HOLY ROSARY CHURCH, KUNDAPUR – 450 th JUBILEE SOUVENIR 2021

ಸಹಾಯ ಮಾಡುವಾಗ ಜಾತಿ,ಪಕ್ಷವಲ್ಲ, ಮಾನವತ್ವ ಇರಬೇಕು ನನಗೆ ಗೌಡರಿಗೆ ಗಿಲಿಟ್ ರಾಜಕಾರಣ ಗೊತ್ತಿಲ್ಲ-ರಮೇಶ್‍ಕುಮಾರ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಸಹಾಯ ಮಾಡುವಾಗ ಜಾತಿ,ಪಕ್ಷ ಮುಖ್ಯವಲ್ಲ ಮಾನವತ್ವ ಇರಬೇಕು ಎಂಬ ಭಾವನೆಯಿಂದ ನಾನು,ಶ್ರೀನಿವಾಸಗೌಡರು ಕೆಲಸ ಮಾಡಲು ಬಂದವರು, ನಮಗೆ ಗಿಲಿಟ್ ರಾಜಕಾರಣ ಗೊತ್ತಿಲ್ಲ ಎಂದು ಮಾಜಿ ವಿಧಾನಸಭಾಧ್ಯಕ್ಷ ಹಾಗೂ ಶಾಸಕ ಕೆ.ಆರ್.ರಮೇಶ್‍ಕುಮಾರ್ ತಿಳಿಸಿದರು.
ಶುಕ್ರವಾರ ತಾಲ್ಲೂಕಿನ ಹೋಳೂರು ಸೊಸೈಟಿ ಆವರಣದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ವತಿಯಿಂದ ರೈತರಿಗೆ 1.5 ಕೋಟಿ ರೂ ಕೆಸಿಸಿ ಸಾಲ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ನಾನು ನಂಬಿರುವ ಬಾಬಾರ ಮೇಲೆ ಆಣೆ ಮಾಡಿ ಹೇಳುತ್ತೇನೆ, ಇಂತಹ ಸಾಮಾಜಿಕ ಕೆಲಸಗಳಲ್ಲಿ ಎಂದು ಜಾತಿ ಪಕ್ಷ ನೋಡುವುದಿಲ್ಲ ಆದರೆ ಕೆಲವರಿಗೆ ಕೂತರೆ,ನಿಂತರೆ ಅದೇ ಚಿಂತೆ ಎಂದು ತಮ್ಮ ವಿರೋಧಿಗಳಿಗೆ ತಿರುಗೇಟು ನೀಡಿದರು.
ಶ್ರೀನಿವಾಸಗೌಡರದ್ದು ಎಳೆ ಮಗುವಿನ ಮನಸ್ಸು, ಇಂತಹವರು ರಾಜಕಾರಣದಲ್ಲಿ ಇದ್ದರೆ ಮಾತ್ರ ರಾಜಕಾರಣಕ್ಕೆ ಗೌರವ ಎಂದ ಅವರು, ನಮ್ಮ ಬಗ್ಗೆ ಕೆಲವರಿಗೆ ಹೊಟ್ಟೆಉರಿ, ಏನು ಮಾಡುವುದು ಕ್ಯಾನ್ಸರ್‍ಗೆ ಔಷಧಿ ಇದೆ, ಅಸೂಯೆಗೆ ಔಷಧಿ ಇಲ್ಲ ಎಂದರು.
ಮಕ್ಕಳಾಗದೇ ಇರೋರಿಗೆ ಮಕ್ಕಳಾಗೋರ ಬಗ್ಗೆ ಹೊಟ್ಟೆ ಉರಿ, ಏನು ಮಾಡೋದು ನನಗೆ ವರ್ಷಕ್ಕೊಂದು ಮಗು ಆಗುತ್ತಿದೆ, ಕೆಸಿ ವ್ಯಾಲಿ ಆಯಿತು, ಎತ್ತಿನಹೊಳೆ ಆಯಿತು, ವಸತಿ ಯೋಜನೆ,ಈ ಸ್ತ್ರೀಶಕ್ತಿ ಸಂಘಗಳಿಗೆ,ರೈತರಿಗೆ ಸಾಲಯೋಜನೆ ಹೀಗೆ ಎಂದು ತಿಳಿಸಿ ಅಭಿವೃದ್ದಿ ಕೆಲಸಗಳಿಗೆ ಅರ್ಜಿ ಹಾಕಿ ಅಡ್ಡಿಪಡಿಸುವವರ ವಿರುದ್ದ ವ್ಯಂಗ್ಯವಾಗಿ ಕಿಡಿಕಾರಿದರು.


ಬ್ಯಾಂಕ್ ವಿರುದ್ದದಟೀಕೆಗೆ ತಿರುಗೇಟು


ಮಡಿಕೆ ಚೂರುಗಳಾಗಿದ್ದ ಡಿಸಿಸಿ ಬ್ಯಾಂಕನ್ನು ಗೋವಿಂದಗೌಡರು ಸುಂದರ ಮಡಿಕೆ ಮಾಡಿದ್ದಾರೆ, ಅದನ್ನು ಹೇಗೆ ಹಾಳು ಮಾಡೋದು ಎಂಬ ಚಿಂತೆ ಕೆಲವರನ್ನು ಕಾಡುತ್ತಿದೆ ಇಂತಹವರಿಗೆ ದೇವರೇ ಒಳ್ಳೆಯ ಬುದ್ದಿ ಕೊಡಬೇಕು, ಇಲ್ಲವಾದರೆ ಜನ ಎಂದಿಗೂ ಕ್ಷಮಿಸಲ್ಲ ಎಂದು ಡಿಸಿಸಿ ಬ್ಯಾಂಕ್ ವಿರುದ್ದದ ಟೀಕಾಕಾರರಿಗೆ ಎಚ್ಚರಿಕೆ ನೀಡಿದರು.
ಹೋಳೂರು ಸೊಸೈಟಿ ಸಾಲ ನೀಡಿಕೆಯಲ್ಲಿ ನಿರ್ಲಕ್ಷ್ಯತೆ ಕಂಡು ಆಕ್ರೋಶ ವ್ಯಕ್ತಪಡಿಸಿದ ರಮೇಶ್‍ಕುಮಾರ್, ಹೊಸ ಸದಸ್ಯರೂ ಇಲ್ಲ, ಜನರಿಗೆ ಪ್ರಯೋಜನವೂ ಇಲ್ಲ ಇಂತಹ ಸೊಸೈಟಿ ಬೇಕಾ ಎಂದು ಪ್ರಶ್ನಿಸಿ, ಎಷ್ಟು ಸಾಲ ನೀಡಿದೆವು ಎಂಬುದಕ್ಕಿಂತ ಎಷ್ಟು ಕುಟುಂಬಗಳಿಗೆ ಸಾಲ ಕೊಟ್ಟೆವು ಎಂಬುದು ಮುಖ್ಯ, ಹೋಳೂರು ಸೊಸೈಟಿ ವ್ಯಾಪ್ತಿಯ 25 ಹಳ್ಳಿಗಳ ಪ್ರತಿ ಕುಟುಂಬವೂ ಸೊಸೈಟಿ ಸದಸ್ಯತ್ವ ಪಡೆಯುವಂತೆ ಮಾಡಿ ಎಂದು ಸೂಚಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬೆಳೆದ ಬೆಳೆಗೆ ಬೆಲೆ ಸಿಗದೇ ಸಂಕಷ್ಟ ಅನುಭವಿಸುತ್ತಿರುವ ಕೃಷಿಕರ ನೆರವಿಗೆ ನಿಲ್ಲುತ್ತೇನೆ, ಪ್ರತಿ ಜಿಲ್ಲೆಯಲ್ಲಿ ಡಿಸಿ ಅಧ್ಯಕ್ಷತೆಯಲ್ಲಿ ರೈತರೇ ಸದಸ್ಯರಾಗಿರುವ ಸಮಿತಿ ರಚಿಸಿ, ಬೆಳೆಯುವ ಬೆಳೆಯ ಖರ್ಚು ಲೆಕ್ಕ ಹಾಕಿ ರೈತರಿಗೆ ನಷ್ಟವಾಗದಂತೆ ಬೆಳೆಗಳಿಗೆ ಬೆಲೆ ನಿಗಧಿ ಮಾಡುವ ಕುರಿತು ಗೆಜೆಟ್‍ನಲ್ಲಿ ಪ್ರಕಟಣೆ ಹೊರಡಿಸಿ ಕಾರ್ಯಗತ ಮಾಡುವುದಾಗಿ ಘೋಷಿಸಿದರು.


