂತರ ಕೈಗೊಂಡ ಕ್ರಮಗಳ ಕುರಿತು ಪ್ರತಿ ಇಲಾಖೆಯು ವರದಿ ಸಲ್ಲಿಸಬೇಕು ಎಂದು ತಿಳಿಸಿದರು. 

 ಜಿಲ್ಲಾ ಆಶ್ರಿತ ರೋಗಗಳ ನಿವಾರಣಾಧಿಕಾರಿಗಳಾದ ಡಾ|| ಕಮಲಮ್ಮ ಅವರು ಮಾತನಾಡಿ, ಜಿಲ್ಲೆಯಲ್ಲಿ 2019 ರಲ್ಲಿ 16 ಚಿಕನ್‍ಗುನ್ಯಾ ಪ್ರಕರಣ ಹಾಗೂ 31 ಡೆಂಗ್ಯೂ ಪ್ರಕರಣಗಳು ಕಂಡುಬಂದಿವೆ. ಚಿಕನ್‍ಗುನ್ಯಾ ಹಾಗೂ ಡೆಂಗ್ಯೂ ಪ್ರಕರಣ ನಿಯಂತ್ರಕ್ಕೆ ವ್ಯಾಪಕವಾಗಿ ಅರಿವು ಮೂಡಿಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ಮಾಹಿತಿ ನೀಡುತ್ತಿದ್ದಾರೆ. ಸೊಳ್ಳೆಗಳು ಹೆಚ್ಚು ಇರುವ ಕಡೆ ಫಾಗಿಂಗ್ ಮಾಡಲಾಗುತ್ತಿದೆ. ಲಾರ್ವಾಹಾರಿ ಮೀನುಗಳಾದ ಗಬ್ಬಿ ಮತ್ತು ಗ್ಯಾಂಬೂಸಿಯಾ ಮೀನುಗಳನ್ನು ನೀರಿನ ತೊಟ್ಟಿಗಳಲ್ಲಿ ಬಿಡಲಾಗುತ್ತಿದೆ. ವಾರದಲ್ಲಿ ಒಂದು ದಿನ ಡ್ರೈ ಡೆ ಎಂದು ಆಚರಿಸಿ, ನೀರಿನ ಸಂಗ್ರಹಣಾ ತೊಟ್ಟಿಗಳು ಹಾಗೂ ಡ್ರಂಗಳನ್ನು ತೊಳೆದು ಒಣಗಿಸಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಪ್ರತಿ ವಾರ ಲಾರ್ವಾ ಸರ್ವೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು. 

 ಸಭೆಯಲ್ಲಿ ಜಿಲ್ಲಾ ಪಂಚಾಯತ್‍ನ ಯೋಜನಾ ನಿರ್ದೇಶಕರಾದ ರವಿಚಂದ್ರನ್, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ|| ಚಾರಿಣಿ, ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ|| ಚಂದನ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಎಲ್ಲಾ ನಾಗರೀಕ ಸೇವೆಗಳು ಒಂದೇ ಸೂರಿನಡಿ ಲಭ್ಯ-ಶ್ರೀ ಕೃಷ್ಣಬೈರೇಗೌಡ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಎಲ್ಲಾ ನಾಗರೀಕ ಸೇವೆಗಳು ಒಂದೇ ಸೂರಿನಡಿ ಲಭ್ಯ-ಶ್ರೀ ಕೃಷ್ಣಬೈರೇಗೌಡ

ಕೋಲಾರ, ಜುಲೈ 01ವಿವಿಧ ಸರ್ಕಾರಿ ಮತ್ತು ಖಾಸಗಿ ಸೇವೆಗಳು ಸೇರಿದಂತೆ 56 ನಾಗರೀಕ ಸೇವೆಗಳನ್ನು ಒಂದೇ ಸೂರಿನಡಿ ನೀಡಲು ಕರ್ನಾಟಕ ಒನ್ ಸಮಗ್ರ ನಾಗರೀಕ ಸೇವಾ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೃಷ್ಣಬೈರೇಗೌಡ ಅವರು ತಿಳಿಸಿದರು. 

 ಇಂದು ನಗರದಲ್ಲಿ ಕರ್ನಾಟಕ ಒನ್ ಸಮಗ್ರ ನಾಗರೀಕ ಸೇವಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಯೋಜನೆಯನ್ನು ಸರ್ಕಾರಿ ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗಿದೆ. ಇದರಲ್ಲಿ ಕರ್ನಾಟಕ ಸರ್ಕಾರ ಹಾಗೂ ನಿರ್ವಹಣಾ ಪಾಲುದಾರರು, ಬ್ಯಾಂಕಿಂಗ್ ಪಾಲುದಾರರು, ರಾಜ್ಯಸರ್ಕಾರ / ಕೇಂದ್ರಸರ್ಕಾರದ ವಿವಿಧ ಇಲಾಖೆಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ನಗರಸಭೆಗಳು ಈ ಯೋಜನೆಯ ಮುಖ್ಯ ಪಾಲುದಾರರಾಗಿರುತ್ತಾರೆ ಎಂದು ಮಾಹಿತಿ ನೀಡಿದರು. 

 ಕರ್ನಾಟಕ ಒನ್ ಕೇಂದ್ರಗಳಲ್ಲಿ ನೀಡುವ ಸೇವೆಗಳಿಗೆ ಯಾವುದೇ ರೀತಿಯ ಸರಹದ್ದಿನ ನಿರ್ಬಂಧನೆ ಇರುವುದಿಲ್ಲ. ಆದ್ದರಿಂದ ಕೋಲಾರ ನಗರದಲ್ಲಿ ವಾಸಿಸುವ ಎಲ್ಲಾ ನಾಗರೀಕರು ಈ ಕೇಂದ್ರದ ಮೂಲಕ ದೊರೆಯುವ ಸೇವೆಗಳನ್ನು ಪಡೆದು ಸುಪಯೋಗಪಡಿಸಿಕೊಳ್ಳಿ ಎಂದರು. 

