

ಮಂಗಳೂರು ಸೆಪ್ಟೆಂಬರ್ 10: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ (DCC) ನೂತನ ಅಧ್ಯಕ್ಷರಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ, ಪ್ರಭಾವಿ ನಾಯಕ ಪದ್ಮರಾಜ್ ಆರ್. ಪೂಜಾರಿ ಅವರನ್ನು ನೇಮಕ ಮಾಡಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಬುಧವಾರ ಅಧಿಕೃತ ಆದೇಶ ಹೊರಡಿಸಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಈ ನೇಮಕಾತಿ ಆದೇಶವನ್ನು ಹೊರಡಿಸಿದ್ದು, ಪಕ್ಷದ ‘ಸಂಘಟನ್ ಸೃಜನ್ ಅಭಿಯಾನ’ದ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ನೂತನ ಸಾರಥಿಯನ್ನು ಆಯ್ಕೆ ಮಾಡಲಾಗಿದೆ.‘ಸಂಘಟನ್ ಸೃಜನ್ ಅಭಿಯಾನ’ದಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸಲು ಎಐಸಿಸಿ ವೀಕ್ಷಕರನ್ನು (AICC Observers) ನಿಯೋಜಿಸಲಾಗಿತ್ತು. ಜಿಲ್ಲೆಯಾದ್ಯಂತ ಪ್ರವಾಸ ಮಾಡಿದ್ದ ವೀಕ್ಷಕರು, ಬ್ಲಾಕ್ ಕಾಂಗ್ರೆಸ್ ಮಟ್ಟದ ಪದಾಧಿಕಾರಿಗಳು, ಶಾಸಕರು, ಮಾಜಿ ಶಾಸಕರು ಹಾಗೂ ಹಿರಿಯ ನಾಯಕರೊಂದಿಗೆ ಸುದೀರ್ಘ ಚರ್ಚೆ ನಡೆಸಿ, ಜಿಲ್ಲಾ ಸಂಘಟನೆಯ ಕುರಿತು ವರದಿಯನ್ನು ಹೈಕಮಾಂಡ್ಗೆ ಸಲ್ಲಿಸಿದ್ದರು.
ಈ ಸಮಗ್ರ ವರದಿಯ ಆಧಾರದ ಮೇಲೆ ಮತ್ತು ಹಿರಿಯ ನಾಯಕರ ಸಲಹೆಯ ಮೇರೆಗೆ ಪದ್ಮರಾಜ್ ಆರ್. ಪೂಜಾರಿ ಅವರ ಹೆಸರನ್ನು ಅಂತಿಮಗೊಳಿಸಿ ಎಐಸಿಸಿ ಅಧ್ಯಕ್ಷರು ಅನುಮೋದನೆ ನೀಡಿದ್ದಾರೆ.

