

ದಾವಣಗೆರೆ, ನವೆಂಬರ್ 27: ಕುರುಕಲು ತಿಂಡಿ ಪ್ಯಾಕೆಟ್ನೊಳಗೆ ಉಚಿತವಾಗಿ ನೀಡಲಾಗಿದ್ದ ಸಣ್ಣ ಆಟಿಕೆಯನ್ನು ತಿಂಡಿಯ ಜೊತೆಗೆ ನುಂಗಿದ ಪರಿಣಾಮ, 4 ವರ್ಷದ ಹೆಣ್ಣು ಮಗುವೊಂದು ಉಸಿರುಗಟ್ಟಿ ಮೃತಪಟ್ಟ ಮನಕಲಕುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ನಡೆದಿದೆ.
ಚನ್ನಗಿರಿ ಪಟ್ಟಣದ ಕೌಸರ್ ಮಸೀದಿ ಏರಿಯಾ ನಿವಾಸಿಯಾದ ಅಲಿಯಾ ಶೇಕ್ (4 ವರ್ಷ, 4 ತಿಂಗಳು) ಮೃತಪಟ್ಟ ದುರ್ದೈವಿ ಮಗು.
ಘಟನೆಯ ವಿವರ:
ಮನೆಯ ಪಕ್ಕದ ಅಂಗಡಿಯಿಂದ ತಂದಿದ್ದ ಕುರುಕಲು ತಿಂಡಿಯನ್ನು ಅಲಿಯಾ ತಿನ್ನುತ್ತಿದ್ದಳು. ಈ ವೇಳೆ ಪ್ಯಾಕೆಟ್ನಲ್ಲಿದ್ದ ಸಣ್ಣ ಆಟಿಕೆಯನ್ನು ಮಗು ಆಕಸ್ಮಿಕವಾಗಿ ನುಂಗಿದೆ. ಆಟಿಕೆ ಗಂಟಲಿನಲ್ಲಿ ಸಿಲುಕಿಕೊಂಡಿದ್ದರಿಂದ ಮಗು ತಕ್ಷಣವೇ ತೀವ್ರವಾಗಿ ಅಸ್ವಸ್ಥಗೊಂಡಿದೆ.
ಗಾಬರಿಗೊಂಡ ಪೋಷಕರು ಕೂಡಲೇ ಮಗುವನ್ನು ಚನ್ನಗಿರಿಯ ತಾಲೂಕು ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮನೆಗೆ ಕರೆತಂದಿದ್ದರು. ಆದರೆ, ಮನೆಗೆ ಬಂದ ಸ್ವಲ್ಪ ಸಮಯದಲ್ಲೇ ಮಗು ಮತ್ತೆ ತೀವ್ರ ಅಸ್ವಸ್ಥಗೊಂಡು ಉಸಿರುಗಟ್ಟಿ ಕೊನೆಯುಸಿರೆಳೆದಿದೆ.
ಮುದ್ದಾದ ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮಕ್ಕಳ ತಿಂಡಿ ಪ್ಯಾಕೆಟ್ಗಳಲ್ಲಿ ಇಂತಹ ಅಪಾಯಕಾರಿ ಸಣ್ಣ ಆಟಿಕೆಗಳನ್ನು ನೀಡುವುದರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