 ಈ ಸಂದರ್ಭದಲ್ಲಿ ಕೋಲಾರ ಕ್ಷೇತ್ರದ ಶಾಸಕರಾದ ಶ್ರೀನಿವಾಸಗೌಡ, ಜಿಲ್ಲಾಧಿಕಾರಿಗಳ 

ಜೆ. ಮಂಜುನಾಥ್, ಕೋಲಾರ ತಹಶೀಲ್ದಾರರಾದ ಗಾಯತ್ರಿದೇವಿ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸಿ.ಎಸ್.ಆರ್ ನಿಧಿ ಬಳಸಿ ಜಿಲ್ಲೆಯ ಅಭಿವೃದ್ಧಿಗೆ ಕೈ ಜೋಡಿಸಿ: ಶ್ರೀ ಕೃಷ್ಣಬೈರೇಗೌಡ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಸಿ.ಎಸ್.ಆರ್ ನಿಧಿ ಬಳಸಿ ಜಿಲ್ಲೆಯ ಅಭಿವೃದ್ಧಿಗೆ ಕೈ ಜೋಡಿಸಿ: ಶ್ರೀ ಕೃಷ್ಣಬೈರೇಗೌಡ

ಕೋಲಾರ, ಜುಲೈ 01 ಕಂಪನಿಗಳು ಸಿ.ಎಸ್.ಆರ್ ನಿಧಿಯನ್ನು ಸಮರ್ಪಕವಾಗಿ ಬಳಕೆ ಮಾಡಿ ಜಿಲ್ಲೆಯ ಅಭಿವೃದ್ಧಿಯಲ್ಲಿ ಕೈ ಜೋಡಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‍ರಾಜ್ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೃಷ್ಣಬೈರೇಗೌಡ ಅವರು ತಿಳಿಸಿದರು. 

 ಇಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಿ.ಎಸ್.ಆರ್ ಅನುದಾನದಡಿ ಕೋಲಾರ ಅಮಾನಿಕೆರೆ ಮತ್ತು ಕೋಡಿಕಣ್ಣೂರು ಕೆರೆಗಳ ಜೀಣೋದ್ಧಾರದ ಬಗ್ಗೆ ಮಾನ್ಯ ಶಾಸಕರ ಹಾಗೂ ವಿಧಾನಪರಿಷತ್ ಸದಸ್ಯರುಗಳು ಹಾಗೂ ಕಂಪನಿಗಳ ಜೊತೆ ಹಮ್ಮಿಕೊಂಡಿದ್ದ ಸಭೆಯ ಕುರಿತು ಅವರು ಮಾತನಾಡಿದರು. ಕಂಪನಿಗಳು ಜಿಲ್ಲೆಯ ಭೂಮಿ, ಸಂಪನ್ಮೂಲಗಳು ಹಾಗೂ ನೀರನ್ನು ಬಳಸಿಕೊಂಡು ಕೈಗಾರಿಕೆಗಳನ್ನು ನಡೆಸುತ್ತೀರಿ. ಆದ್ದರಿಂದ ಜಿಲ್ಲೆಯ ಜನರಿಗೆ ಕೊಡುಗೆ ನೀಡಲು ಸಿ.ಎಸ್.ಆರ್ ನಿಧಿಯನ್ನು ಸದ್ಭಳಕೆ ಮಾಡಿ ಎಂದು ತಿಳಿಸಿದರು. 

 ಕೇಂದ್ರದಿಂದ ಕೆ.ಸಿ ವ್ಯಾಲಿ ಯೋಜನೆ ಶ್ಲಾಘನೆ: ಕೋಲಾರ ಜಿಲ್ಲೆಗೆ ಕೆ.ಸಿ ವ್ಯಾಲಿ ನೀರು ಹರಿಯುತಿದ್ದು, ಈಗಾಗಲೇ ಸುಮಾರು 18 ಕೆರೆಗಳು ತುಂಬಿವೆ. ಇದರಿಂದ ಕೈಗಾರಿಕೆಗಳಿಗೆ ಅಗತ್ಯವಾದ ನೀರು ದೊರೆಯುತ್ತದೆ. ಜಿಲ್ಲೆಯ ಅಂತರ್ಜಲ ಮಟ್ಟ ವೃದ್ಧಿಯಾಗಲಿದೆ. ನೀರಿನ ಮರುಬಳಕೆ ಕುರಿತ ವಿಶ್ವದ ಬೃಹತ್ ಯೋಜನೆ ಕೆ.ಸಿ ವ್ಯಾಲಿ ಯೋಜನೆಯಾಗಿದೆ. ಭಾರತ ಸರ್ಕಾರವು ಇದನ್ನು ಜಗತ್ತಿನ ಅತ್ಯುತ್ತಮ ನೀರಿನ ಮರುಬಳಕೆ ಯೋಜನೆ ಎಂದು ಶ್ಲಾಘಿಸಿದ್ದು, ಬೇರೆ ರಾಜ್ಯಗಳು ಈ ರೀತಿ ಯೋಜನೆಯನ್ನು ಅಳವಡಿಸಿಕೊಳ್ಳುವಂತೆ ನಿರ್ದೇಶನ ನೀಡಿರುವುದು ಹೆಮ್ಮೆಯ ವಿಷಯ ಎಂದರು. 

 ಜಿಲ್ಲೆಯ ಕೆರೆಗಳಲ್ಲಿ ಹೂಳು ತೆಗೆದು ಸಮರ್ಪಕವಾಗಿ ಗಡಿ ಗುರ್ತಿಸಿ ಬಂಡು ನಿರ್ಮಿಸಿ, ಕೆರೆಗಳಲ್ಲಿರುವ ಬಳ್ಳಾರಿ ಜಾಲಿ ಗಿಡಗಳನ್ನು ತೆಗೆದು ಕೆರೆ ಸಂರಕ್ಷಣೆ ಮಾಡಬೇಕು. ನರಸಾಪುರ, ಕೋಲಾರದ ಅಮಾನಿಕೆರೆ, ಕೋಡಿಕಣ್ಣೂರು ಕೆರೆ ಹಾಗೂ ಪೆರ್ಜೇನಹಳ್ಳಿ ಕೆರೆಗಳನ್ನು ಅಭಿವೃದ್ಧಿಪಡಿಸಿ ವಾಕಿಂಗ್ ಟ್ರ್ಯಾ ಹಾಗೂ ಬೋಟಿಂಗ್ ವ್ಯವಸ್ಥೆ ನಿರ್ಮಿಸಲು ಕಂಪನಿಗಳು ಸಿ.ಎಸ್.ಆರ್ ಅನುದಾನ ಬಳಕೆ ಮಾಡುವಂತೆ ಸಲಹೆ ನೀಡಿದರು. ಅಲ್ಲದೆ, ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರಾಕ್‍ನ್ನು ಅಳವಡಿಸಲು ಹಾಗೂ ಜಿಲ್ಲೆಯಲ್ಲಿ ಕನಿಷ್ಠ 3 ರಿಂದ 4 ಕಡೆ ಟ್ರ್ರೆಕ್ಕಿಂಗ್ ವ್ಯವಸ್ಥೆಗೆ ಸಿ.ಎಸ್.ಆರ್ ಅನುದಾನವನ್ನು  ಕಂಪನಿಗಳು ಬಳಸುವಂತೆ ಮಾಡಿದರು. 

