

ಕುಂದಾಪುರ: ಮಕ್ಕಳಲ್ಲಿ ವ್ಯವಹಾರ ಜ್ಞಾನ, ಸೃಜನಶೀಲತೆ, ಆತ್ಮವಿಶ್ವಾಸ ಹಾಗೂ ವ್ಯವಹಾರ ಕೌಶಲ್ಯ ಬೆಳೆಸುವ ಉದ್ದೇಶದಿಂದ ಕುಂದಾಪುರದ ಸೈಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಸಂತೆ ಗಮನ ಸೆಳೆಯಿತು.
ಶಾಲೆಯ ವಜ್ರಮಹೋತ್ಸವ ಸಮಿತಿಯ ಅಧ್ಯಕ್ಷ ಸದಾನಂದ ನಾವಡ ಅವರು ವಿದ್ಯಾರ್ಥಿ ಸಂತೆಗೆ ಚಾಲನೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕಿ ಅಸುಂತಾ ಲೋಬೋ ವಹಿಸಿದ್ದರು. ವಡೇರಹೋಬಳಿ ಕಸ್ಟರ್ ಸಿಆರ್ಪಿ ಮಂಜುನಾಥ ಪಾಳ್ ಶುಭಹಾರೈಸಿದರು.
ವಜ್ರಮಹೋತ್ಸವ ಸಮಿತಿಯ ಕೋಶಾಧಿಕಾರಿ ಆಲ್ವಿನ್ ಅಲ್ಮೇಡಾ, ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ, ವಜ್ರಮಹೋತ್ಸವ ಸಮಿತಿ ಉಪಾಧ್ಯಕ್ಷ ಲೂಯಿಸ್ ಜೆ ಫೆರ್ನಾಂಡಿಸ್, ಹಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ಹಂಸರಾಜ್ ಶೆಟ್ಟಿ, ಸೈಂಟ್ ಮೇರಿಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಂ. ಫಾ. ರೋಲ್ವಿನ್ ಫೆರ್ನಾಂಡೀಸ್, ಸೈಂಟ್ ಮೇರಿಸ್ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜ್ಯೋತಿ ಡಿಸಿಲ್ವ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕಿ ಸ್ಮಿತಾ ಡಿ ಸೋಜಾ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ವಿವಿಧ ಬಗೆಯ ಸಾಮಗ್ರಿಗಳನ್ನು ಮಾರಾಟಕ್ಕೆ ಇಟ್ಟು, ತಾವೇ ವ್ಯಾಪಾರಿಗಳಾಗಿ ಸಂತೆಯನ್ನು ನಡೆಸಿದರು. ವಿದ್ಯಾರ್ಥಿ ಪೋಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಂತೆಗೆ ಆಗಮಿಸಿ ವಿವಿಧ ಸಾಮಗ್ರಿಗಳನ್ನು ಖರೀದಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು.
ವ್ಯಾಪಾರದ ಉತ್ಸಾಹ, ಗ್ರಾಹಕರನ್ನು ಸೆಳೆಯುವ ಪ್ರಯತ್ನ, ವಸ್ತುಗಳ ಮಾರಾಟ ಹಾಗೂ ಗ್ರಾಹಕರೊಂದಿಗೆ ನಡೆಸಿದ ಸಂವಹನ ವಿದ್ಯಾರ್ಥಿಗಳಿಗೆ ಹೊಸ ಅನುಭವವನ್ನು ನೀಡಿತು. ತರಗತಿಯ ಪಾಠವನ್ನು ನೈಜ ಬದುಕಿನ ಅನುಭವದೊಂದಿಗೆ ಜೋಡಿಸಿದ ಈ ವಿದ್ಯಾರ್ಥಿ ಸಂತೆ, ಮಕ್ಕಳಿಗೆ ಕಲಿಕೆಯ ಜೊತೆಗೆ ಸಂತಸದ ಅನುಭವವನ್ನೂ ನೀಡಿತು.
ಶಿಕ್ಷಕಿಯರಾದ ಸಿಸ್ಟರ್ ಚೇತನಾ, ಪ್ರೀತಿ ಪಾಯಸ್, ಸುಶೀಲಾ ಹಾಗೂ ಡೀನಾ ಪಾಯಸ್ ಸಹಕರಿಸಿದರು.
ವಿದ್ಯಾರ್ಥಿನಿ ಅನ್ವಿತಾ ಸ್ವಾಗತಿಸಿದರು. ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಕಾರ್ತಿಕ್ ವಂದಿಸಿದರು.