ಗೆಲುವಿಗೆ ಕಾರಣ ರಮೇಶ್‍ಕುಮಾರ್


ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ನನ್ನ ಗೆಲುವಿಗೆ ರಮೇಶ್ ಕುಮಾರ್ ಕಾರಣ,ಅವರ ಕ್ಷೇತ್ರ ಬಿಟ್ಟು ನನ್ನಪರ ಕೆಲಸ ಮಾಡಿದರು ಎಂದು ಸ್ಮರಿಸಿ, ಹೋಳೂರು ಹೋಬಳಿ ಸದಾ ನನ್ನ ಬೆನ್ನೆಲುಬಾಗಿ ನನಗೆ ಬೆಂಬಲ ನೀಡಿದೆ ಎಂದರು.
ಬ್ಯಾಲಹಳ್ಳಿ ಗೋವಿಂದಗೌಡರಿಂದ ಡಿಸಿಸಿ ಬ್ಯಾಂಕ್ ರಾಜ್ಯದಲ್ಲೇ ನಂ.1 ಆಗಿದೆ, 2 ಜಿಲ್ಲೆಗಳ ರೈತರು,ಮಹಿಳೆಯರ ಬದುಕಿಗೆ ಆಸರೆಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿ, ಇಂದಿನ ರಾಜಕಾರಣ ನಮ್ಮಂತಹವರಿಗಲ್ಲ, ದರೋಡೆ ಕೋರರಿಗೆ ಎಂಬಂತಾಗುತ್ತಿದೆ ಎಂದು ವಿಷಾದಿಸಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಹೋಳೂರು ಸೊಸೈಟಿ ಸಿಇಒ ಮತ್ತು ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡು, ಪಕ್ಕದ ಅಣ್ಣಿಹಳ್ಳಿ ಸೊಸೈಟಿಯಲ್ಲಿ 500 ಎಸ್‍ಎಸ್‍ಜಿಗಳ ರಚನೆಯಾಗಿ ಸಾಲ ನೀಡಿದ್ದೇವೆ, ನಿಮಗೆ ಕೆಲಸ ಮಾಡಲು ಏನು ಕಷ್ಟ ಎಂದು ಪ್ರಶ್ನಿಸಿದರು.
ಸೊಸೈಟಿ ಗಣಕೀಕರಣ ಮುಗಿಸಿಲ್ಲ, ಸಾಲ ನೀಡಲ್ಲ, ನಿಮಗೆ ಬಡವರಿಗೆ ನೆರವಾಗುವ ಇಚ್ಚಾಶಕ್ತಿ ಇಲ್ಲ ಎಂದು ಟೀಕಿಸಿ, ರೈತರಿಗೆ ನೀಡುತ್ತಿರುವ ಸಾಲದ ಹಣವನ್ನು ಎಟಿಎಂ ಮೂಲಕವೇ ಡ್ರಾಗೆ ಅವಕಾಶ ಕಲ್ಪಿಸಲಾಗಿದೆ, ಭ್ರಷ್ಟತೆಗೆ ಎಡೆ ಇಲ್ಲ, ಆದರೂ ಈ ವ್ಯವಸ್ಥೆ ಮೇಲೆ ಟೀಕೆ ಮಾಡುವವರಿಗೆ ದೇವರು ಒಳ್ಳೆಯದು ಮಾಡಲಿ ಎಂದರು.
ಕೋಚಿಮುಲ್ ಮಾಜಿ ನಿರ್ದೇಶಕ ಬ್ಯಾಟಪ್ಪ, ಪಕ್ಷಬೇಧವಿಲ್ಲದೇ ಮಹಿಳಾ ಸಂಘಗಳನ್ನು ರಚಿಸಿ, ರೈತರು ಸೇರಿದಂತೆ 10 ಕೋಟಿ ರೂ ಸಾಲ ನೀಡುವಂತಾಗಬೇಕು, ಎಂದು ತಿಳಿಸಿ ಹೋಳೂರು ವ್ಯಾಪ್ತಿಯಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಅರ್ಜಿ ಹಾಕಿ ಕಿರಿಕಿರಿಯುಂಟು ಮಾಡುವವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ, ಎಂ.ಎಲ್.ಅನಿಲ್‍ಕುಮಾರ್, ವೆಂಕಟರೆಡ್ಡಿ, ಎಸ್.ವಿ.ಸುಧಾಕರ್, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್,ಮುಖಂಡರಾದ ಅಣ್ಣಿಹಳ್ಳಿ ನಾಗರಾಜ್, ಸೊಣ್ಣೇಗೌಡ,ಕೃಷ್ಣಾರೆಡ್ಡಿ, ಸೊಸೈಟಿ ಅಧ್ಯಕ್ಷ ನಾರಾಯಣಸ್ವಾಮಿ, ಮುಖಂಡರಾದ ನೆನುಮನಹಳ್ಳಿ ಚಂದ್ರಶೇಖರ್,ಎಂ.ವಿ.ಮಂಜುನಾಥ್,ರಾಮಚಂದ್ರಪ್ಪ, ಶ್ರೀನಿವಾಸರೆಡ್ಡಿ, ಮುನೇಗೌಡ, ನುಕ್ಕನಹಳ್ಳಿ ಶ್ರೀನಿವಾಸ್, ವೆಂಕಟೇಶಪ್ಪ, ಶ್ರೀರಾಮಮಪ್ಪ, ಸೊಸೈಟಿ ಸಿಇಒ ನಾರಾಯಣರೆಡ್ಡಿ ಮತ್ತಿತರರಿದ್ದರು.

ಜನರ ಸಮಸ್ಯೆ ನಿವಾರಣೆಗೆ ಒಟ್ಟಾಗಿ ಶ್ರಮಿಸುವುದು ತಪ್ಪೇ-ರಮೇಶ್‍ಕುಮಾರ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ನೀರಿನ ಸಮಸ್ಯೆ ನಿವಾರಣೆ ಸೇರಿದಂತೆ ಜನರಿಗಾಗಿ ಒಳ್ಳೆಯ ಕೆಲಸ ಮಾಡುವುದಕ್ಕೆ ನಾನು ಶ್ರೀನಿವಾಸಗೌಡರು ಒಟ್ಟಾಗಿ ಶ್ರಮಿಸಿದ್ದೇವೆ, ಇಂತಹ ಕಾರ್ಯಗಳಿಗೆ ಕಾಂಗ್ರೆಸ್ ಆದರೆ ಏನು, ಜನತಾದಳ ಆದರೆ ಏನು ಎಂದು ಶಾಸಕ ಕೆ.ಆರ್.ರಮೇಶ್‍ಕುಮಾರ್ ತಿಳಿಸಿದರು.
ತಾಲ್ಲೂಕಿನ ಹೋಳೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಜನರಿಗೆ ನೀರು, ರಸ್ತೆ ಮತ್ತಿತರ ಜನಪರವಾದ ಒಳ್ಳೆಯ ಕೆಲಸ ಮಾಡುವುದಕ್ಕೆ, ಸಂಕಷ್ಟದಲ್ಲಿರುವವರಿಗೆ ಸಾಲ ಒದಗಿಸಲು ನಾನು ಶ್ರೀನಿವಾಸಗೌಡರು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಇದು ತಪ್ಪೇ ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು.
ಶ್ರೀನಿವಾಸಗೌಡರು ಹುಟ್ಟಿ ಬೆಳೆದ ಜಾಗವಿದು, ನಂತರ ಅವರು ಅಲ್ಲಿಗೆ
ಬಂದಿದ್ದಾರೆ. ಜನರಿಗೆ ಒಳ್ಳೆಯ ಕೆಲಸ ಆಗಬೇಕೆನ್ನುವ ಕಾರಣಕ್ಕೆ ನಾವಿಬ್ಬರೂ ಒಟ್ಟಿಗೆ ಇದ್ದೇವೆ ಇದರಲ್ಲಿ ತಪ್ಪು ಹುಡುಕಬೇಡಿ ಎಂದು ಕೋರಿದರು.
ಒಳ್ಳೇಯ ಕೆಲಸ ಜತೆಯಾಗಿ ಮಾಡಿದರೆ ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಏಕೆ ಎಂದು ಪ್ರಶ್ನಿಸಿ, ಅವರು ಸೇರಿದರೂ ಅಷ್ಟೇ ಸೇರದಿದ್ದರೂ ಅಷ್ಟೇ ಜನರ ಕೆಲಸ ಮಾಡಬೇಕು ಮಾಡುತ್ತಲೇ ಇರ್ತೀವಿ ಎಂದರು.
ಕೆಲವರಿಗೆ ಮಾಡೋದಕ್ಕೆ ಬೇರೇ ಏನು ಕೆಲಸವಿಲ್ಲ,ಹೀಗೆಲ್ಲಾ ಪ್ರಚಾರ ಮಾಡುತ್ತಾರೆ,ನಮಗೆ ಜನರು ಮತ್ತು ಅವರ ನೆಮ್ಮದಿ ಮುಖ್ಯ ಎಂದರು.
ಇನ್ನು ನೂತನ ಸಿಎಂ ಬಸವರಾಜ ಬೊಮ್ಮಾಯಿ ಸರಕಾರ ಉಳಿಯುತ್ತದೆಯಾ
ಎನ್ನುವ ಪ್ರಶ್ನೆಗೆ ಗೊತ್ತಿಲ್ಲಪ್ಪಾ. ನಾನೇನು ಜೋತಿಷ್ಯ ಹೇಳುತ್ತೀನಾ? ಬೆಲ್ಲ
ಇರುವ ಕಡೆ ನೊಣ ಬರುತ್ತದೆ ಹಾಗೆಯೇ ಕಿತ್ತಾಟ ಅದು ಇದು ಸಾಮಾನ್ಯ ಎಂದು ಪ್ರತಿಕ್ರಿಯಿಸಿದರು.

ಕೋಟೇಶ್ವರದ ರಾಮ ಎಂಬ ಶ್ರೀಮಂತ ಭಿಕ್ಷುಕನ ಕಥೆ – ವ್ಯಥೆ : ಹೇಗಿದ್ದ – ಹೇಗಾದ

ವರದಿ : ಕೆ.ಜಿ.ವೈದ್ಯ,ಕುಂದಾಪುರ

ಕುಂದಾಪುರ : ಇಲ್ಲಿಗೆ ಸಮೀಪದ ಕೋಟೇಶ್ವರದ ಪ್ರಸಿದ್ಧ ಶ್ರೀ ಕೋಟಿಲಿಂಗೇಶ್ವರ ದೇವಾಲಯದ ಹೊರ ಜಗುಲಿಯನ್ನೇ ಮನೆ ಮಾಡಿಕೊಂಡು ಸುಮಾರು 30 ವರ್ಷಗಳಿಂದಲೂ ವಾಸಿಸುತ್ತಾ, ಭಿಕ್ಷಾಟನೆಯಿಂದಲೇ ಜೀವನ ನಿರ್ವಹಣೆ ಮಾಡುತ್ತಿದ್ದ ಭಿಕ್ಷುಕನೊಬ್ಬನನ್ನು ಸೋಮವಾರ ಉಡುಪಿ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಈತನ ತೀವ್ರ ಅನಾರೋಗ್ಯದಿಂದಾಗಿ ದೇವಾಲಯ ಆಡಳಿತ ಸಮಿತಿಯವರ ವಿನಂತಿಯ ಮೇರೆಗೆ ಕೋಟದ ಆಪತ್ಬಂಧು ಜೀವನ್ಮಿತ್ರ ನಾಗರಾಜ ಅವರು ಈ ಭಿಕ್ಷುಕನನ್ನು ಆಸ್ಪತ್ರೆಗೆ ಸೇರಿಸುವಲ್ಲಿ ಸಹಕರಿಸಿದರು.