 ಮಾನ್ಯ ವಿಧಾನಸಭಾಧ್ಯಕ್ಷರಾದ ರಮೇಶ್ ಕುಮಾರ್ ಅವರು ಮಾತನಾಡಿ, ಸಣ್ಣ, ಮಧ್ಯಮ ಹಾಗೂ ಬೃಹತ್ ಕೈಗಾರಿಕೆಗಳು ಪ್ರಮುಖವಾಗಿ ನೀರು ಹಾಗೂ ವಿದ್ಯುತ್ ಸಮಸ್ಯೆಯನ್ನು ಎದುರಿಸುತ್ತಿವೆÉ. ಜಿಲ್ಲೆಗೆ ಕೆ.ಸಿ ವ್ಯಾಲಿ ನೀರು ಬಂದಿದ್ದು, ನೀರಿನ ಸಮಸ್ಯೆ ನೀಗಲಿದೆ. ವೇಮಗಲ್ ಭಾಗದಲ್ಲಿ ಡೆಡಿಕೇಟೆಡ್ ಪವರ್‍ಸ್ಟೇಷನ್ ಅನ್ನು ಸ್ಥಾಪಿಸಿ ಸುತ್ತಲಿನ ಕೈಗಾರಿಕೆಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ ಅವರು ಸಿ.ಎಸ್.ಆರ್ ಅನುದಾನದಲ್ಲಿ ಆಗಸ್ಟ್ 15 ರ ವೇಳೆಗೆ ಸಾಮಾಜಿಕ ಕಳಕಳಿಯುಳ್ಳ ಅಭಿವೃದ್ಧಿ ಕಾರ್ಯಗಳಿಗೆ ಬಳಸಿ ಕೆಲಸಗಳನ್ನು ಪ್ರಾರಂಭಿಸುವಂತೆ ತಿಳಿಸಿದರು. 

 ಯರಗೋಳ್ ಜಲಾಶಯದಿಂದ ಮಾಲೂರು, ಕೋಲಾರ ಹಾಗೂ ಬಂಗಾರಪೇಟೆ ತಾಲ್ಲೂಕುಗಳಿಗೆ ಕುಡಿಯುವ ನೀರನ್ನು ಒದಗಿಸಲಾಗುವುದು. ಜಿಲ್ಲೆಯ ಯುವಕರು ನೀರಿಲ್ಲದೆ ಕೃಷಿ ಮಾಡಲಾಗದೆ ಬೆಂಗಳೂರಿಗೆ ಹೋಗಿ 8 ರಿಂದ 10 ಸಾವಿರಕ್ಕೆ ದುಡಿಯುತ್ತಿದ್ದಾರೆ. ಜಿಲ್ಲೆಯ ಕೆರೆಗಳು ತುಂಬಿ ಜಿಲ್ಲೆಗೆ ನೀರು ದೊರೆಯುವುದರಿಂದ ಹಂತ ಹಂತವಾಗಿ ಅವರು ಕೋಲಾರಕ್ಕೆ ವಾಪಸ್ಸು ಬಂದು ಆಧುನಿಕ ಬೇಸಾಯ ಮಾಡಿ ಸ್ವಾವಲಂಬಿಗಳಾಗಿ ದುಡಿಯಲಿದ್ದಾರೆ. ಆದ್ದರಿಂದ ಕೆ.ಜಿ.ಎಫ್ ನಗರ ಹೊರತುಪಡಿಸಿ ಉಳಿದ ಕೋಲಾರ ಜಿಲ್ಲೆಯ ಭಾಗಗಳಿಗೆ ನೂತನ ಕೈಗಾರಿಕೆಗಳ ಸ್ಥಾಪನೆ ಅವಶ್ಯಕತೆ ಇಲ್ಲ ಎಂದರು. 

 ಸಭೆಯಲ್ಲಿ ಸÀಣ್ಣ ಪ್ರಮಾಣದ ಕೈಗಾರಿಕೆಗಳ ಸಚಿವರಾದ ಹೆಚ್.ನಾಗೇಶ್, ಕೋಲಾರ ಶಾಸಕರಾದ ಕೆ.ಶ್ರೀನಿವಾಸಗೌಡ, ಮಾಲೂರು ಶಾಸಕರಾದ ಕೆ.ವೈ. ನಂಜೇಗೌಡ, ವಿಧಾನ ಪರಿಷತ್ ಸದಸ್ಯರಾದ ತೂಪಲ್ಲಿ ಚೌಡರೆಡ್ಡಿ, ನಸೀರ್ ಅಹಮದ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಯಶೋಧ ಕೃಷ್ಣಮೂರ್ತಿ, ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಜಿ.ಜಗದೀಶ್, ಸೇರಿದಂತೆ ವಿವಿಧ ಕಂಪನಿಗಳ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು

ಮಾಧ್ಯಮಗಳು  ವಾಸ್ತವ ವಿಚಾರಗಳನ್ನು ಜನತೆಗೆ ಮುಟ್ಟಿಸಲಿ-ಕೆ.ಆರ್ ರಮೇಶ್ ಕುಮಾರ್         

ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ 
ಮಾಧ್ಯಮಗಳು  ವಾಸ್ತವ ವಿಚಾರಗಳನ್ನು ಜನತೆಗೆ ಮುಟ್ಟಿಸಲಿ-ಕೆ.ಆರ್ ರಮೇಶ್ ಕುಮಾರ್                                                             
ಕೋಲಾರ, ಜುಲೈ 01 ಪತ್ರಕರ್ತರು ಮಾಧ್ಯಮಗಳ ಮೂಲಕ ಸಮಾಜದಲ್ಲಿ ನಡೆಯುತ್ತಿರುವ ವಾಸ್ತವ ವಿಚಾರಗಳನ್ನು ಜನತೆಗೆ ತಿಳಿಯಪಡಿಸಬೇಕು ಎಂದು ವಿಧಾನಸಭಾಧ್ಯಕ್ಷರಾದ ಕೆ.ಆರ್ ರಮೇಶ್ ಕುಮಾರ್ ಅವರು ತಿಳಿಸಿದರು. 
 ಪತ್ರಕರ್ತರಿಗೆ ವೃತ್ತಿ ಧರ್ಮ ಬಹಳ ಮುಖ್ಯ. ಸುದ್ದಿಯು ಸತ್ಯಕ್ಕೆ ದೂರ ಇದ್ದಾಗ ಸುದ್ದಿಯು ಮಹತ್ವ ಕಳೆದುಕೊಳ್ಳುತ್ತದೆ. ಆದ್ದರಿಂದ ಸುದ್ದಿಯ ಸತ್ಯಾಸತ್ಯತೆಯನ್ನು ತಿಳಿದು ವಾಸ್ತವವನ್ನು ಸುದ್ದಿ ಮಾಡಬೇಕು. ತಪ್ಪು ಸುದ್ದಿಯಿಂದ ನಿರಪರಾಧಿಗಳ ಚಾರಿತ್ಯ್ರವಧೆಯಾಗಬಾರದು ಹಾಗೂ ಸತ್ಯವನ್ನು ಮರೆಮಾಚಬಾರದು. ನಮ್ಮ ಮುಂದೆ ಯಾವ ದೊಡ್ಡ ವ್ಯಕ್ತಿಯ ವಿಚಾರ ಬಂದರೂ ವಿಷಯವು ಮಾತ್ರ ಮುಖ್ಯವಾಗಿರಬೇಕು ವ್ಯಕ್ತಿಯನ್ನು ಪರಿಗಣಿಸಬಾರದು. ಸ್ವೇಚ್ಚಾಚಾರ ಹಾಗೂ ಸ್ವಾತಂತ್ರ್ಯಕ್ಕೆ ತುಂಬಾ ವ್ಯತ್ಯಾಸವಿದೆ ಎಂದ ಪತ್ರಕರ್ತರ ನಿವೇಶನಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಭೆ ಕರೆದು ಸರ್ಕಾರಿ ಜಾಗ ಅಥವಾ ಖಾಸಗಿ ಸ್ಥಳವನ್ನು ಗುರ್ತಿಸಿ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.  
 ಇಂದು ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಕರ್ತರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಮೊದಲ ಪತ್ರಿಕೆ ಮಂಗಳೂರು ಸಮಾಚಾರ್, 1843 ರಲ್ಲಿ ಪ್ರಾರಂಭವಾಯಿತು. ಮನುಷ್ಯ ಶಿಲಾಯುಗವನ್ನು ದಾಟಿ ನಾಗರೀಕ ಜಗತ್ತಿಗೆ ತಲುಪಿದಾಗ ತನ್ನನ್ನು ಪರಿಚಯಿಸಿಕೊಳ್ಳಲು ಇನ್ನೊಬ್ಬರನ್ನು ಅರ್ಥೈಸಲು ಹಾಗೂ ಭಾವನೆಗಳನ್ನು ಒಬ್ಬರಿಂದ ಮತ್ತೊಬ್ಬರಿಗೆ ವಿನಿಮಯ ಮಾಡಿಕೊಳ್ಳಲು ಭಾಷೆ ಅಸ್ತಿತ್ವಕ್ಕೆ ಬಂದಿತು ಎಂದು ತಿಳಿಸಿದರು. 
 ಕೆಲವು ವರ್ಷಗಳ ಕಾಲಘಟ್ಟದಲ್ಲಿ ದೂರದಲ್ಲಿರುವ ಮನುಷ್ಯನಿಗೆ ವಿಚಾರಗಳನ್ನು ತಲುಪಿಸುವುದಕ್ಕೆ ಭಾಷೆಯ ವಿಚಾರಗಳನ್ನು ತಿಳಿಸಲು ಗಿಳಿ, ಪಾರಿವಾಳಗಳ ಮುಖಾಂತರ ಪತ್ರಗಳನ್ನು ರವಾನೆ ಮಾಡುತ್ತಿದ್ದರು. ನಂತರ ದಿನಗಳಲ್ಲಿ ಗ್ರಾಮ ಆಡಳಿತ ವ್ಯವಸ್ಥೆಯಲ್ಲಿ ಗ್ರಾಮ ನೌಕರರು ಕಾರ್ಯನಿರ್ವಹಿಸುತ್ತಿದ್ದರು. ಇಂದು ಪ್ರತಿದಿನದ ಸಮಾಚಾರಗಳನ್ನು ತಿಳಿಸಲು ವರ್ತಮಾನ ಪತ್ರಿಕೆಗಳು ಹೆಚ್ಚು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು. 
  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಮಾತನಾಡಿ, ಪತ್ರಿಕಾ ಮಾಧ್ಯಮ ಹಾಗೂ ಪತ್ರಕರ್ತ ವೃತ್ತಿಗೆ ತನ್ನದೆ ಆದ ಇತಿಹಾಸವಿದೆ. ಸ್ವತಂತ್ರ್ಯ ಪೂರ್ವದಲ್ಲಿ ಪತ್ರಿಕೆಗಳ ಪಾತ್ರ ಬಹಳ ಮುಖ್ಯವಾದದ್ದು.  ಅಭಿವೃದ್ಧಿ ಆಧಾರದ ಪತ್ರಿಕೋದ್ಯಮದ ಇಂದು ಕಡೆಗಣಿಸುತ್ತಿದ್ದು, ಕ್ಷಣ ಕ್ಷಣದ ಮಾಹಿತಿಯನ್ನು ನೀಡುವ ಪೈಪೋಟಿಯ ಕಾಲವಾಗಿದೆ. ಪ್ರಚೋದನಾಕಾರಿ ವಿಷಯಗಳನ್ನು ಪ್ರಕಟಿಸಿದಾಗ ವಿದ್ಯುನ್ಮಾನ ಚಾನಲ್‍ಗಳ ಟಿ.ಆರ್.ಪಿ ಹಾಗೂ ಪತ್ರಿಕೆಗಳ ಸರಬರಾಜು ಹೆಚ್ಚಾಗುತ್ತಿದೆ ಎಂಬ ದೃಷ್ಟಿಕೋನ ಇಂದಿನದ್ದಾಗಿದೆ ಎಂದು ತಿಳಿಸಿದರು. 
 ಪ್ರಜ್ಞಾಪೂರ್ವಕವಾಗಿ ಎಚ್ಚೆತ್ತು ಕಾರ್ಯನಿರ್ವಹಿಸಿದರೆ ವ್ಯಕ್ತಿ ಸ್ವಾತಂತ್ರ್ಯ ಹಾಗೂ ಪತ್ರಿಕಾ ಸ್ವಾತಂತ್ರ್ಯವನ್ನು ಕಾಪಾಡಬಹುದಾಗಿದೆ. ಸಮಾಜದಲ್ಲಿನ ಒಳ್ಳೆಯ ವಿಚಾರಗಳು ಸಾರ್ವಜನಿಕರಿಗೆ ತಲುಪಿಸುವುದು ಪತ್ರಕರ್ತರ ಜವಾಬ್ದಾರಿಯಾಗಬೇಕು ಎಂದು ತಿಳಿಸಿದರು. 
  ಈ ಸಂದರ್ಭದಲ್ಲಿ ಪತ್ರಿಕಾ ರಂಗದಲ್ಲಿ ಸಾಧನೆ ಮಾಡಿದ ಪತ್ರಕರ್ತರಿಗೆ ಸನ್ಮಾನ ಮಾಡಲಾಯಿತು. ಎಸ್.ಎಸ್.ಎಲ್.ಸಿ, ದ್ವಿತೀಯ ಪಿಯುಸಿ ಮತ್ತು ಪದವಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.  
 ಕಾರ್ಯಕ್ರಮದಲ್ಲಿ ಸಣ್ಣ ಪ್ರಮಾಣದ ಕೈಗಾರಿಕೆಗಳ ಸಚಿವರಾದ ಹೆಚ್.ನಾಗೇಶ್, ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಶ್ರೀನಿವಾಸಗೌಡ, ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಜಿ.ಜಗದೀಶ್, ಅಪರ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಾಹ್ನವಿ, ನಿಕಟಪೂರ್ವ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಗಣೇಶ್, ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಗೋಪಿನಾಥ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವಿ. ಮುನಿರಾಜು ಸೇರಿದಂತೆ ಜಿಲ್ಲೆಯ ಪತ್ರಕರ್ತರು ಉಪಸ್ಥಿತರಿದ್ದರು.

