

‘ಕುಂದಪ್ರಭ’ ಸಂಸ್ಥೆಯ ಆಶ್ರಯದಲ್ಲಿ ನೀಡಲಾಗುತ್ತಿರುವ ಕೋ. ಮ. ಕಾರಂತ ಪ್ರಶಸ್ತಿಗೆ ಬೆಂಗಳೂರಿನ ಸರಸ್ವತೀ ಸಂಗೀತ ವಿದ್ಯಾಲಯ (ರಿ.) ಸಂಸ್ಥೆಯ ಕಾರ್ಯ ನಿರ್ದೇಶಕ, ಹಿಂದುಸ್ತಾನಿ ಶಾಸ್ತ್ರೀಯ ಮತ್ತು ಭಕ್ತಿ ಸಂಗೀತ ಗಾಯಕ, ‘ನಾದೋಪಾಸಕ’ ಪಂಡಿತ್ ವಾಗೀಶ ಭಟ್ ಕುಂದಾಪುರ ಆಯ್ಕೆಯಾಗಿದ್ದಾರೆ.
ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ತಂತ್ರಿಗಳಾಗಿರುವ ಇವರು, ವಿದ್ವತ್ ಪೂರ್ಣ ಭಕ್ತಿ ಗಾಯನದಲ್ಲಿ ಪರಿಣಿತರು. ದೇಶದ ವಿವಿಧ ಕೇಂದ್ರಗಳಲ್ಲಿ ತಮ್ಮ ಗಾಯನ ಕಾರ್ಯಕ್ರಮ ನೀಡಿರುವ ಇವರು ವಿದೇಶಗಳಲ್ಲೂ ಭಾರತೀಯ ಕಲಾ ಕೇಂದ್ರಗಳ ಆಹ್ವಾನದ ಮೇರೆಗೆ ಗಾಯನ ಕಾರ್ಯಕ್ರಮ ನೀಡಿದ್ದಾರೆ. ಇಂಗ್ಲೆಂಡಿನಲ್ಲಿ ನಡೆದ ಅಂತಾರಾಷ್ಟ್ರೀಯ ಶಾಂತಿ ಸಮ್ಮೇಳನದಲ್ಲಿ ಹಾಡಿರುವ ಇವರಿಗೆ ‘ನಾದೋಪಾಸಕ’ ಬಿರುದು ನೀಡಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಇವರ ಗಾಯನದ ಹಲವು ಧ್ವನಿ ಸುರಳಿಗಳು ಬಿಡುಗಡೆಗೊಂಡಿವೆ. ರಾಜ್ಯದ ಹಾಗೂ ದೇಶದ ಹಲವು ಸಂಸ್ಥೆಗಳಿಂದ ಇವರಿಗೆ ಪ್ರಶಸ್ತಿ ಲಭ್ಯವಾಗಿದೆ.
ರಾಷ್ಟ್ರೀಕೃತ ಬ್ಯಾಂಕ್ ಉದ್ಯೋಗಿಯಾಗಿದ್ದ ಇವರು, ಸ್ವಯಂ ನಿವೃತ್ತಿ ಹೊಂದಿ, ಸಂಗೀತದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡವರು. 1987 ರಿಂದ ಬಾವೆ ಮನೆತನದ ನಾಮಾಂಕಿತ ಸರಸ್ವತೀ ಸಂಗೀತ ವಿದ್ಯಾಲಯ (ರಿ.) ಜವಾಬ್ದಾರಿ ವಹಿಸಿಕೊಂಡು ತಮ್ಮ ಕಲಾ ಸೇವೆ ಮುಂದುವರಿಸಿದ್ದಾರೆ.
ಪಂಡಿತ್ ವಾಗೀಶ್ ಭಟ್ ಅವರು, ತಂದೆ ವೇದಮೂರ್ತಿ ಗಣಪತಿ ಶರ್ಮಾ ಅವರಿಂದ ವೇದ ಮತ್ತು ಸಂಸ್ಕøತ ಶಿಕ್ಷಣ ಪಡೆದವರು. ಸಂಗೀತದಲ್ಲಿ ಆಸಕ್ತಿ ಹೊಂದಿ ಕುಂದಾಪುರದ ಪ್ರೊಫೆಸರ್ ಗೋವರ್ಧನ ಶ್ಯಾನುಭಾಗ್ ಅವರಿಂದ ಹಾರ್ಮೋನಿಯಂ ಹಾಗೂ ಗಾಯನದಲ್ಲಿ ಶಿಕ್ಷಣ ಪಡೆದುಕೊಂಡರು. ನಂತರ ಬೆಂಗಳೂರಿನ ಉಭಯಗಾನ ವಿದುಷಿ, ಗುರು ಶ್ಯಾಮಲಾ ಜಿ. ಭಾವೆ ಅವರಲ್ಲಿ ಸಮಗ್ರ ತಾಲೀಮು ಪಡೆದುಕೊಂಡರು. ತಬಲಾ ವಾದನದಲ್ಲೂ ಪಂಡಿತ್ ಗೌರಂಗ ಕೋಡಿಕಲ್ ಹಾಗೂ ಪಂಡಿತ್ ಗುರುನಂದನ್ ಕಲ್ಯಾಣಪುರ್ ಅವರಿಂದ ತರಬೇತಿ ಪಡೆದರು. ಪ್ರತಿಭಾವಂತರಾದ ಇವರು ಸಂಸ್ಕøತ, ಕಾನೂನು, ವಾಣಿಜ್ಯ, ಬ್ಯಾಂಕಿಂಗ್ ಪರೀಕ್ಷೆಗಳಲ್ಲೂ ಸಾಧನೆ ಮಾಡಿದ ಪ್ರತಿಭಾವಂತಾಗಿದ್ದಾರೆ.