ಭಿಕ್ಷುಕನ ಹಿನ್ನೆಲೆ

ಭಿಕ್ಷುಕ ಸುಮಾರು 57 ವರ್ಷ ಪ್ರಾಯದವನಾಗಿದ್ದು, ತನ್ನ ಹೆಸರು ರಾಮ ಎಂದಷ್ಟೇ ಹೇಳುತ್ತಾನೆ. ಊರು, ಮನೆ ಬಗ್ಗೆ ವಿಚಾರಿಸಿದರೆ, ಕೋಟಿಲಿಂಗೇಶ್ವರ ದೇವಾಲಯವೇ ತನ್ನ ಮನೆ ಎನ್ನುತ್ತಾನೆ. ಆದರೆ, ದೇವಾಲಯ ವಠಾರದಲ್ಲಿ ಇಷ್ಟೊಂದು ಸುದೀರ್ಘ ಅವಧಿ ವಾಸಿಸಲು ಪೊಲೀಸರು ಅವಕಾಶ ಕೊಡುವುದಿಲ್ಲ. ಮಾತ್ರವಲ್ಲ, ಈ ರಾಮ ಇಲ್ಲಿಗೆ ಬಂದು ನಾಲ್ಕೈದು ವರ್ಷಗಳಾಗಿರಬಹುದಷ್ಟೇ ಎಂದು ಸ್ಥಳೀಯರು ಹೇಳುತ್ತಾರೆ.

ಶ್ರೀಮಂತ ಭಿಕ್ಷುಕ ಬ್ಯಾಂಕಿನಲ್ಲಿ 8 ಲಕ್ಷದ 66 ಸಾವಿರ ರೂ. ನಿರಖು ಠೇವಣಿ

ರಾಮ ಎಲ್ಲರೂ ತಿಳಿದಂತೆ ಬಡ ಭಿಕ್ಷುಕನಲ್ಲ! ಇವನನ್ನು ಆಸ್ಪತ್ರೆಗೆ ಸಾಗಿಸುವಾಗ ಇವನ ಹಡಪದಲ್ಲಿ 11, 300 ರೂ. ನಗದು ಸಿಕ್ಕಿದೆ! ಮತ್ತೆ ವಿಚಾರಣೆಯಿಂದ, ಸ್ಥಳೀಯ ರಾಷ್ಟ್ರೀಕೃತ ಬ್ಯಾಂಕಿನಲ್ಲಿ 8 ಲಕ್ಷದ 66 ಸಾವಿರ ರೂ. ನಿರಖು ಠೇವಣಿ ಇರುವುದಾಗಿಯೂ ತಿಳಿದುಬಂದಿದೆ!! ಪ್ರತಿದಿನವೂ ರಾಮ ಚಿಕನ್, ಮಟನ್ ಬಿರಿಯಾನಿ ಇತ್ಯಾದಿ ಪುಷ್ಕಳ ಭೋಜನವನ್ನೇ ಮಾಡುತ್ತಿದ್ದ. ಭಿಕ್ಷುಕನಾದರೂ ಒಳ್ಳೆಯ ಲೈಫ್ ಸ್ಟೈಲ್ ಹೊಂದಿದ್ದ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳು, ಕೋಟೇಶ್ವರದ ಜನರು ಇವನಿಗೆ ಕೈತುಂಬಾ ಭಿಕ್ಷೆ, ಆಹಾರ, ವಸ್ತ್ರ ನೀಡುತ್ತಿದ್ದರು.


ಮಹಾ ನಗರ ಸಂಚಾರ

ರಾಮ ತನ್ನೂರು ಯಾವುದೆಂದು ಹೇಳದಿದ್ದರೂ ತನಗೆ ಮದುವೆಯಾಗಿರುವುದಾಗಿ ತಿಳಿಸುತ್ತಾನೆ. ಯಾವುದೋ ಕಾರಣದಿಂದ ಪತ್ನಿ ಇವನನ್ನು ತೊರೆದಳು. ಮಕ್ಕಳಿಲ್ಲವಂತೆ. ಬಹುಶಃ ಮನೆಯವರೂ ಹೊರಹಾಕಿದರು. ನಂತರ ಈತನ ಭಿಕ್ಷಾ ಪರ್ಯಟನೆ ಪ್ರಾರಂಭವಾಯಿತು. ಮುಂಬೈ, ಹೈದರಾಬಾದ್ ನಂತಹ ಮಹಾ ನಗರಗಳು, ಕುಮಟಾ, ಭಟ್ಕಳ, ಅಂಕೋಲಾ, ಕಾರವಾರ ಮೊದಲಾದ ನಗರಗಳಲ್ಲೆಲ್ಲಾ ತಾನು ಭಿಕ್ಷಾಟನೆ ಮಾಡಿರುವುದಾಗಿ ತಿಳಿಸುತ್ತಾನೆ. ಅಂತಿಮವಾಗಿ ಕೋಟೇಶ್ವರಕ್ಕೆ ಬಂದು ದೇವಾಲಯ ಜಗುಲಿಯನ್ನು ಖಾಯಂ ನಿವಾಸವಾಗಿ ಮಾಡಿಕೊಂಡ. ಹೆಜ್ಜೆಗಳ ಅಂತರದಲ್ಲೇ ಹಲವು ಕಲ್ಯಾಣ ಮಂಟಪಗಳಿರುವ ಕೋಟೇಶ್ವರದಲ್ಲಿ ಸುಗ್ರಾಸ ಭೋಜನಕ್ಕೆಂದೂ ಕೊರತೆಯಿಲ್ಲ. ಈ ಊರಿನ ಜನರ ಧಾರಾಳತನವೂ ಇದಕ್ಕೆ ಕಾರಣವಾಗಿರಬಹುದು.
ಕೈ ಕೊಟ್ಟ ಆರೋಗ್ಯ : ಹೀಗಿರುವಲ್ಲಿ ರಾಮನಿಗೆ ಮಧುಮೇಹ, ಬಿ. ಪಿ. ಇತ್ಯಾದಿಗಳು ಆಟಕಾಯಿಸಿಕೊಂಡವು. ಪರಿಣಾಮವಾಗಿ ಕಣ್ ದೃಷ್ಟಿ ಮಂದವಾಗಿ, ಕಾಲುಗಳಲ್ಲೂ ಗಾಯವಾಯಿತು. ನಡೆಯಲಾರದ ಪರಿಸ್ಥಿತಿ ಬಂದಿತು. ದೇವಸ್ಥಾನ ಸಮಿತಿಯವರು ಈತನ ರಕ್ಷಣೆ ಬಗ್ಗೆ ಮುಂದಾದರು. ವಿಚಾರಿಸಿದರೆ, ಇವನ ಕುಟುಂಬದವರು ಯಾರೂ ಪತ್ತೆಯಾಗಲಿಲ್ಲ.


ಆಪತ್ಬಂಧುವಾದ ನಾಗರಾಜನ ಸೇವೆ

ಈ ಸಂದಿಗ್ಧ ಸ್ಥಿತಿಯಲ್ಲಿ ಸಮಿತಿಯವರ ನೆರವಿಗೆ ಬಂದದ್ದೇ ಕೋಟದ ಜೀವನ್ಮಿತ್ರ ನಾಗರಾಜ. ಅನಾಥರು, ದುರ್ಬಲರು, ಮೂಕ ಜೀವಿಗಳ ಪಾಲಿನ ಪರಮಾಪ್ತ ಈ ನಾಗರಾಜ. ವಿಷಯ ತಿಳಿಯುತ್ತಲೇ ಧಾವಿಸಿ ಬಂದ ನಾಗರಾಜ, ರಾಮನಿಗೆ ಕ್ಷೌರ, ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿ, ಹೊಸ ಕಳೆಯೇರುವಂತೆ ಮಾಡಿದರು. ತನ್ನದೇ ವಾಹನದಲ್ಲಿ ಉಡುಪಿಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರು. ಇಲ್ಲಿಯೇ ಸಾಕಷ್ಟು ಮಂದಿ ಇಂತಹವರಿರುವಾಗ ದೂರದ ಊರಿಂದ ಯಾಕೆ ಅನಾಥರನ್ನು ಕರೆದುಕೊಂಡು ಬರುವಿರಿ ಎಂಬ ಅಲ್ಲಿನ ಡಾಕ್ಟರರ ಸಿಡಿಮಿಡಿಯನ್ನು ಅರಗಿಸಿಕೊಂಡು ನಾಗರಾಜರು ತಾಳ್ಮೆಯಿಂದ ರಾಮನ ಸೇವೆಗೆ ನಿಂತರು. ಪರ ದ್ರವ್ಯವನ್ನು ಮಣ್ಣಿನ ಹೆಂಟೆಯಂತೆ ಪರಿಗಣಿಸುವ ಜೀವನ್ಮಿತ್ರ ನಾಗರಾಜ ರಾಮನ ಹಡಪದಲ್ಲಿ ಸಿಕ್ಕಿದ 11, 300 ರೂ. ನಗದನ್ನು ಸೀದಾ ಕುಂದಾಪುರ ಪೊಲೀಸ್ ಠಾಣೆಗೆ ಒಪ್ಪಿಸಹೋದರು. ಪ್ರಾಮಾಣಿಕ ಅಧಿಕಾರಿ ಎಂದೇ ಜನಮನ್ನಣೆ ಗಳಿಸಿದ ಇಲ್ಲಿನ ಸಬ್ ಇನ್ಸ್ಪೆಕ್ಟರ್ ಸದಾಶಿವ ಗವರೋಜಿಯವರು, ನಾಗರಾಜನಿಗೆ ತಿಳಿಹೇಳಿ, ಈ ರೀತಿ ಹಣವನ್ನು ಠಾಣೆಯಲ್ಲಿರಿಸಿಕೊಳ್ಳಲಾಗದು. ರಾಮನ ಶುಶ್ರೂಷೆಗೆ, ಮುಂದೆ ಅವನ ಕಣ್ಣು ಆಪರೇಷನ್ ಮತ್ತು ಕನ್ನಡಕಗಳಿಗೆ, ಆಹಾರ, ಬಟ್ಟೆಗಳಿಗೆ ಆ ಹಣವನ್ನು ಬಳಸಿ ಎಂದು ಸಲಹೆ ನೀಡಿದರು. ಅಂತೂ 30 ವರ್ಷಗಳಿಂದ ದೇವಾಲಯವನ್ನೇ ಮನೆ ಮಾಡಿಕೊಂಡಿದ್ದ ರಾಮನ ಜೀವನದ ಸಂಧ್ಯಾ ಕಾಲದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಿದೆ. ಈ ಹೊಸ ಅಧ್ಯಾಯದ ಮುನ್ನುಡಿ ಬರೆವಲ್ಲಿ ಮುಖ್ಯವಾಗಿ ಜೀವನ್ಮಿತ್ರ ನಾಗರಾಜ, ಶ್ರೀ ಕೋಟಿಲಿಂಗೇಶ್ವರ ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಸದಸ್ಯ ಸುರೇಶ್ ಬೆಟ್ಟಿನ್ ಇತರರು ಪ್ರಮುಖ ಪಾತ್ರ ವಹಿಸಿದ್ದಾರೆ.