ಕುಂದಾಪುರ ರೋಜರಿ ಮಾತಾ ಚರ್ಚ್ ಸಭಾ ಭವನದಲ್ಲಿ ಜುಲಾಯ್ 7 ರಂದು ಸ್ವಯಂ ರಕ್ತದಾನ ಶಿಬಿರ :ರಕ್ತದಾನ ಮಾಡಿ ಜೀವ ಉಳಿಸಿ.

JANANUDI NETWORK

ಕುಂದಾಪುರ ರೋಜರಿ ಮಾತಾ ಚರ್ಚ್ ಸಭಾ ಭವನದಲ್ಲಿ ಜುಲಾಯ್ 7 ರಂದು ಸ್ವಯಂ ರಕ್ತದಾನ ಶಿಬಿರ :ರಕ್ತದಾನ ಮಾಡಿ ಜೀವ ಉಳಿಸಿ.


ಕುಂದಾಪುರ, ಜು.2: ಕಥೊಲಿಕ್ ಸಭಾ ಕುಂದಾಪುರ ಘಟಕ ಇದರ ಮುಂದಾಳಾತ್ವದಲ್ಲಿ, ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇವರ ಆಶ್ರಯದಲ್ಲಿ ರೋಜರಿ ಕ್ರೆಡಿಟ್ ಕೋ.ಒಪರೇಟಿವ್ ಸೊಸೈಟಿ ಸಹಭಾಗಿತ್ವದಲ್ಲಿ ಜುಲಾಯ್ 7 ರಂದು ಚರ್ಚ್ ಸಭಾಭವನದಲ್ಲಿ, ಕುಂದಾಪುರ ರೇಡ್ ಕ್ರಾಸ್ ಸಂಸ್ಥೆಯ ಸಹಕಾರದಿಂದ ಸ್ವಯಂ ರಕ್ತದಾನ ಶಿಬಿರ ನಡೆಯುವುದೆಂದು, ಕಥೊಲಿಕ್ ಸಭಾ ಸಂಸ್ಥೆಯ ಅಧ್ಯಾತ್ಮಿಕ ನಿರ್ದೇಶಕ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು, ವಲಯ ಪ್ರಧಾನರಾದ ಅ|ವಂ|ಸ್ಟ್ಯಾನಿ ತಾವ್ರೊ, ಕಥೊಲಿಕ್ ಸಭಾದ ಅಧ್ಯಕ್ಷ ವಾಲ್ಟರ್ ಡಿಸೋಜಾ, ಕಾರ್ಯಕ್ರಮದ ಸಂಚಾಲಕ, ರೋಜರಿ ಕ್ರೆಡಿಟ್ ಕೋ.ಒಪರೇಟಿವ್ ಸಂಸ್ಥೆಯ ಅಧ್ಯಕ್ಷ ಜಾನ್ಸನ್ ಡಿಆಲ್ಮೇಡಾ, ರೋಟರಿ ಕುಂದಾಪುರ ದಕ್ಷಿಣ, ಇದರ ಅಧ್ಯಕ್ಷ ದೇವರಾಜ್ ಕೆ. ಮತ್ತು ಸದಸ್ಯರು ಹಾಗೂ ಕಥೊಲಿಕ್ ಸಭೆಯ ಪದಾಧಿಕಾರಿಗಳು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.   

      ರಕ್ತದಾನ ಮಾಡಿ ಇನ್ನೊಬರಿಗೆ ಪ್ರಾಣದಾನ ನೀಡುವ ಮಹಾ ಅಮೂಲ್ಯವಾದ ಈ ಕಾರ್ಯಾಕ್ರಮದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ರಕ್ತದಾನ ಮಾಡ ಬೇಕಾಗಿ ವಿನಂತಿಸಿಕೊಂಡಿದ್ದಾರೆ.

      ಈ ರಕ್ತದಾನ ಶಿಬಿರವು ಬೆಳಿಗ್ಗೆ 8 ರಿಂದ ಮಧ್ಯಾನ್ಹ 1 ಗಂಟೆಯ ತನಕ ನಡೆಯಲಿದೆಯೊಂದು ಸಂಘಟಕರು ತಿಳಿಸಿದ್ದಾರೆ. ಈ ರಕ್ತದಾನ ಕಾರ್ಯಕ್ರಮಕ್ಕೆ ಕುಂದಾಪುರ ಚರ್ಚ್ ಕಥೊಲಿಕ್ ಸ್ತ್ರೀ ಸಂಘಟನೆ, ಆರೋಗ್ಯ ಆಯೋಗ, ಭಾರತೀಯ ಕಥೊಲಿಕ್ ಯುವ ಸಂಘಟನೆಗಳು ಸಹಕರಿಸಲಿದ್ದಾರೆಂದು ಸಂಘಟಕರು ತಿಳಿಸಿದ್ದಾರೆ.

ಹಾಗೇ ಕುಂದಾಪುರದ ರೇಡ್ ಕ್ರಾಸ್ ಸಂಸ್ಥೆ ‘ರಕ್ತದಾನ ಮಾಡಿ ಜೀವ ಉಳಿಸಿ’ ಎಂದು ಸಾರ್ವಜನಿಕರಲ್ಲಿ ಕಳಕಳಿಯ ಮನವಿ ಮಾಡಿಕೊಂಡಿದೆ.

