

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಸ್ನೇಹಿತನ ಮನೆಗೆ ತೆರಳಿ ಬರುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಯುವಕನೊಬ್ಬ ನಿಗೂಢವಾಗಿ ನಾಪತ್ತೆಯಾಗಿ, ಮೂರು ದಿನಗಳ ಬಳಿಕ ತೋಟವೊಂದರಲ್ಲಿ ಕುಂದಾಪುರ ತಾಲೂಕಿನ ಹೊಸಂಗಡಿ ಗ್ರಾಮದಲ್ಲಿ ಶವವಾಗಿ ಪತ್ತೆಯಾದ ಘಟನೆ ಸಂಭವಿಸಿದೆ.
ಮೃತಪಟ್ಟ ಯುವಕನನ್ನು ಹೊಸಂಗಡಿ ನಿವಾಸಿ ಕವೀನಾ ನಾಯ್ಕ (26) ಎಂದು ತಿಳಿದು ಬಂದಿದೆ. ಇತನು ಹಾಲ್ಕಲ್ ಬಳಿ ಸ್ವಂತ ಟಿಪ್ಪರ್ ಹೊಂದಿದ್ದ ಅವರು ಕಳೆದ 3–4 ವರ್ಷಗಳಿಂದ ಟಿಪ್ಪರ್ ವ್ಯವಹಾರ ನಡೆಸಿಕೊಂಡು ಬರುತ್ತಿದ್ದರು ಎನ್ನಲಾಗಿದೆ.
ಅ.2ರಂದು ‘ತಾರ್ಕಿಮಕ’ ಎಂಬಲ್ಲಿಗೆ ತೆರಳಿ ಬರುವುದಾಗಿ ಮನೆಯವರಿಗೆ ತಿಳಿಸಿ ಕವೀನಾ ನಾಯ್ಕ ಮನೆಯಿಂದ ಹೊರಟಿದ್ದರು. ಆದರೆ ಬಳಿಕ ಅವರು ಮನೆಗೆ ಮರಳಿರಲಿಲ್ಲ. ಕುಟುಂಬಸ್ಥರು ಹಾಗೂ ಪರಿಚಿತರು ಹಲವು ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ದೊರೆತಿರಲಿಲ್ಲ.
ಈ ನಡುವೆ, ಹೊಸಂಗಡಿಯ ಮಾತಿನಮಠದಲ್ಲಿ ಶೇಖರ ನಾಯ್ಕ ಎಂಬವರ ಮನೆಯ ತೋಟದ ಬಳಿ ಅ.5ರಂದು ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು, ಪರಿಶೀಲನೆ ನಡೆಸಿದಾಗ ಅದು ಕವೀನಾ ನಾಯ್ಕ ಅವರದ್ದೆಂದು ಗುರುತಿಸಲಾಗಿದೆ. ಶವವು ಅಂಗಾತ ಸ್ಥಿತಿಯಲ್ಲಿ ಬಿದ್ದಿದ್ದು, ಕೊಳೆತ ಸ್ಥಿತಿಯಲ್ಲಿತ್ತು ಎಂದು ತಿಳಿದು ಬಂದಿದೆ
ಶವ ಪತ್ತೆಯಾದ ಸ್ಥಳವು ಸಾಮಾನ್ಯವಾಗಿ ಮನೆಗೆ ತೆರಳುವ ದಾರಿಯಾಗಿರಲಿಲ್ಲ. ಅಲ್ಲದೆ, ಮೃತದೇಹದ ಕಾಲಿನಲ್ಲಿ ಚಪ್ಪಲಿ ಇರದಿರುವುದು ಸೇರಿದಂತೆ ಕೆಲವು ಅನುಮಾನಾಸ್ಪದ ಸಂಗತಿಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಕವೀನಾ ನಾಯ್ಕ ಅವರ ಸಾವಿನ ಕುರಿತು ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ
ಈ ಕುರಿತು ಮೃತರ ಸಹೋದರ ಪ್ರವೀಣ ನಾಯ್ಕ ಅವರು ಅಮಾಸೆಬೈಲು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಯುವಕನ ಸಾವಿನ ನಿಖರ ಕಾರಣ ಹಾಗೂ ಘಟನೆಗೆ ಸಂಬಂಧಿಸಿದ ಅಂಶಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