ಫೋಟೋ : ಭಿಕ್ಷುಕ ರಾಮ

ಧನುರ್ವಾಯು,ಗಂಟಲು ಮಾರಿ ತಡೆಗೆ ಲಸಿಕೆ ಪಡೆಯಿರಿ, ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ-ಡಾ.ಕೆ.ಜ್ಯೋತಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಲಸಿಕೆ ಪಡೆಯುವ ಮೂಲಕ ಧನುರ್ವಾಯು ಹಾಗೂ ಗಂಟಲು ಮಾರಿ ರೋಗಗಳಿಂದ ರಕ್ಷಣೆ ಪಡೆಯುವಂತೆ ಸಮುದಾಯ ಆರೋಗ್ಯಾಧಿಕಾರಿ ಡಾ.ಕೆ.ಜ್ಯೋತಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ತಾಲ್ಲೂಕಿನ ಅರಾಭಿಕೊತ್ತನೂರು ಆರೋಗ್ಯ ಉಪಕೇಂದ್ರದಲ್ಲಿ ಸುತ್ತಮುತ್ತಲ ಗ್ರಾಮಗಳ ಶಾಲಾ ಮಕ್ಕಳಿಗೆ ಧನುರ್ವಾಯು ಹಾಗೂ ಗಂಟಲು ಮಾರಿ ತಡೆ ಲಸಿಕೆ ನೀಡಿ ಅವರು ಮಾತನಾಡುತ್ತಿದ್ದರು.
ಕೋವಿಡ್ ಹೆಮ್ಮಾರಿಯಿಂದಾಗಿ ಇಂದು ಶಾಲೆಗಳಿಗೆ ಮಕ್ಕಳು ಬರುವಂತಿಲ್ಲ ಆದ್ದರಿಂದ ಶಿಕ್ಷಕರ ಸಹಕಾರ ಪಡೆದು ಗ್ರಾಮಗಳಲ್ಲೇ ಲಸಿಕೆ ಅಭಿಯಾನ ನಡೆಸುತ್ತಿರುವುದಾಗಿ ತಿಳಿಸಿದರು.
ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದ ಜನತೆಗೆ ಮಾರ್ಗದರ್ಶನ ನೀಡಬೇಕು, ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಪಡೆಯುವ ಮೂಲಕ ಕೋವಿಡ್ ಹೆಮ್ಮಾರಿಯ ವಿರುದ್ದ ಹೋರಾಡುವ ಶಕ್ತಿ ಪಡೆದುಕೊಳ್ಳಬೇಕು ಎಂದು ಮನವರಿಕೆ ಮಾಡಿಕೊಡಿ ಎಂದರು.
ಮಳೆಗಾಲವಾದ್ದರಿಂದ ನೀರು ಎಲ್ಲೆಂದರಲ್ಲಿ ನಿಂತು ಸಾಂಕ್ರಾಮಿಕ ರೋಗಗಳು ಆವರಿಸುವ ಭೀತಿ ಇದೆ, ಆದ್ದರಿಂದ ಸೊಳ್ಳೆಗಳ ನಿಯಂತ್ರಣಕ್ಕೆ ಜನತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿ ಹೆಚ್.ವಿ.ವಾಣಿ ಮಾತನಾಡಿ, ಆರೋಗ್ಯ ಉಪಕೇಂದ್ರದ ವ್ಯಾಪ್ತಿಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಧನುರ್ವಾಯು,ಗಂಟಲು ಮಾರಿ ತಡೆಗೆ ಪ್ರತಿವರ್ಷದಂತೆ ಈ ವರ್ಷವೂ ಲಸಿಕೆ ಅಭಿಯಾನ ನಡೆಸುತ್ತಿದ್ದೇವೆ ಎಂದರು.
16 ವಯೋಮಾನದೊಳಗಿನವರಿಗೆ ಈ ಲಸಿಕೆ ನೀಡುತ್ತಿದ್ದು, ಇದನ್ನು ಪಡೆಯಲು ನಿಮ್ಮೊಂದಿಗೆ ಈ ವಯೋಮಾನದ ಇತರರನ್ನು ಕರೆತನ್ನಿ ಎಂದು ಸೂಚಿಸಿದರು.
ಗ್ರಾಮೀಣ ಜನತೆಯಲ್ಲಿ ಕೋವಿಡ್ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದ ಅವರು, ಜನತೆ ಕೋವಿಡ್ ತಡೆಗೆ ಲಸಿಕೆ ಪಡೆಯಲು ಮುಂದೆ ಬರಬೇಕು, ಇದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ ಎಂದು ಸ್ವಷ್ಟಪಡಿಸಿದರು.
ಸ್ವಚ್ಚಪರಿಸರವಿದ್ದರೆ ಮಾತ್ರ ಉತ್ತಮ ಆರೋಗ್ಯ ಎಂಬುದನ್ನು ಅರಿತು ಮನೆ ಮುಂದಿನ ಚರಂಡಿಗಳ ಸ್ವಚ್ಚತೆಗೆ ಒತ್ತು ನೀಡಿ, ಪ್ಲಾಸ್ಟಿಕ್ ಎಲ್ಲೆಂದರಲ್ಲಿ ಬಿಸಾಡಿ ನೀರು ಹರಿದು ಹೋಗದೇ ಸೊಳ್ಳೆಗಳ ಉತ್ಪತ್ತಿಗೆ ಕಾರಣರಾಗದಿರಿ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್ ಹಾಜರಿದ್ದು, ವಿವಿಧ ಗ್ರಾಮಗಳ ಶಾಲಾ ಮಕ್ಕಳಿಗೆ ಮಾಹಿತಿ ನೀಡಿ ಕರೆಸಿ ಲಸಿಕೆ ಪಡೆಯಲು ನೆರವಾದರು.
ಶಿಕ್ಷಕರಾದ ಭವಾನಿ,ಸುಗುಣಾ, ಲೀಲಾ, ಫರೀದಾ, ವೆಂಕಟರೆಡ್ಡಿ, ಶ್ರೀನಿವಾಸಲು, ಡಿ.ಚಂದ್ರಶೇಖರ್, ಆಶಾ ಕಾರ್ಯಕರ್ತೆಯರಾದ ಅರುಣಮ್ಮ, ಚಂದ್ರಮ್ಮ, ಅಂಗನವಾಡಿ ಕಾರ್ಯಕರ್ತೆಯರಾದ ಮಂಜುಳಾ,ಗಿರಿಜಾ ಮತ್ತಿತರರಿದ್ದರು.

