

ಬಸ್ರೂರು ಸೈಂಟ್ ಫಿಲಿಪ್ ನೇರಿ ಚರ್ಚ್ ಶತಮಾನೋತ್ಸವ ಸಂಭ್ರಮಾಚರಣೆಗೆ ಭಾನುವಾರ ಸಂಜೆ ವಿದ್ಯುಕ್ತ ಚಾಲನೆ ನೀಡಲಾಯಿತು. ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಡಾ.ಲೆಸ್ಲಿ ಕ್ಲಿಫರ್ಡ್ ಡಿಸೋಜ ದಿವ್ಯ ಬಲಿ ಪೂಜೆ ನೆರವೇರಿಸುವ ಮೂಲಕ ಶತಮಾನೋತ್ಸವ ವರ್ಷಾಚರಣೆಗೆ ಚಾಲನೆ ನೀಡಿ ಆಶೀರ್ವದಿಸಿದರು.
ದೇವರಲ್ಲಿ ಅಪರಿಮಿತವಾದ ಭಕ್ತಿ, ವಿಶ್ವಾಸ ನಮ್ಮನ್ನು ಎತ್ತರಕ್ಕೇರಿಸುತ್ತದೆ. ಬಸ್ರೂರು ಚರ್ಚ್ ಶತಮಾನೋತ್ಸವ ಕಾಣುತ್ತಿದೆ ಎಂದಾದರೆ ಭಕ್ತಾಧಿಗಳು ದೇವರಲ್ಲಿ ಇಟ್ಟಿರುವ ವಿಶ್ವಾಸ, ನಂಬಿಕೆ, ಭಕ್ತಿ ಕಾರಣ. ಯೇಸುಕ್ರಿಸ್ತರು ಹೇಳಿದಂತೆ ದೇವರನ್ನು ಪ್ರೀತಿಸುವಂತೆ ಇತರರನ್ನು ಪ್ರೀತಿಸಿ, ತಾಯಿ ತನ್ನ ಮಗುವಿನ ಕೈ ಎಂದಿಗೂ ಬಿಡಲಾರಳು. ಅದೇ ರೀತಿ ದೇವರಲ್ಲಿ ಅಪರಿಮಿತ ವಿಶ್ವಾಸ ಹೊಂದಿದವರನ್ನು ದೇವರು ಎಂದಿಗೂ ಕೈಬಿಡುವುದಿಲ್ಲ, ಮಹಿಳೆ ಕುಟುಂಬದ ಆಸ್ತಿ. ಪ್ರತಿ ಕುಟುಂಬದಲ್ಲಿಯೂ ಮಹಿಳೆಯನ್ನು ತಾಯಿ ಸ್ಥಾನದಲ್ಲಿರಿಸಿ ಗೌರವಿಸಿ ಎಂದರು.
ಇದೇ ಸಂದರ್ಭ ಅವರು ಶತಮಾನೋತ್ಸವ ಲಾಂಛನ ಹಾಗೂ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಚರ್ಚಿನ ವತಿಯಿಂದ ಬಿಷಪ್ ಅವರನ್ನು ಸನ್ಮಾನಿಸಲಾಯಿತು.
ಚರ್ಚಿನ ಪ್ರಧಾನ ಧರ್ಮಗುರು ರೋಯ್ ಲೋಬೊ ಮಾತನಾಡಿ,ಶತಮಾನೋತ್ಸವ ಸಂಭ್ರಮಾಚರಣೆಯ ನಿಮಿತ್ತ ಕೈಗೊಂಡ ನಾನಾ ಕಾರ್ಯ ಚಟುವಟಿಕೆಯ ವಿವರ ನೀಡಿದರು.ಕುಂದಾಪುರ ವಲಯ ಪ್ರಧಾನ ಧರ್ಮಗುರು ಪೌಲ್ ರೇಗೊ, ಶಿರ್ವ ವಲಯ ಧರ್ಮಗುರು ಚಾರ್ಲ್ಸ್ ಮಿನೆಜೆಸ್, ಚರ್ಚ್ ನಿಕಟಪೂರ್ವ ಪ್ರಧಾನ ಪ್ರಧಾನ ಧರ್ಮಗುರು ಚಾರ್ಲ್ಸ್ ನೊರೊನ್ಹಾ, ಉಡುಪಿ ಮತ್ತು ಮಂಗಳೂರು ನಾನಾ ಚರ್ಚಿನ ಧರ್ಮಗುರುಗಳು, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಫಿಲಿಪ್ ಡಿಕೋಸ್ಟ ಸೈಂಟ್ ಫಿಲಿಪ್ ಸೆಂಟ್ರಲ್ ಸ್ಕೂಲ್ ಪ್ರಿನ್ಸಿಪಾಲ್ ಧರ್ಮಗುರು ಡೆನ್ಸಿ ಸುನಿಲ್ ಮಾರ್ಟಿಸ್, ಚರ್ಚ್ನ ಸಹಾಯಕ ಧರ್ಮಗುರು ಕೆನೋನ್ ಫರ್ನಾಂಡಿಸ್, ಚರ್ಚ್ ಆಡಳಿತ ಮಂಡಳಿಯ ಉಪಾಧ್ಯಕ್ಷ ರೂಪಸ್ ಬಾರೆಟ್ಟೊ, ಕಾರ್ಯದರ್ಶಿ ಫಿಯುಸ್ ಡಿಸೋಜ, ಆಯೋಗಗಳ ಸಂಚಾಲಕ ಲಾರೆನ್ಸ್ ಬಾರೆಟ್ಟೊ ಉಪಸ್ಥಿತರಿದ್ದರು.
ಕೊನೆಯಲ್ಲಿ ಆಶೀರ್ವದಿತ ಸೈಂಟ್ ಫಿಲಿಪ್ ನೇರಿ ಪ್ರತಿಮೆಗೆ ಅರ್ಚನೆ ನೆರವೇರಿಸಲಾಯಿತು.





