

ಕುಂದಾಪುರ: ಕಲಾವಿದರು ಇನ್ನಷ್ಟು ಸಾಧನೆಯನ್ನು ಮಾಡುವುದಕ್ಕೆ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ಈ ಪುರಸ್ಕಾರವನ್ನು ನೀಡಿ ಗೌರವಿಸುವುದು ಎಂದು ಸ್ವಪ್ನ ಶಿಲ್ಪಿ ಶಿಕ್ಷಣ ತಜ್ಞ ಡಾ.ಹೆಚ್.ಶಾಂತಾರಾಮ್ ಹೇಳಿದರು. ಅವರು ನವೆಂಬರ್ 1ರಂದು ಭಂಡಾರ್ಕಾರ್ಸ್ ಕಾಲೇಜಿನ ಆರ್ ಎನ್ ಶೆಟ್ಟಿ ಸಭಾಭವನದಲ್ಲಿ ನಡೆದ “51ನೇ ರಾಜ್ಯೋತ್ಸವ ತಾಳಮದ್ದಳೆ ಮತ್ತು ಡಾ.ಹೆಚ್.ಶಾಂತಾರಾಮ್ ಯಕ್ಷಗಾನ ಪುರಸ್ಕಾರ” ಕಾರ್ಯಕ್ರಮದಲ್ಲಿ ಈ ವರ್ಷದ ಡಾ.ಹೆಚ್.ಶಾಂತಾರಾಮ್ ಯಕ್ಷಗಾನ ಪುರಸ್ಕಾರ-2026 ನ್ನು ಮಹಾಬಲೇಶ್ವರ ಭಟ್ಟ ಕ್ಯಾದಗಿ ಅವರಿಗೆ ಪುರಸ್ಕರಿಸಿ ಮಾತನಾಡಿದರು.
ಪ್ರಶಸ್ತಿ ಪುರಸ್ಕಾರಗಳು ಕಲಾವಿದನಲ್ಲಿ ಕಲೆಯನ್ನು ಉಳಿಸಿ ಬೆಳೆಸುವ ಮತ್ತು ಅದನ್ನು ಮುಂದಿನ ಪೀಳಿಗೆಗೆ ಹಂಚುವ ಗುರುತರ ಜವಾಬ್ದಾರಿಯನ್ನು ಕೊಡುತ್ತದೆ. ಅಂತೆಯೇ ಶ್ರೇಷ್ಠ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಈ ಯಕ್ಷಗಾನ ಪುರಸ್ಕಾರವನ್ನು ಆರಂಭಿಸಿದ್ದೇವೆ. ಉದಯೋನ್ಮುಖ ಕಲಾವಿದರನ್ನು ಗುರುತಿಸಿ ಅವರ ಸಾಧನೆಯನ್ನು ಬೆಂಬಲಿಸಿ ಪ್ರೋತ್ಸಾಹಿಸುವ ಮೂಲಕ ಈ ಕಲೆಯನ್ನು ಬೆಳೆಸುವುದಾಗಿದೆ. ಈ ಯಕ್ಷಗಾನ ಪುರಸ್ಕಾರವನ್ನು ಪಡೆದ ಕಲಾವಿದರಿಗೂ ಸಹ ಯಕ್ಷಗಾನ ಕಲೆಯನ್ನು ಉಳಿಸುವ ಜವಾಬ್ದಾರಿ ಹೆಚ್ಚುತ್ತದೆ ಎಂದು ಹೇಳಿದರು.
ಡಾ.ಹೆಚ್.ಶಾಂತಾರಾಮ್ ಯಕ್ಷಗಾನ ಪುರಸ್ಕಾರವನ್ನು ಸ್ವೀಕರಿಸಿ ಮಾತನಾಡಿದ ಮಹಾಬಲೇಶ್ವರ ಭಟ್ಟ ಕ್ಯಾದಗಿ ಅವರು ಮನಸು ತುಂಬಿ ಬಂದಿದೆ. ಕಲಾವಿದರ ಕಲಾ ಪೋಷಣೆಗೆ ಈ ಪುರಸ್ಕಾರ ನೆರವಾಗುತ್ತದೆ. ಹಾಗೆ ಕಲೆಯನ್ನು ಬೆಳೆಸುವಲ್ಲಿನ ಜವಾಬ್ದಾರಿ ಹೆಚ್ಚಿಸಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷ ಕೆ ಶಾಂತಾರಾಮ್ ಪ್ರಭು ವಹಿಸಿದ್ದರು.
“ಯಕ್ಷರಂಗ” ಯಕ್ಷಗಾನ ಕೇಂದ್ರದ ಅಧ್ಯಕ್ಷರಾದ ಕಿಶನ್ ಹೆಗ್ಡೆ ಪಳ್ಳಿ ಅಭಿನಂದನಾ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ.ದೇವದಾಸ ಕಾಮತ್, ಆಡಳಿತ ಮಂಡಳಿಯ ಕಾರ್ಯದರ್ಶಿ ಯು ಎಸ್ ಶೆಣೈ ಉಪಸ್ಥಿತರಿದ್ದರು.
ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಸರೋಜ ಎಮ್. ವಂದಿಸಿದರು. ಆವರ್ತ ಯಕ್ಷಗಾನ ವೇದಿಕೆಯ ಸಂಯೋಜಕ ಶಶಾಂಕ್ ಪಟೇಲ್, ಕೆಳಮನೆ ಸ್ವಾಗತಿಸಿದರು. ಉಪನ್ಯಾಸಕಿ ಶೃತಿ ಕಾಶಿ ಅಭಿನಂದನಾ ಪತ್ರ ವಾಚಿಸಿದರು. ರೇಡಿಯೋ ಕುಂದಾಪ್ರ ಸಮುದಾಯ ಬಾನುಲಿ ಕೇಂದ್ರದ ಕಾರ್ಯಕ್ರಮ ಸಂಯೋಜಕಿ ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು.

