

ಕುಂದಾಪುರ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವ ಜರುಗಿತು. ಕಾರ್ಯಕ್ರಮದ ಅಧ್ಯಕ್ಷರಾಗಿರುವ ಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಐವಿ ಇವರು ಪ್ರಾಸ್ತಾವಿಕ ಮಾತುಗಳೊಂದಿಗೆ, ಸರ್ವರನ್ನು ಸ್ವಾಗತಿಸಿದರು. ವಿದ್ಯಾರ್ಥಿಗಳು ವಾದ್ಯ ವೃಂದದೊಂದಿಗೆ ಪಥಸಂಚಲನ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ಇದರ ಅಧ್ಯಕ್ಷರಾಗಿರುವ ರೋ, ಶ್ರೀ ಸದಾನಂದ ಬಳ್ಕೂರು ಇವರು ಕ್ರೀಡಾಧ್ವಜವನ್ನು ಅರಳಿಸಿದರು. ನಂತರ ಮಾತನಾಡುತ್ತಾ ಕ್ರೀಡೆಯು ಎಲ್ಲರಿಗೂ ಸಂತೋಷವನ್ನುಂಟು ಮಾಡುವ ಒಂದು ಸಾಧನ. ಕ್ರೀಡೆಯು ಒತ್ತಡ ನಿವಾರಣೆ ಮಾಡಿ ಮನಸ್ಸಿಗೆ ನೆಮ್ಮದಿ ಹಾಗೂ ಉತ್ಸಾಹ ನೀಡುತ್ತದೆ, ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ಕನಿಷ್ಠ ಒಂದು ಗಂಟೆಯಾದರೂ ಕ್ರೀಡೆ, ವ್ಯಾಯಾಮ ಯೋಗಾಸನ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಅವಶ್ಯವಾಗಿದೆ. ಕ್ರೀಡೆಯಿಂದ ನಮ್ಮ ಮನಸ್ಸು ಸದೃಢಗೊಳ್ಳುತ್ತದೆ. ಕ್ರೀಡೆಯು ದೈಹಿಕ ಆರೋಗ್ಯ, ಮಾನಸಿಕ ನೆಮ್ಮದಿ, ಶಿಸ್ತು ಮತ್ತು ಪರಿಶ್ರಮ, ಗೆಲುವು ಸೋಲನ್ನು ಸ್ವೀಕರಿಸುವ ಗುಣವನ್ನು ಕಲಿಸಿಕೊಡುತ್ತದೆ ಎಂದರು. ರೋಟರಿ ಸದಸ್ಯರಾದ ರೋ,ಶ್ರೀ ಮಂಜುನಾಥ್ ಕೆ. ಎಸ್ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾನವನ ಜೀವನದಲ್ಲಿ ಕ್ರೀಡೆಯು ಅತ್ಯಂತ ಪ್ರಮುಖ ಸ್ಥಾನವನ್ನು ಹೊಂದಿದೆ. ಕ್ರೀಡೆಯು ಕೇವಲ ಮನೋರಂಜನೆಯ ಸಾಧನವಲ್ಲ, ಅದು ನಮ್ಮ ಸರ್ವಾಂಗೀಣ ಬೆಳವಣಿಗೆಗೆ ಮೂಲಾಧಾರವಾಗಿದೆ. ಸೋಲು ಗೆಲುವು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಆಟದಲ್ಲಿ ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೆ ಎರಡನ್ನು ಸಮನಾಗಿ ಸ್ವೀಕರಿಸಬೇಕು ಎಂದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿರುವ ಶ್ರೀ ರವಿಚಂದ್ರ ಖಾರ್ವಿ ಶುಭ ಹಾರೈಸಿದರು.ರೋಟರಿ ಸದಸ್ಯರಾದ ರೊ, ವಿನ್ಸೆಂಟ್ ಬರೆಟ್ಟೋ, ರೊ, ರೊನಾಲ್ಡ್ ಡಿ ಮೆಲ್ಲೊ, ರೊ,ಉಲ್ಲಾಸ್ ಕ್ರಾಸ್ತ, ರೊ,ವೆಸ್ಲಿ ಡಿಸೋಜ, ರೋ,ನಿತೀಶ್ ರಾವ್ ಉಪಸ್ಥಿತರಿದ್ದರು. ಶಾಲಾ ದೈಹಿಕ ಶಿಕ್ಷಕರಾದ ಮೈಕಲ್ ಸರ್ ಇವರು ಕ್ರೀಡೋತ್ಸವದ ನಡೆಸುವಲ್ಲಿ ಸಹಕರಿಸಿ, ಎಲ್ಲರಿಗೂ ವಂದಿಸಿದರು. ಶಾಲಾ ಶಿಕ್ಷಕ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.