ಮಳೆ ನೀರನ್ನು ಭೂಮಿಗೆ ಇಂಗಿಸುವ ಮಹತ್ಕಾರ್ಯಕ್ಕೆ ಕೈಜೋಡಿಸಿ :ಆನಂದ ಸಿ.ಕುಂದರ್

ವರದಿ: ಚಂದ್ರಶೇಖರ, ಬೀಜಾಡಿ 

ಮಳೆ ನೀರನ್ನು ಭೂಮಿಗೆ ಇಂಗಿಸುವ ಮಹತ್ಕಾರ್ಯಕ್ಕೆ ಕೈಜೋಡಿಸಿ :ಆನಂದ ಸಿ.ಕುಂದರ್

 

ಬೀಜಾಡಿಯಲ್ಲಿ ಮಳೆ ನೀರು ಕೊಯ್ಲು ಕಾರ್ಯಾಗಾರ ಉದ್ಘಾಟಿಸಿ ಆನಂದ ಸಿ.ಕುಂದರ್
ಕುಂದಾಪುರ: ಈ ಬಾರಿ ಮಳೆ ವಿಳಂಬವಾಗಿ ನೀರಿನ ಅಭಾವ ನಾವೆಲ್ಲ ಕಂಡಿದ್ದೇವೆ.ಮಳೆಗಾಲದದಲ್ಲಿ ಮಳೆ ನೀರನ್ನು ಹರಿದು ಹೋಗಲು ಬಿಡದೇ ಅದನ್ನು ತಮ್ಮ ವಠಾರದಲ್ಲಿ ಭೂಮಿಗೆ ಇಂಗಿಸುವ ಮಹತ್ಕಾರ್ಯ ಸಾರ್ವಜನಿಕರು ಕೈಜೋಡಿಸಬೇಕು.ಪ್ರತಿಯೊಬ್ಬರ ಮನೆಯಲ್ಲೂ ಮಳೆ ನೀರು ಕೊಯ್ಲು ಘಟಕವಾದರೇ ನೀರಿನ ಅಭಾವ ತಪ್ಪಿಸಬಹುದು ಎಂದು ಕೋಟ ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಹೇಳಿದರು.
ಅವರು ಭಾನುವಾರ ಬೀಜಾಡಿ ಗೋಪಾಡಿ ಮಿತ್ರ ಸಂಗಮ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಥಿ ಯೋಜನೆ ಕೋಟೇಶ್ವರ ವಲಯ,ಕೋಟ ಪಡುಕರೆ ಗೀತಾನಂದ ಫೌಂಡೇಶನ್ ಆಶ್ರಯದಲ್ಲಿ ಬೀಜಾಡಿ ಮಿತ್ರಸೌಧದಲ್ಲಿ ನಡೆದ ಮಳೆ ನೀರು ಕೊಯ್ಲು ಕಾರ್ಯಾಗಾರ,ಪ್ರಾತ್ಯಕ್ಷಿಕೆ ಹಾಗೂ ಸಸಿ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮುಂದಿನ ಪೀಳಿಗೆಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗ ಬೇಕಾದ ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು.ಗಿಡ ಮರಗಳನ್ನು ಬೆಳೆಸಬೇಕು. ಆದರೆ ಇಂದು ಪರಿಸರವನ್ನು ನಾವೇ ನಾಶಮಾಡುತ್ತಿದ್ದೇವೆ. ಇದು ಬೇಸರದ ಸಂಗತಿ. ಇಂದಿನ ಯುವ ಜನತೆ ಪರಿಸರದ ಬಗ್ಗೆ ಅರಿತು ತಮ್ಮ ತಮ್ಮ ಊರಲ್ಲಿ ಸಸಿ ನೆಟ್ಟು ಬೆಳೆಸಿ, ಶುದ್ದ ಗಾಳಿ, ಸಮೃದ್ಧ ಪರಿಸರ ನಿರ್ಮಿಸಬೇಕು ಎಂದರು
ಭಾರತೀಯ ಕಿಸಾನ್ ಸಂಘದ ಕುಂದಾಪುರ ತಾಲೂಕು ಉಪಾಧ್ಯಕ್ಷ, ಪ್ರಗತಿಪರ ಕೃಷಿಕ ಬಿ.ಶೇಷಗಿರಿ ಗೋಟ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಲತಾ ಸುರೇಶ ಶೆಟ್ಟಿ, ಯೋಜನೆಯ ಜಿಲ್ಲಾ ನಿರ್ದೇಶಕ ಗಣೇಶ.ಬಿ ಅತಿಥಿಗಳಾಗಿ ಆಗಮಿಸಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಜಲತಜ್ಞ ಜೋಸೆಫ್ ರೆಬೆಲ್ಲೋ ಸಂಪನ್ಮೂಲ ವ್ಯಕ್ತಿಯಾಗಿ ಮಳೆ ನೀರು ಕೊಯ್ಲು ಬಗ್ಗೆ ವಿವರವಾದ ಮಾಹಿತಿ ನೀಡಿದರು.ವೇದಿಕೆಯಲ್ಲಿ ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ,ಮಿತ್ರ ಸಂಗಮದ ಗೌರವಾಧ್ಯಕ್ಷ ಬಿ.ವಾದಿರಾಜ್ ಹೆಬ್ಬಾರ್,ಕಾರ್ಯದರ್ಶಿ ಚಂದ್ರ ಬಿ.ಎನ್,ಗ್ರಾಮಾಭಿವೃದ್ಥಿ ಯೋಜನೆ ನಾಗರಾಜ್, ಗ್ರಾಮಾಭಿವೃದ್ಥಿ ಯೋಜನೆಯ ಕೇಂದ್ರ ಸಮಿತಿಯ ಅಧ್ಯಕ್ಷೆ ಶೋಭಾ ಚಂದ್, ಬೀಜಾಡಿ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಶಾರದಾ ಮೊದಲಾದವರು ಉಪಸ್ಥಿತರಿದ್ದರು.
ಮಿತ್ರ ಸಂಗಮದ ಅಧ್ಯಕ್ಷ ಮಂಜುನಾಥ್ ಬೀಜಾಡಿ ಸ್ವಾಗತಿಸಿದರು.ಪತ್ರಕರ್ತ ಚಂದ್ರಶೇಖರ್ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ಗ್ರಾಮಾಭಿವೃದ್ಥಿ ಯೋಜನೆಯ ಕೃಷಿ ಅಧಿಕಾರಿ ಚೇತನ್ ಕುಮಾರ್ ವಂದಿಸಿದರು.

ಕುಂದಾಪುರ ಸಂತ ಜೋಸೇಫ್ ಪ್ರೌಢ ಶಾಲೆಯಲ್ಲಿ “ಸ್ಮರಣ ಶಕ್ತಿ ವೃದ್ಧಿ ಮತ್ತು ಜಾಣ ಕಲಿಕೆ” ಕಾರ್ಯಗಾರ

JANANUDI NETWORK

 

ಕುಂದಾಪುರ ಸಂತ ಜೋಸೇಫ್ ಪ್ರೌಢ ಶಾಲೆಯಲ್ಲಿ “ಸ್ಮರಣ ಶಕ್ತಿ ವೃದ್ಧಿ ಮತ್ತು ಜಾಣ ಕಲಿಕೆ” ಕಾರ್ಯಗಾರ