ಕೋವಿಡ್ ಮೂರನೇ ಆಲೆ ಪ್ರಾರಂಭವಾಗಲಿದ್ದು ಸಾರ್ವಜನಿಕರು ಕೋವಿಡ್ ನಿಯಂತ್ರಣಾದ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು :ಡಾ.ಸತ್ಯನಾರಾಯಣ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ,ಜು.5: ಕೋವಿಡ್ ಮೂರನೇ ಆಲೆ ಪ್ರಾರಂಭವಾಗಲಿದ್ದು ಸಾರ್ವಜನಿಕರು ಕೋವಿಡ್ ನಿಯಂತ್ರಣಾದ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತಾಗ ಬೇಕು. ಸಾರ್ವಜನಿಕರು ಅರೋಗ್ಯ ಸಂರಕ್ಷಣೆಯ ಕ್ರಮಗಳನ್ನು ಪಾಲಿಸುವ ಮೂಲಕ ಸಹಕಾರ ನೀಡಿದಾಗ ಮಾತ್ರ ಕೋವಿಡ್ ಮೂರನೇ ಅಲೆಯನ್ನು ನಿಯಂತ್ರಿಸಲು ಸಾಧ್ಯ ಎಂದು ಮೈಸೂರು ಮಣಿಪಾಲ್ ಆಸ್ಪತ್ರೆಯ ಶ್ವಾಸಕೋಶ ಶಾಸ್ತ್ರದ ಮುಖ್ಯಸ್ಥ ಹಾಗೂ ಸಲಹೆಗಾರರಾದ ಡಾ.ಸತ್ಯನಾರಾಯಣ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಕರ್ತರ ಸಂಘದ ಸಹಯೋಗದಲ್ಲಿ ಮಣಿಪಾಲ್ ಆಸ್ಪತ್ರೆಯ ಕೋವಿಡ್ ಮತ್ತು ಪೋಸ್ಟ್ ಕೋವಿಡ್ ನಿರ್ವಹಣೆ ಕುರಿತು ಆಯೋಜಿಸಿದ್ದ ನೇರ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸಾರ್ವಜನಿಕರು ಕೋವಿಡ್ ನಿಯಂತ್ರಣದ ಲಸಿಕೆಯನ್ನು ಪಡೆದರೂ ಸಹ ಕೊರೋನಾ ನಿಯಂತ್ರಣದ ನಿಯಮಗಳನ್ನು ನಿರ್ಲಕ್ಷಿಸಿದರೆ ಸೊಂಕು ತಗುಲುವ ಸಾಧ್ಯತೆ ಇದೆಯಾದರೂ ಜೀವಹಾನಿ ಸಂಖ್ಯೆ ತೀರಾ ಕಡಿಮೆ ಎಂದು ತಿಳಿಸಿದರು.
ಕೋವಿಡ್ ಸೊಂಕಿನಿಂದ ಚಿಕಿತ್ಸೆ ಪಡೆದು ವಾಸಿಯಾಗಿದ್ದರೂ ಸಹ ಉಸಿರಾಟದ ಸಮಸ್ಯೆಗಳು ಸೇರಿದಂತೆ, ಕೋವಿಡ್ ನಂತರದ ಗೊಂದಲಗಳಿಂದ ಬಳಲುತ್ತಿರುವುದು ಕಂಡು ಬಂದಿದೆ. ವೆಂಟಿಲೇಟರ್ ಮೂಲಕ ಚಿಕಿತ್ಸೆ ಪಡೆದ ನಂತರ ಕೆಮ್ಮು, ಶ್ವಾಸಕೋಶದಲ್ಲಿ ಊರಿ, ಅಪೌಷ್ಠಿಕತೆ ,ಮಾನಸಿಕವಾಗಿ ಖಿನ್ನತೆ ಮುಂತಾದ ಸಮಸ್ಯೆಗಳು ಅದಕ್ಕೆ ಪರಿಹಾರ ಮುನ್ನೆಚ್ಚರಿಕ ಕ್ರಮಗಳಲ್ಲಿ ಮಾಸ್ಕ್ ಬಳಕೆಗೆ ಹೆಚ್ಚು ಅದ್ಯತೆ ನೀಡ ಬೇಕೆಂದು ವಿವರಿಸಿದರು
ರೂಪಾಂತರಿ ವೈರಸ್‍ಗಳಿಂದ ನಿರೀಕ್ಷಿಸಲಾಗದಷ್ಟು ದುಷ್ಟಪರಿಣಾಮದ ಸಾಧ್ಯತೆಗಳಿದೆ. ಸೊಂಕು ತಗುಲಿದ 12 ಗಂಟೆಯ ಒಳಗೆ ವೈರಸ್‍ನ್ನು ದೇಹದಿಂದ ಹೊರಹಾಕುವಂತ ಪ್ರತಿರೋಧಕ ಶಕ್ತಿಗಳನ್ನು ವೃದ್ದಿಸಿ ಕೊಳ್ಳ ಬೇಕು. ಪ್ರಾರಂಭಿಕ ಗುಣ ಲಕ್ಷಣಗಳು ಕಾಣಿಸಿ ಕೊಂಡಾಗಲೇ ವೈದ್ಯರನ್ನು ಭೇಟಿ ಮಾಡಿ, ಹೃದಯ ಶ್ವಾಸಕೋಶಗಳ ವ್ಯಾಯಮ, ಮಾನಸಿಕ ಸಮಾಲೋಚನೆ, ಪೌಷ್ಠಿಕಾಂಶದ ಅರೈಕೆ ಸೇರಿದಂತೆ ಹಲವು ಸಲಹೆಗಳನ್ನು ಪಡೆದು ಪಾಲಿಸಿದಾಗ ಮಾತ್ರ ಶೀಘ್ರವಾಗಿ ಗುಣಮುಖರಾಗಲು ಸುಲಭವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಗಾಟಿಸಿದ ಬೆಂಗಳೂರು ಮಣಿಪಾಲ್ ಆಸ್ಪತ್ರೆಯ ತುರ್ತು ಸೇವಾ ವೈದ್ಯಕೀಯ ಚಿಕಿತ್ಸೆ ವಿಭಾಗದ ಡಾ. ಸುನಿಲ್ ಕಾರಂತ್ ಮಾತನಾಡಿ ಕೋವಿಡ್ ಮೂರನೆ ಆಲೆ ಆಘಾತಕಾರಿಯಾಗಿದೆ. ಈಗಾಗಲೇ ಮೊದಲನೆ ಮತ್ತು ಎರಡನೇ ಆಲೆಯಲ್ಲಿ ಸಾಕಷ್ಟು ಮಂದಿಯನ್ನು ಕಳೆದು ಕೊಂಡಿದ್ದೇವೆ. ಮುಂದೆ ಬರಲಿರುವ ಮೂರನೇ ಆಲೆಯ ಬಗ್ಗೆ ನಿರ್ಲಕ್ಷವಹಿಸದೆ ಸಾಕಷ್ಟು ಎಚ್ಚರಿಕೆಯನ್ನು ಪಾಲಿಸುವಂತಾಗ ಬೇಕು. ಮೂಢನಂಬಿಕೆಗಳಿಗೆ ಅವಕಾಶ ನೀಡದೆ ಪ್ರತಿಯೊಬ್ಬರೂ ವ್ಯಾಕ್ಸಿನ್ ಪಡೆದು ಕೊಂಡು ಕೋವಿಡ್ ನಿಯಂತ್ರಣದ ನಿಯಮಗಳನ್ನು ಪಾಲಿಸುವಂತಾಗ ಬೇಕೆಂದು ಹೇಳಿದರು.
ಕೋವಿಡ್ ಸೊಂಕಿನ ಚಿಕಿತ್ಸೆಯಲ್ಲಿ ಅಮ್ಲಜನಕದ ಸಹಾಯವನ್ನು ಬೇಡುವ ರೋಗಿಗಳಲ್ಲಿ ಪ್ರಾಥಮಿಕವಾಗಿ ಬಳಸಲಾಗುವುದು, ಕೋವಿಡ್ ಪ್ರಕರಣಗಳ ಉಲ್ಲಣದಿಂದಾಗಿ ಪ್ರತ್ಯೇಕವಾಗಿ ಎರಡನೇ ಅಲೆಯಲ್ಲಿ ಎಕ್ಸ್ಟ್ರಾ ಕಾಪೋರಿಯಲ್ ಪೊರೆಯ ಅಮ್ಲಜನಕ ಚಿಕಿತ್ಸೆ ಹೆಚ್ಚು ಬೇಡಿಕೆ ಇತ್ತು. ರೋಗಿಯ ಹೃದಯ ಮತ್ತು ಶ್ವಾಸಕೋಶಗಳು ಸೂಕ್ತವಾಗಿ ಪಂಪ್ ಮಾಡುವ ಕಾರ್ಯವನ್ನು ಸರಿಯಾಗಿ ನಿಭಾಯಿಸಲಾಗದಿದ್ದಲ್ಲಿ ರಕ್ತವನ್ನು ಅಮ್ಲಜನಕವಾಗಿ ಪರಿವರ್ತಿಸುವ ಮೂಲಕ ಬೇಗನೆ ಗುಣಮುಖರಾಗಲು ಅನವು ಮಾಡಿ ಕೊಡುವ ಮೂಲಕ ಶೇ 35ರಷ್ಟು ರೋಗಿಗಳನ್ನು ವೆಂಟಿಲೇಟರ್‍ಗಳಿಗೆ ಸ್ಥಳಾಂತರಿಸಿ ಶೇ 25ರಷ್ಟು ಮಂದಿಯನ್ನು ಮನೆಗೆ ವಾಪಾಸ್ ಕಳುಹಿಸಲಾಗುವುದು ಎಂದು ತಿಳಿಸಿದರು
ಎಕ್ಸ್ಟ್ರಾಕಾಪೀರಿಯಲ್ ಪೊರೆಯ ಅಮ್ಲಜನಕ ಚಿಕಿತ್ಸೆಯನ್ನು ಕೊನೆಯ ಹಂತದಲ್ಲಿ ಬಳಿಸುವ ಕ್ರಮವಾಗಿದೆ. ಇದು ಮೂಲತಃ ಜೀವವನ್ನು ಉಳಿಸುವ ಚಿಕಿತ್ಸೆಯಾಗಿದೆ.ಇದನ್ನು ಮುಂದಿನಗಳಲ್ಲಿ ಯಾವುದೇ ಪರಿಸ್ಥಿತಿಗೆ ಚಿಕಿತ್ಸೆ ನೀಡಲು ಮತ್ತು ಗುಣಪಡೆಸಲು ಬಳಿಸಲಾಗುವುದಿಲ್ಲ. ಇದು ಅನುಭವಿ ತಂಡದೊಂದಿಗೆ ಕೆಲವೇ ಆಸ್ಪತ್ರೆಗಳಲ್ಲಿ ನೀಡುವ ಚಿಕಿತ್ಸೆಯಾಗಿದೆ ಎಂದು ಸ್ವಷ್ಟ ಪಡೆಸಿದರು.
ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕತ್ಸಾಕ ಡಾ. ಜಗಧೀಶ್ ಮಾತನಾಡಿ, ಜಿಲ್ಲೆಯಲ್ಲಿ ಅಕ್ಸಿಜನ್ ಪ್ಲಾಂಟ್, ವೆಂಟಿಲೇಟರ್ ಹಾಗೂ ಬೆಡ್ ವ್ಯವಸ್ಥೆಗಳ ಬಗ್ಗೆ ಇರುವ ಸೌಲಭ್ಯಗಳನ್ನು ವಿವರಿಸಿದರು
ನಂತರ ನಡೆದ ಸಂವಾದದಲ್ಲಿ ಬ್ಲಾಕ್ ಫಾಂಗಸ್, ಕೋವಿಡ್ ರೂಪಾಂತರಿಗಳ ಕುರಿತು ವಿವರಿಸಿದ ಡಾ,ಸತ್ಯನಾರಾಯಾಣ ಅವರು ಪ್ರಾರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆದರೆ ಗುಣಪಡೆಸಲು ಸಾಧ್ಯ, ಚಿಕಿತ್ಸೆಯ ವಿಧಾನದಲ್ಲಿ ನೊರಾರು ಬಗೆಗಳಿದ್ದರೂ ಅಧಿಕೃತಾಗಿ ಇಂಗ್ಲೀಷ್ ಮೆಡಿಸನ್ ಧೃಡಪಡೆಸ ಬಹುದಾಗಿದೆ. ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೊಳ್ಳ ಬೇಕು. ಅನೇಕರಲ್ಲಿ ಸೊಂಕು ಬಂದು ಹೋಗಿರುವುದು ತಿಳಿಸುವುದೇ ಇಲ್ಲ. ಅದನ್ನು ಟೆಸ್ಟ್ ಮಾಡಿಸಿ ಕೊಂಡಾಗ ಮಾತ್ರ ಅರಿವಿಗೆ ಬರುವುದು ಎಂದು ತಿಳಿಸಿದರು.
ಪ್ರಸ್ತುತ ಎಲ್ಲಾ ವಯಸ್ಸಿನವರಿಗೂ ಕೊವೀಡ್ ಸೊಂಕು ಹಂತ, ಹಂತವಾಗಿ ಬಂದಿದ್ದು ಅಗತ್ಯವಾಗ ಚಿಕಿತ್ಸಾ ಕ್ರಮಗಳನ್ನು ಪಾಲಿಸುವ ಮೂಲಕ ಗುಣ ಪಡೆಸಬಹುದಾದರೂ ಸೊಂಕು ಉಂಟಾಗದಂತೆ ಮುಂಜಾಗೃತೆ ಕ್ರಮಗಳನ್ನು ಪಾಲಿಸುವಂತ ಅರಿವು ಎಲ್ಲರೂ ಪಾಲಿಸುವ ಮೂಲಕ ಅರೋಗ್ಯ ಸಮಾಜ ನಿರ್ಮಾಣಕ್ಕೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಜೂತೆಗೆ ಸಾರ್ವಜನಿಕರ ಸಂಘ ಸಂಸ್ಥೆಗಳ ಸಂಘಟನೆಗಳು ಮತ್ತು ಪ್ರತಿಯೊಬ್ಬರೂ ಸಹಕಾರದ ಹಸ್ತ ಚಾಚುವಂತಾಗ ಬೇಕೆಂದು ಕರೆ ನೀಡಿದರು.
ಮಣಿಪಾಲ್ ಆಸ್ಪತ್ರೆಯು ರಾಜೀವ ಗಾಂಧಿ ವಿಶ್ವವಿದ್ಯಾಲಯ ಮೂಲಕ ಹಲವಾರು ವಿಚಾರ ದಾರೆಗಳನ್ನು ಕಳೆದ ಮಾರ್ಚ ಮಾಹೆಯಿಂದಲೇ ಆರಂಭಿಸಿದ್ದು ಸಾರ್ವಜನಿಕರಲ್ಲಿ ಅರಿವುಂಟು ಮಾಡುತ್ತಿದೆ. ಬಲ್ಲಾಳ್ ಅವರು ಕಳೆದ ಜೂನ್, ಜುಲೈ ಮಾಹೇಯಲ್ಲಿ ಖಾಸಗಿ ಆಸ್ಪತ್ರೆಗಳ ಮೂಲಕ ಸರ್ಕಾರಕ್ಕೆ ನೆರವು ನೀಡಲಾಯಿತು. ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾದ ಬಹುತೇಖ ಮಂದಿ ಗುಣಮುಖರಾಗಿ ಹೊರಹೊಮ್ಮಿದ್ದಾರೆ ಎಂದು ವಿವರಿಸಿದರು.
ಇದಕ್ಕೂ ಮುನ್ನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ಸ್ವಾಗತಿಸಿ ಮಾತನಾಡುತ್ತಾ, ಮಣಿಪಾಲ್ ಆಸ್ಪತ್ರೆಗೂ ಕೋಲಾರಕ್ಕೊ ಅವಿನಭವ ಸಂಬಂಧ ಇದೆ. ಕಳೆದ ಒಂದು ವರ್ಷದಲ್ಲಿ ಇದು 5ನೇ ಕಾರ್ಯಕ್ರಮವಾಗಿದೆ. ಕೋಲಾರದ ಪತ್ರಕರ್ತರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಶೇ 20 ರಷ್ಟು ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುತ್ತಿದ್ದು, ಮುಂದಿನ ದಿನಗಳಿಗೂ ಈ ಸೌಲಭ್ಯವನ್ನು ವಿಸ್ತರಿಸುವಂತಾಗಬೇಕು. ಕೋಲಾರದಲ್ಲಿ ಮಣಿಪಾಲ್‍ನಿಂದ ಉಚಿತ ಅರೋಗ್ಯ ಶಿಬಿರಗಳನ್ನು ಮಾಡುವಂತಾಗಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಣಿಪಾಲ್ ಆಸ್ಪತ್ರೆಯ ನಿರ್ದೇಶಕ ಮುನೇಶ್ ರೈ, ಮುಖ್ಯ ಪ್ರಧಾನ ವ್ಯವಸ್ಥಾಪಕ ಮಧುಗೋಪಾಲ್, ಸಲಹೆಗಾರರಾದ ಅಬ್ದುಲ್ ಅಫೀಜ್ ಹಾಗೂ ಕೋಲಾರ ಎಸ್.ಎನ್.ಆರ್. ಆಸ್ಪತ್ರೆಯ ನಿವೃತ್ತ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಎಸ್.ಜಿ.ನಾರಾಯಣಸ್ವಾಮಿ, ಮಣಿಪಾಲ್ ಹಾಸ್ಪಿಟಲ್ ಕೋ ಆರ್ಡಿನೇಟರ್ ಸುನೀಲ್ ಕುಮಾರ್, ಶ್ರೀನಾಥ್ ಸೇರಿದಂತೆ ಎಲ್ಲಾ ಪತ್ರಕರ್ತರು ಉಪಸ್ಥಿತರಿದ್ದರು.
ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ ಚಂದ್ರಶೇಖರ್, ಖಜಾಂಚಿ ಎ.ಜಿ.ಸುರೇಶ್ ಅವರುಗಳು ಕಾರ್ಯಕ್ರಮ ನಿರೂಪಸಿ ವಂದಿಸಿದರು.

