


ಶ್ರೀನಿವಾಸಪುರ: ಶ್ರೀನಿವಾಸಪುರ ಪಟ್ಟಣದ 21ನೇ ವಾರ್ಡ್ ವ್ಯಾಪ್ತಿಯ ಹೈದರ್ ಅಲಿ ಮೊಹಲ್ಲಾದಲ್ಲಿ ಚರಂಡಿಯಿಂದ ತೆಗೆದ ತ್ಯಾಜ್ಯವನ್ನು ನಾಲ್ಕು ದಿನಗಳು ಕಳೆದರೂ ತೆರವುಗೊಳಿಸದೆ ರಸ್ತೆಯ ಬದಿಯಲ್ಲೇ ಬಿಡಲಾಗಿದೆ. ಇದರಿಂದ ಸ್ಥಳೀಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಚರಂಡಿ ಸ್ವಚ್ಛಗೊಳಿಸಿದ ಬಳಿಕ ಹೊರತೆಗೆದ ತ್ಯಾಜ್ಯವನ್ನು ರಸ್ತೆಯ ಬದಿಯಲ್ಲಿ ಹಾಕಲಾಗಿದ್ದು, ಅದನ್ನು ಸಂಗ್ರಹಿಸಿ ವಿಲೇವಾರಿ ಮಾಡಲು ಶ್ರೀನಿವಾಸಪುರ ಪುರಸಭೆಯ ಟ್ರ್ಯಾಕ್ಟರ್ ಇನ್ನೂ ಬಂದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಇದರಿಂದ ಪ್ರದೇಶದಲ್ಲಿ ದುರ್ವಾಸನೆ ಹರಡುವುದರ ಜೊತೆಗೆ ಸೊಳ್ಳೆಗಳ ಕಾಟ ಹಾಗೂ ಆರೋಗ್ಯ ಸಮಸ್ಯೆಗಳ ಆತಂಕ ಎದುರಾಗಿದೆ.
ಸಾರ್ವಜನಿಕರು ಪ್ರತಿದಿನ ಇದೇ ರಸ್ತೆಯಲ್ಲಿ ಸಂಚರಿಸಬೇಕಾಗಿದ್ದು, ತ್ಯಾಜ್ಯದಿಂದಾಗಿ ಅನಾನುಕೂಲ ಉಂಟಾಗಿದೆ. ಚರಂಡಿ ಸ್ವಚ್ಛಗೊಳಿಸಿದ ನಂತರ ಹೊರತೆಗೆದ ತ್ಯಾಜ್ಯವನ್ನು ತಕ್ಷಣವೇ ವಿಲೇವಾರಿ ಮಾಡಬೇಕಾದರೂ ನಾಲ್ಕು ದಿನಗಳಿಂದ ತೆರವುಗೊಳಿಸದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಆಡಳಿತ ಅಧಿಕಾರಿಗಳೇ ಇತ್ತ ಗಮನಹರಿಸಿ! ಸಂಬಂಧಪಟ್ಟ ಪುರಸಭೆ ಅಧಿಕಾರಿಗಳು ಹಾಗೂ ಆರೋಗ್ಯ ವಿಭಾಗದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ರಸ್ತೆಯ ಬದಿಯಲ್ಲಿ ಬಿದ್ದಿರುವ ಚರಂಡಿ ತ್ಯಾಜ್ಯವನ್ನು ತಕ್ಷಣ ತೆರವುಗೊಳಿಸಿ, ವಾರ್ಡ್ನಲ್ಲಿ ಸ್ವಚ್ಛತೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ಆರೋಗ್ಯ ಮತ್ತು ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕೆಂದು ಹೈದರ್ ಅಲಿ ಮೊಹಲ್ಲಾದ ನಿವಾಸಿಗಳು ಒತ್ತಾಯಿಸಿದ್ದಾರೆ.