ಕುಂದಾಪುರ, ಜು.1: ಸ್ಥಳಿಯ ಸಂತ ಜೋಸೇಫ್ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ “ಸ್ಮರಣ ಶಕ್ತಿ ವೃದ್ಧಿ ಮತ್ತು ಜಾಣ ಕಲಿಕೆ” ಎನ್ನುವ ವಿಷಯದ ಮೇಲೆ ಒಂದು ದಿನದ ಕಾರ್ಯಗಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರೋಫೆಸರ್ ಮೆಲ್ವಿನ್ ಡಿ’ಸೋಜರವರು ಆಗಮಿಸಿ ‘ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಹೇಗೆ ಶಿಕ್ಷಣ ಪಡೆಯಬೇಕು ಮತ್ತು ಪಾಠಗಳ ವಿಷಯವನ್ನು ಹೇಗೆ ನೆನಪಿನಲ್ಲಿ ಇಟ್ಟು ಕೊಳ್ಳಬೇಕು’ ಎಂದು ಕಾರ್ಯಗಾರದಲ್ಲಿ ಮಾಹಿತಿ ನೀಡಿ ವಿದ್ಯಾರ್ಥಿಗಳು ಕಠಿಣವಾದ ಪರಿಶ್ರಮದಿಂದ ಓದುವುದರ ಬದಲು ಜಾಣತನದಿಂದ ಹೇಗೆ ಓದಬೇಕು ಎಂದು ವಿವಿಧ ಉದಾರಣೆಯ ಮೂಲಕ ಹಾಗೂ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.
ಕಾರ್ಯಗಾರದ ನಂತರ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಸಂತ ಜೋಸೇಫ್ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲ್ಪಿಸುವ ಸಲುವಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಒಳ್ಳೆಯ ಶಿಕ್ಷಣದ ಜೊತೆಗೆ ಒಳ್ಳೆಯ ಪ್ರಜೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸುತಿದ್ದೆವೆ’ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಶಿಕ್ಷಕಿ ಸಿಸ್ಟರ್ ಸಿಲ್ವಿಯ ತಿಳಿಸಿದರು. ಶಾಲೆಯ ಶಿಕ್ಷಕ ಮೈಕಲ್ ಪುರ್ಟಾಡೊ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿ, ಸ್ವಾಗತಿಸಿ, ಕಾರ್ಯಕ್ರಮ ನೆಡೆಸಿಕೊಟ್ಟರು.

ಕೊಂಕ್ಣೆಂತ್ಲೊ ಮಲ್ಘಡೊ ಸಾಹಿತಿ ವಾಲ್ಟರ್ ಲಾಸ್ರಾದೊ ಅಂತರ್ಲೊ Walter Lasrado, Nakre. (1948-2019)

ಕೊಂಕ್ಣೆಂತ್ಲೊ ಮಲ್ಘಡೊ ಸಾಹಿತಿ ವಾಲ್ಟರ್ ಲಾಸ್ರಾದೊ ಅಂತರ್ಲೊ

Walter Lasrado, Nakre. (1948-2019)

ಮುಂಬಯ್, ಮಲಾಡ್ ಜು. 1: ಕೊಂಕ್ಣೆಂತ್ ಪಾಟ್ಲ್ಯಾ ಪನ್ನಾಸ್ ವರ್ಸಾಂ ಥಾವ್ನ್ ಸಾಹಿತ್ಯ ಸೆವಾ ದಿಲ್ಲೊ ನಾಂವಾಡ್ದಿಕ್ ಬರವ್ಪಿ ವಾಲ್ಟರ್ ಲಾಸ್ರಾದೊ ಅಂತರ್ಲೊ. ಗಾಂವಾಂತ್ ಕಾರ್ಕಳ್ ನಕ್ರೆಚೊ ವಾಲ್ಟರ್ ಥೊಡ್ಯಾ ಅವ್ದೆಚ್ಯಾ ಪೀಡೆಂತ್ ಪಡೊನ್ ಮುಂಬಯ್ ಮಲಾಡ್ ಜುಲಾಯಾಚ್ಯಾ ಎಕ್ ವೆರ್ ಅಂತರ್ಲೊ.
ವಾಲ್ಟರ್ ಲಸ್ರಾದೊ, ಏಕ್ ಬರೊ ಬರವ್ಪಿ ಮಾತ್ರ್ ನ್ಹಯ್, ಏಕ್ ಬರೊ ಅನುವಾದ್ ಕರ್ತ್. ತಾಣೆ ಕೊಂಕ್ಣೆತ್ಲ್ಯಾ ಸಭಾರ್ ಪತ್ರಾನಿಂ ಸಹ ಸಂಪಾದಕ್ ಜಾವ್ನ್ ಸೆವಾ ದಿಲ್ಯಾ. ಕಾಣಿಕ್, ದಿವೊ, ಪಯ್ಣಾರಿ ಡಾಟ್.ಕೊಮ್ ಹಾಂತುನ್ ಸಲಹ ಮಂಡಳೆಚೊ ಸಾಂದೊ ಜಾವ್ನಾಸ್ಲೊ.
ಮೊವಾಳ್ ಮೊಗಾಳ್ ಮನಾಚೊ, ಮಾನಾಚೊ ವ್ಯಕ್ತಿ ಜಾವ್ನಾಸ್ಲೊ. ವಾಲ್ಟರಾನ್ ಜಾಯ್ತೆ ಸಾಹಿತ್ಯ್ ಬರಯ್ಲಾ. ಅನುವಾದ್ ಕರ್ಚ್ಯಾಂತ್ ಭೋವ್ ಫಾಮಾದ್ ಜಾವ್ನಾಸ್ಲೊ ವಾಲ್ಟರ್. ಇಶಿಲ್ಯಾ ವರ್ಸಾಂನಿಂ ಪಯ್ಣಾರಿ ಡಾಟ್.ಕೊಮ್ ಹಾಂಚ್ಯಾ ಆಶಾವಾದಿ ಪ್ರಕಾಶನ ಥಾವ್ನ್ ಹಾಂಚೆಂ ಪುಸ್ತಕ್ ಪರ್ಗಟ್ ಕೆಲ್ಲೆಂ.
ಸಾಹಿತಿ ವಾಲ್ಟರ್ ಲಸ್ರಾದೊಚ್ಯಾ ಮರ್ಣಾ ಥಂಯ್ ಜನನುಡಿ. ಡಾಟ್.ಕೊಮ್ ಸಂತಾಪ್ ಉಚಾರ್ತಾ, ಆನಿ ತಾಚ್ಯಾ ಅತ್ಮ್ಯಾಕ್ ಶಾಂತಿ ಮಾಗೊನ್ ಶ್ರದ್ದಾಂಜಲಿ ಅರ್ಪಿತಾ, ತಶೆಂಚ್ ತಾಚ್ಯಾ ದುಖೆಸ್ತ್ ಕುಟ್ಮಾಕ್, ಭುಜಾವಣ್ ಪಾಟಯ್ತಾ.