ಭಂಡಾರ್ಕಾರ್ಸ್ ಕಾಲೇಜಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ರೇಂಜರ್ ಮತ್ತು ರೋವರ್ ವಿಭಾಗದ ವಿದ್ಯಾರ್ಥಿಗಳಿಗೆ ರಾಜ್ಯ ಪುರಸ್ಕಾರ

JANANUDI.COM NETWORK

ಕುಂದಾಪುರ, ಅ.6: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ರೇಂಜರ್ ಮತ್ತು ರೋವರ್ ವಿಭಾಗದ ವಿದ್ಯಾರ್ಥಿಗಳು ರಾಜ್ಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಇದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನಪ್ರತಿಷ್ಠಿತ ಪುರಸ್ಕಾರವಾಗಿದೆ.
ಕಾಲೇಜಿನ ರೇಂಜರ್ ಮತ್ತು ರೋವರ್‍ನ ವಿದ್ಯಾರ್ಥಿಗಳಾದ ಕಾವ್ಯಾ (ತೃತೀಯ ಬಿಎಸ್ಸಿ (ಎಂಸಿಝಡ್), ಪವಿತ್ರಾ (ತೃತೀಯ ಬಿಎಸ್ಸಿ (ಎಂಸಿಝಡ್),ಸತೀಶ್(ತೃತೀಯ ಬಿಎಸ್ಸಿ (ಎಂಸಿಝಡ್), ಸ್ನೇಹಾ (ದ್ವಿತೀಯ ಬಿಎಸ್ ಸಿ, ಎಂಪಿಸಿ) ಮಹಾಲಕ್ಷ್ಮಿ (ದ್ವಿತೀಯ ಬಿಕಾಂ), ಶಮಿತಾ(ದ್ವಿತೀಯ ಬಿಎಸ್ ಸಿ, ಎಂಪಿಸಿ), ಸಿಂಚನ (ದ್ವಿತೀಯ ಬಿಎಸ್ ಸಿ, ಎಂಪಿಸಿ), ಇವರುಗಳು ರಾಜ್ಯ ಪುರಸ್ಕಾರ ಪಡೆದಿದ್ದಾರೆ.
ಇವರಿಗೆ ಕಾಲೇಜಿನ ರೇಂಜರ್ ಲೀಡರ್ ಪ್ರಭಾಶ್ರೀ ಶೆಟ್ಟಿ ಮತ್ತು ರೋವರ್ ವಿಭಾಗದ ರಿತಿನ್ ಅವರು ತರಬೇತಿ ನೀಡಿದ್ದರು. ಅವರಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಅಭಿನಂದನೆ ತಿಳಿಸಿದ್ದಾರೆ.

ಶ್ರೀನಿವಾಸಪುರ ಪುರಸಭೆ:ಪಟ್ಟಣದಲ್ಲಿ 15ನೇ ಹಣಕಾಸು ಯೋಜನೆಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಕ್ರಿಯಾ ಯೋಜನೆ ತಯಾರಿಸಲು ಅನುಮೋದನೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಇಲ್ಲಿ ಏರ್ಪಡಿಸಿದ್ದ ಪುರಸಭೆ ಸರ್ವ ಸದಸ್ಯರ ಸಾಮಾನ್ಯ ಸಭೆ ಪಟ್ಟಣದಲ್ಲಿ 15ನೇ ಹಣಕಾಸು ಯೋಜನೆಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಕ್ರಿಯಾ ಯೋಜನೆ ತಯಾರಿಸಲು ಅನುಮೋದನೆ ನೀಡಿತು.
ಸಭೆ ಪ್ರಾರಂಭವಾಗುತ್ತಿದ್ದಂತೆ 15ನೇ ಹಣಕಾಸು ಯೋಜನೆಯ ಎರಡು ವಿಭಾಗಗಳಲ್ಲಿ ಕ್ರಮವಾಗಿ ರೂ.141 ಲಕ್ಷ ಹಾಗೂ ರೂ.110 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಕ್ರಿಯಾ ಯೋಜನೆ ತಯಾರಿಸಲು ಸಭೆಯ ಸಮ್ಮತಿ ಕೇಳಲಾಯಿತು. ಈ ಬಗ್ಗೆ ಕೆಲವು ಸದಸ್ಯರು ಎತ್ತಿದ ಆಕ್ಷೇಪಣೆಗೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಉತ್ತರ ನೀಡಿದ ಬಳಿಕ ಸಭೆ ಸಮ್ಮತಿ ನೀಡಿತು.
ಪುರಸಭೆಗೆ ಸೇರಿದ 50 ಹಳೆ ಅಂಗಡಿ ಮಳಿಗೆಗಳ ಬಾಡಿಗೆ ಹೆಚ್ಚಿಸಲು, ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‍ಗಳಿಗೆ ಅವಕಾಶ ಕಲ್ಪಿಸಲು ಸಭೆ ಅನುಮೋದನೆ ನೀಡಿತು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಮಾತನಾಡಿ, ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು, ಕೋವಿಡ್ ನಿಯಮ ಪಾಲಿಸಲು ಸದಸ್ಯರು ಸಹಕಾರ ನೀಡಬೇಕು. ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಕೋರಿದರು.
ಸದಸ್ಯರಾದ ಬಿ.ವೆಂಕಟರೆಡ್ಡಿ, ಮುನಿರಾಜು ಮತ್ತಿತರರು ಸಭೆಯಲ್ಲಿ ಮಾತನಾಡಿ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು.
ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್, ಉಪಾಧ್ಯಕ್ಷೆ ಆಯಿಷಾ ನಯಾಜ್, ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಅಧಿಕಾರಿಗಳಾದ ಡಿ.ಶೇಖರ್ ರೆಡ್ಡಿ, ಪೃಥ್ವಿರಾಜ್, ನಾಗರಾಜ್, ಶಂಕರ್, ರಾಜೇಶ್ವರಿ, ನಾಗೇಶ್, ಸಂತೋಷ್ ಇದ್ದರು.