 

ಕೋಲಾರ ಪತ್ರಕರ್ತರ ಸಂಘದಿಂದ ಜುಲೈ 1ರಂದು ಪತ್ರಿಕಾ ದಿನಾಚರಣೆ ವಾರ್ಷಿಕ ಪ್ರಶಸ್ತಿಗಳ ಪ್ರಧಾನ – ಪ್ರತಿಭಾ ಪುರಸ್ಕಾರ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ ಪತ್ರಕರ್ತರ ಸಂಘದಿಂದ ಜುಲೈ 1ರಂದು ಪತ್ರಿಕಾ ದಿನಾಚರಣೆ ವಾರ್ಷಿಕ ಪ್ರಶಸ್ತಿಗಳ ಪ್ರಧಾನ – ಪ್ರತಿಭಾ ಪುರಸ್ಕಾರ

ಕೋಲಾರ: ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು 19ನೇ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ.
ಜುಲೈ 1ರಂದು ಸೋಮವಾರ ನಗರದ ಪತ್ರಕರ್ತರ ಭವನದಲ್ಲಿ ನಡೆಯುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಧ್ಯಕ್ಷ ವಿ.ಮುನಿರಾಜು ಮತ್ತು ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ ಸುರೇಶ್‍ಕುಮಾರ್ ತಿಳಿಸಿದ್ದಾರೆ.
ಸಂಘದ ವತಿಯಿಂದ ನೀಡಲಾಗುವ ಪ್ರಶಸ್ತಿಗಳು:
ಜಿ.ನಾರಾಯಣಸ್ವಾಮಿ ಅವರ ನೆನಪಿನಲ್ಲಿ: ಮಾಲೂರಿನ ಹವ್ಯಾಸಿ ಪತ್ರಕರ್ತ ಜಾನ್‍ಆಲ್ಮೇಡ, ಕೆ.ಆರ್.ಕೃಷ್ಣಸ್ವಾಮಿ ಅವರ ನೆನಪಿನಲ್ಲಿ: ಕೋಲಾರದ ಸಂಜೆವಾಣಿ ಜಿಲ್ಲಾ ವರದಿಗಾರ ಕೆ.ಬಿ ಜಗದೀಶ್, ಬಿ.ವಿ.ನರಸಿಂಹಮೂರ್ತಿ ಅವರ ನೆನಪಿನಲ್ಲಿ: ಕೋಲಾರ ಶಕ್ತಿ ಹೋಬಳಿ ವರದಿಗಾರ ಬೂದಿಕೋಟೆ ಬಿ.ಎನ್ ಸುದರ್ಶನ್,
ಎಂ.ಮಲ್ಲೇಶ್ ನೆನಪಿನಲ್ಲಿ: ಬಿ.ಟಿ.ವಿ ಮಾಧ್ಯಮ ಛಾಯಾಗ್ರಾಹಕ ಬಿ.ಅಮರನಾಥ್, ಹೆಚ್.ಎನ್.ಸೋಮಶೇಖರಗೌಡ ನೆನಪಿನಲ್ಲಿ: ಶ್ರೀನಿವಾಸಪುರ ಇಂದು ಸಂಜೆ ತಾಲೂಕು ವರದಿಗಾರ ಎಂ.ನಾರಾಯಣಸ್ವಾಮಿ, ಬಿ.ಎನ್.ಗುರುಪ್ರಸಾದ್ ನೆನಪಿನಲ್ಲಿ: ಟಿ.ವಿ.9 ಜಿಲ್ಲಾ ವರದಿಗಾರ ಬಿ.ಎಲ್.ರಾಜೇಂದ್ರಸಿಂಹ,
ಬಿ.ಆರ್ಮುಗಂ ನೆನಪಿನಲ್ಲಿ: ಕೆ.ಜಿ.ಎಫ್‍ನ ತಮಿಳು ಮುರುಸು ಜಿಲ್ಲಾ ವರದಿಗಾರ ಎಸ್.ಭಾಸ್ಕರನ್, ಸಿ.ಎಂ.ರಂಗಾರೆಡ್ಡಿ ನೆನಪಿನಲ್ಲಿ : ರಾಷ್ಟ್ರೀಯ ಸಹಾರಾ ಜಿಲ್ಲಾ ವರದಿಗಾರ ಜಹೀರ್‍ಆಲಂ, ವಿ.ಎಂ.ನಾಗಪ್ಪ ಅವರ ನೆನಪಿನಲ್ಲಿ : ವಿಜಯವಾಣಿ ಹೋಬಳಿ ವರದಿಗಾರ ವಿ.ಮುನಿಸ್ವಾಮಿಗೌಡ ಅವರನ್ನು ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.
ಜುಲೈ 1 ರಂದು ನಡೆಯುವ ಪತ್ರಿಕಾ ದಿನಾಚರಣೆಯಲ್ಲಿ ಪತ್ರಕರ್ತರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಗುವುದು. ಹಿರಿಯ ಪತ್ರಕರ್ತ
ದಿವಂಗತ ಎಂ.ಮಲ್ಲೇಶ್ ಕುರಿತು ಕೈಪಿಡಿಯನ್ನು ಬಿಡುಗಡೆ ಮಾಡಲಾಗುವುದು.
ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‍ಕುಮಾರ್ ಅವರಿಂದ ಕಾರ್ಯಕ್ರಮ ಉದ್ಘಾಟನೆ, ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ರವರು ಅಧ್ಯಕ್ಷತೆ ವಹಿಸುವರು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‍ರಾಜ್ ಸಚಿವ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿಗಳಾದ ಕೃಷ್ಣಬೈರೇಗೌಡ ಅವರಿಂದ ಪ್ರಶಸ್ತಿ ವಿಜೇತರಿಗೆ ಪುರಸ್ಕಾರ, ಸಣ್ಣ ಕೈಗಾರಿಕಾ ಸಚಿವ ಹೆಚ್. ನಾಗೇಶ್ ಅವರಿಂದ ಗುರುತಿನ ಚೀಟಿ ವಿತರಣೆ, ಲೋಕಸಭಾ ಸದಸ್ಯ ಎಸ್.ಮುನಿಸ್ವಾಮಿ ಅವರಿಂದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಶಾಸಕರಾದ ಕೆ.ಶ್ರೀನಿವಾಸಗೌಡ ಅವರಿಂದ ಕೈಪಿಡಿ ಬಿಡುಗಡೆ ನೆರವೇರಲಿದೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಜೆ.ಮಂಜುನಾಥ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಜಗದೀಶ್, ಜಿಲ್ಲಾ ರಕ್ಷಣಾಧಿಕಾರಿ ಕಾರ್ತಿಕ್‍ರೆಡ್ಡಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಜಿಲ್ಲೆಯ ಸಮಸ್ತ ಪತ್ರಕರ್ತರು ಆಗಮಿಸಲು ಸಂಘದ ಪ್ರಕಟಣೆ ಕೋರಿದೆ.