ದೇಹಾರೋಗ್ಯದಂತೆಯೇ ಆರ್ಥಿಕ ಆರೋಗ್ಯವೂ ಅವಶ್ಯ – ರವೀಂದ್ರ ಕುಲಕರ್ಣಿ :ಬ್ರಾಹ್ಮಣ ಪರಿಷತ್ ಗುಡ್ಡಟ್ಟು ವಲಯಾಧಿವೇಶನ

ಕುಂದಾಪುರ : ಪ್ರತಿಯೊಬ್ಬರಿಗೂ ದೈಹಿಕ ಆರೋಗ್ಯದಂತೆಯೇ ಜೀವನದಲ್ಲಿ ಆರ್ಥಿಕ ಆರೋಗ್ಯವೂ ಮುಖ್ಯ. ತಮ್ಮ ಆರ್ಥಿಕ ಸ್ಥಿತಿಗತಿಯ ಆರೋಗ್ಯವನ್ನು ನಿಗದಿತವಾಗಿ ಪರೀಕ್ಷಿಸುತ್ತಾ, ಅಭಿವೃದ್ಧಿಪಡಿಸಿಕೊಳ್ಳುತ್ತಿರಬೇಕು. ಆರ್ಥಿಕವಾಗಿ ಸಬಲತೆ ಹೊಂದಲು ಮ್ಯೂಚುವಲ್ ಫಂಡ್ ಗಳು ಅತ್ಯುತ್ತಮ ಮಾರ್ಗ. ಯಾಕೆಂದರೆ, ಇದರಲ್ಲಿ ಪ್ರತಿಯೊಬ್ಬರಿಗೂ ಸರಿಹೊಂದುವ ಉಳಿತಾಯ ಯೋಜನೆಗಳಿವೆ ಮತ್ತು ಮ್ಯೂಚುವಲ್ ಫಂಡ್ ಸಂಸ್ಥೆಗಳು ಲಾಭದ ಉದ್ದೇಶ ಹೊಂದಿಲ್ಲ ಎಂದು ಆರ್ಥಿಕ ತಜ್ಞ, ಯು ಟಿ ಐ ಮ್ಯೂಚುವಲ್ ಫಂಡ್ ಸಂಸ್ಥೆಯ ಮಂಗಳೂರು ವಿಭಾಗದ ಅಧಿಕಾರಿ ರವೀಂದ್ರ ಕುಲಕರ್ಣಿ ಹೇಳಿದರು.
ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ನ ಗುಡ್ಡಟ್ಟು ವಲಯದ ವಾರ್ಷಿಕ ಅಧಿವೇಶನ ಮತ್ತು ಶೈಕ್ಷಣಿಕ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಹಣ ಹೂಡಿಕೆಯ ಬಗ್ಗೆ ಮಾಹಿತಿ ನೀಡಿದರು.
ಮ್ಯೂಚುವಲ್ ಫಂಡ್ ಸಂಸ್ಥೆಗಳು ಸೆಬಿ ನಿಯಂತ್ರಣದಲ್ಲಿರುವುದರಿಂದ ಹೂಡಿಕೆಯ ಭದ್ರತೆಗೆ ಮೋಸವಿಲ್ಲ. ಇದರಲ್ಲಿ ಹೂಡಿಕೆ ಮಾಡಿ ಬ್ಯಾಂಕುಗಳಿಗಿಂತ ಹೆಚ್ಚಿನ ಲಾಭ ಗಳಿಸುವುದು ಸಾಧ್ಯ. ಹೂಡಿಕೆದಾರರಿಗೆ ಪ್ರತಿದಿನ ಅವರ ಹಣದ ಬೆಳವಣಿಗೆಯ ಸ್ಥಿತಿಗತಿ ಒದಗಿಸಲಾಗುತ್ತದೆ. ಇಲ್ಲಿ ಸಣ್ಣ ಮೊತ್ತವನ್ನು ಕೂಡಾ ಹೂಡಿಕೆ ಮಾಡಬಹುದು. ಬ್ಯಾಂಕ್ ಠೇವಣಿ ಬಡ್ಡಿ ಕಡಿಮೆ ಎಂಬ ಅಸಮಾಧಾನ, ಷೇರು ಮಾರುಕಟ್ಟೆಯ ಭಯ ಇರುವವರಿಗೆ ತಮ್ಮ ಕಷ್ಟಾರ್ಜಿತವನ್ನು ಹೂಡಿಕೆ ಮಾಡಿ ಲಾಭ ಗಳಿಸಲು ಮ್ಯೂಚುವಲ್ ಫಂಡ್ ಅತ್ಯಂತ ಒಳ್ಳೆಯ ಆಯ್ಕೆ’ ಎಂದವರು ವಿವರಿಸಿದರು.
ಸಮಾವೇಶವನ್ನು ತಾಲೂಕು ಪರಿಷತ್ ನ ನಿಕಟಪೂರ್ವ ಅಧ್ಯಕ್ಷ ಎಚ್. ರಾಘವೇಂದ್ರ ಅಡಿಗ – ಪವಿತ್ರಾ ಅಡಿಗ ದಂಪತಿ ಜಂಟಿಯಾಗಿ ಉದ್ಘಾಟಿಸಿ ಶುಭ ಕೋರಿದರು.
ಗುಡ್ಡಟ್ಟು ವಲಯಾಧ್ಯಕ್ಷ ಕೆ. ರಾಜಶೇಖರ ಉಪಾಧ್ಯಾಯ ಸಭಾಧ್ಯಕ್ಷತೆ ವಹಿಸಿದ್ದು, ಬ್ರಾಹ್ಮಣರು ಕೇವಲ ವಿದ್ಯೆ, ಜ್ಞಾನ, ಸಂಸ್ಕಾರಗಳಿಂದ ಮಾತ್ರವಲ್ಲದೆ ಆರ್ಥಿಕವಾಗಿಯೂ ಸದೃಢರಾಗಬೇಕು. ಈ ನಿಟ್ಟಿನಲ್ಲಿ ಹೂಡಿಕೆಯ ಸುರಕ್ಷಿತ ವಿಧಾನಗಳನ್ನು ಅರಿತು ಆದಷ್ಟು ಎಳವೆಯಲ್ಲೇ ಹೂಡಿಕೆ ಮಾಡಿ ಔನ್ನತ್ಯ ಹೊಂದಬೇಕು ಎಂದು ಸಲಹೆ ಮಾಡಿದರು. ಆದ್ದರಿಂದಲೇ ಸಂಸ್ಕೃತಿ – ಸಂಸ್ಕಾರಗಳನ್ನು ಪರಿಚಯಿಸುವ ಕಾರ್ಯದೊಂದಿಗೆ ವಲಯವು ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನೂ ಅಳವಡಿಸಿಕೊಂಡಿದೆ ಎಂದರು.
ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಅನಂತ ಪದ್ಮನಾಭ ಬಾಯಿರಿ,
ಗುಡ್ಡಟ್ಟು ವಲಯ ಗೌರವಾಧ್ಯಕ್ಷ ಎನ್. ಸತೀಶ್ ಅಡಿಗ, ಮಹಿಳಾ ಘಟಕದ ಅಧ್ಯಕ್ಷೆ ಅನ್ನಪೂರ್ಣ ಎಸ್. ಕೊಡ್ಲಾಯ, ಕಾರ್ಯದರ್ಶಿ ವಿನಾಯಕ ಅಡಿಗ, ಖಜಾಂಚಿ ಎನ್. ಸತೀಶ್ ಕೊಡ್ಲಾಯ, ಯುವ ವಿಪ್ರ ವೇದಿಕೆ ಅಧ್ಯಕ್ಷ ಶ್ರೀಧರ ಉಡುಪ ಮತ್ತು ಮಹಿಳಾ ಘಟಕ ಗೌರವಾಧ್ಯಕ್ಷೆ ಸಂಧ್ಯಾ ಎಸ್. ಅಡಿಗ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.
ಗುಡ್ಡಟ್ಟು ಶ್ರೀ ವಿನಾಯಕ ದೇವಾಲಯದ ಅನುವಂಶಿಕ ಆಡಳಿತ ಧರ್ಮದರ್ಶಿ ಅನಂತಪದ್ಮನಾಭ ಅಡಿಗ – ಸುಶೀಲಾ ದಂಪತಿ, ಪ್ರಗತಿಪರ ಕೃಷಿಕ ಬಿ. ಎಸ್. ಚಂದ್ರಶೇಖರ ಶಾಸ್ತ್ರಿ – ನಿರ್ಮಲಾ ದಂಪತಿ, ಹೈನುಗಾರ ಎಸ್. ರಾಮಕೃಷ್ಣ ಅಡಿಗ – ಯಶೋದಾ ದಂಪತಿ ಮತ್ತು ಹಾರ್ದಳ್ಳಿ – ಮಂಡಳ್ಳಿ ಗ್ರಾಮ ಪಂಚಾಯತ್ ಸದಸ್ಯ ಸೂರ್ಯನಾರಾಯಣ ಉಡುಪ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿನಾಯಕ ಅಡಿಗ, ಮಾಧವಿ ಅಡಿಗ, ಅಕ್ಷತಾ ಅಡಿಗ ಮತ್ತು ಸತೀಶ್ ಅಡಿಗ ಪರಿಚಯಿಸಿದರು.
ವಿನಾಯಕ ಅಡಿಗ ಮತ್ತು ಶ್ರೀಧರ ಉಡುಪ ಆರಂಭದಲ್ಲಿ ವೇದ ಘೋಷ ಮಾಡಿದರು. ಸುಶೀಲಾ ಆರ್. ಉಪಾಧ್ಯಾಯ ಮತ್ತು ಆತ್ಮಿಕಾ ಉಪಾಧ್ಯಾಯ ಪ್ರಾರ್ಥಿಸಿದರು.
ರಾಜ್ಯ ಸರ್ಕಾರದಿಂದ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಮೂಲಕ ನೀಡಲಾದ ಕೊರೊನಾ ಪರಿಹಾರದ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು. ನಮಿತಾ ಮರ್ಡಿ ಸ್ವಾಗತಿಸಿದರು. ವಲಯ ಗೌರವಾಧ್ಯಕ್ಷ ಎನ್. ಸತೀಶ್ ಅಡಿಗ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ವಿನಾಯಕ ಅಡಿಗ ವಾರ್ಷಿಕ ವರದಿ ಓದಿದರು. ಖಜಾಂಚಿ ಸತೀಶ್ ಕೊಡ್ಲಾಯ ಆಯ – ವ್ಯಯ ವರದಿ ಒಪ್ಪಿಸಿದರು.
ವಲಯದ ನೂತನ ಪದಾಧಿಕಾರಿಗಳ ಆಯ್ಕೆ ನಡೆದು, ಮುಂದಿನ ಎರಡು ವರ್ಷಗಳ ಅವಧಿಗಾಗಿ ನಾಗರಾಜ ಮಂಜ ಅಧ್ಯಕ್ಷರಾಗಿಯೂ, ಶ್ರೀಧರ ಉಡುಪ ಕಾರ್ಯದರ್ಶಿ, ಮಂಜುನಾಥ ಕಲ್ಕೂರ ಖಜಾಂಚಿ, ಮಹಿಳಾ ವೇದಿಕೆ ಅಧ್ಯಕ್ಷೆಯಾಗಿ ಇಂದಿರಾ ಉಡುಪ, ಕಾರ್ಯದರ್ಶಿಯಾಗಿ ಪ್ರತಿಮಾ ಮಿತ್ಯಂತ ಹಾಗೂ ಯುವ ವಿಪ್ರ ವೇದಿಕೆ ಅಧ್ಯಕ್ಷರಾಗಿ ರಾಜೇಂದ್ರ ಅಡಿಗರು ಸರ್ವಾನುಮತದಿಂದ ಆಯ್ಕೆಗೊಂಡರು. ನಿರ್ಗಮಿತ ಅಧ್ಯಕ್ಷ ರಾಜಶೇಖರ ಉಪಾಧ್ಯಾಯ – ಸುಶೀಲಾ ಆರ್. ಉಪಾಧ್ಯಾಯ ದಂಪತಿಯನ್ನು ಸನ್ಮಾನಿಸಲಾಯಿತು.
ಪ್ರತಿಮಾ ಅಡಿಗ ಮತ್ತು ಶೈಲಜಾ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು. ಅಶ್ವಿನಿ ಉಡುಪ ವಂದಿಸಿದರು. ನಂತರ ಹವ್ಯಾಸಿ ಕಲಾವಿದರಿಂದ “ದ್ರೌಪದಿ ಪ್ರತಾಪ” ಯಕ್ಷಗಾನ ನಡೆಯಿತು

ಪೌಷ್ಠಿಕ ಆಹಾರ ಮಕ್ಕಳಿಗೆ ಬೆಳಗಿನ ಉಪಹಾರ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ ಆಗಸ್ಟ್ 4 : ಮಕ್ಕಳು ಪೌಷ್ಠಿಕ ಆಹಾರವನ್ನು ಪ್ರತಿನಿತ್ಯ ಸೇವಿಸಬೇಕು. ಮಕ್ಕಳು ನಾಲಿಗೆಗೆ ರುಚಿ ನೀಡುವ ಅಪೌಷ್ಠಿಕ ಆಹಾರಕ್ಕೆ ಮಾರು ಹೋಗಿದ್ದಾರೆ. ಮನೆಯಲ್ಲಿ ಮಾಡುವ ಮುದ್ದೆ, ಚಪಾತಿ ಊಟ, ಸೊಪ್ಪು, ತರಕಾರಿ ಸಾರು ಸೇವನೆಯನ್ನು ಕಡಿಮೆ ಮಾಡಿದ್ದಾರೆ. ಮಕ್ಕಳ ಮನಸ್ಸನ್ನು ಅರಿತ ಎಂ.ಟಿ.ಆರ್ ರವರು ಮಕ್ಕಳಿಗಾಗಿ ಪೌಷ್ಠಿಕಾಂಶಯುಕ್ತ ಉಪ್ಪಿಟ್ಟು ಮತ್ತು ದಾಲ್ ಓಟ್ಸ್‍ಗಳನ್ನು ನೀಡುತ್ತಿರುವುದು ಸಂತೋಷದ ವಿಷಯ ಎಂದು ಮುದುವತ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಂದ್ರ ಕುಮಾರ್ ಅಭಿಪ್ರಾಯಪಟ್ಟರು.
ಕೋಲಾರ ತಾಲ್ಲೂಕು ಮುದುವತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಶೆಟ್ಟಿಕೊತ್ತನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ವಿಕಾಸ ಮತ್ತು ತೇಜಶ್ವಿನಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಎಸ್.ಜಿ.ಕೋಟೆ, ಬಂಗಾರಪೇಟೆ ಇವರ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಎಂ.ಟಿ.ಆರ್. 3 ನಿಮಿಷಗಳ ಬ್ರೇಕ್‍ಫಾಸ್ಟ್ ತರಕಾರಿ ಉಪ್ಪಿಟ್ಟು ಮತ್ತು ದಾಲ್ ಓಟ್ಸ್ ಪ್ಯಾಕೇಟ್ಸ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತೇಜಶ್ವಿನಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಬಿ.ಕೆ.ರೇಣುಕಾರವರು ಸುಮಾರು ಗ್ರಾಮೀಣಾಭಿವೃದ್ಧಿ ಕೆಲಸಗಳನ್ನು ಮಾಡುತ್ತಾ ಬಂದಿದ್ದು, ಮಹಿಳೆಯರಿಗೆ ಕೌಶಲ್ಯ ತರಬೇತಿ, ಮಕ್ಕಳಿಗೆ ಸಾಂಸ್ಕøತಿಕ ಕಲೆಗಳು, ಬೇಸಿಗೆ ಶಿಬಿರಗಳು, ಕೌಶಲ್ಯ ತರಬೇತಿ, ಮಕ್ಕಳಲ್ಲಿ ಸಾಂಸ್ಕøತಿಕ ಕಲೆಗಳು, ಬೇಸಿಗೆ ಶಿಬಿರಗಳು, ಕೌಶಲ್ಯ ತರಬೇತಿ, ಕೋವಿಡ್ -19ರ ಸಮಯದಲ್ಲಿ ಅರಿವು ಕಾರ್ಯಕ್ರಮಗಳು ವೃದ್ಧರಿಗೆ ಮತ್ತು ವಿಲಚೇತನರಿಗೆ ರೇಷನ್ ಕಿಟ್‍ಗಳನ್ನು ವಿರಣೆ, ಮಾಸ್ಕ್ ಸ್ಯಾನಿಟೈಜರ್‍ಗಳ ವಿತರಣೆ, ತಾಲ್ಲೂಕು ಜಿಲ್ಲಾ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಾಂಸ್ಕøತಿಕ ಕಾರ್ಯಕ್ರಮಗಳು – ಶಿಭಿರಗಳು ನಡೆಸುತ್ತಾ ಬಂದಿರುತ್ತಾರೆ. ಇಂತಹ ಸಂಸ್ಥೆಗೆ ಗೌರವ ಮತ್ತು ಸಹಕಾರ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಸಹ ಶಿಕ್ಷಕ ಶಿವಶಂಕರ್ ಮಾತನಾಡಿ ಎಂ.ಟಿ.ಆರ್. ಉಪ್ಪಿಟ್ಟು ಮತ್ತು ದಾಲ್ ಓಟ್ಸ್ ಪ್ರತಿ ದಿನ ಉಪಹಾರವಾಗಿ ಸೇವಿಸುವುದರಿಂದ ಮಕ್ಕಳಿಗೆ ಏನೇನು ಪೋಷಕಾಂಶಗಳು ದೊರೆಯುತ್ತವೆ ಮತ್ತು ಆ ಪೋಷಕಾಂಶಗಳಿಂದ ಮಕ್ಕಳ ಆರೋಗ್ಯ ಹೇಗೆ ವೃದ್ಧಿಸುವುದು ಎಂಬುದನ್ನು ವಿವರವಾಗಿ ತಿಳಿಸಿದರು.
ತೇಜಶ್ವಿನಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಬಿ.ಕೆ.ರೇಣುಕಾ ಮಾತನಾಡಿ ಉಪ್ಪಿಟ್ಟು ಮತ್ತು ಓಟ್ಸ್‍ಗಳನ್ನು ಉಪಹಾರದಲ್ಲಿ ಹೇಗೆ ತಯಾರಿಸಬೇಕು ಮತ್ತು ಸೇವನೆಯಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೇಗೆ ಹೆಚ್ಚುತ್ತದೆ ಎಂದು ತಿಳಿಸಿದು. ಇದೇ ಸಂದರ್ಭದಲ್ಲಿ 83 ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಉಪ್ಪಿಟ್ಟು ಮತ್ತು ದಾಲ್ ಔಟ್ಸ್ ಪಾಕೇಟ್ ವಿತರಿಸಲಾಯಿತು.
ಶಾಲೆಯ ಮುಖ್ಯೋಪಾದ್ಯಾಯರಾದ ಬಿ.ಮುನಿರತ್ನಮ್ಮ ಮಾತನಾಡಿ ಮುಂದಿನ ದಿನಗಳಲ್ಲಿ ನಮ್ಮ ಶಾಲೆಗೆ ಇನ್ನು ಹೆಚ್ಚಿನ ಸಹಾಯ ಮಾಡಬೇಕಾಗಿ ಸಂಸ್ಥೆಯಲ್ಲಿ ಹಾಗೂ ಪಂಚಾಯಿತಿ ಅಧ್ಯಕ್ಷರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಮುನಿಯಪ್ಪ, ಶಿವಶಂಕರ, ಪ್ರಮೀಳಮ್ಮ, ಸುಶೀಲಮ್ಮ, ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಾದ ಮಮತ, ರತ್ನಮ್ಮ ಹಾಗೂ ಎಆರ್‍ಎಲ್‍ಎಂ ಎಂ.ಬಿ.ಕೆ. ಆಶಾ ರವರು ಉಪಸ್ಥಿತರಿದ್ದರು.