


ಶ್ರೀನಿವಾಸಪುರ, ಜು.18: ಮಾವಿನಕಾಯಿ ಬೆಂಬಲ ಬೆಲೆ (ಎಂಎಸ್ಪಿ) ಯೋಜನೆಯಡಿ ನೋಂದಣಿ (ರಿಜಿಸ್ಟ್ರೇಷನ್) ಅವಧಿಯನ್ನು ತಕ್ಷಣ ವಿಸ್ತರಿಸಿ, ಹೆಚ್ಚುವರಿ ಪ್ರಮಾಣದ ಮಾವಿನಕಾಯಿಯನ್ನು ಖರೀದಿಸಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ಕೋಲಾರ ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ರೈತರು ಶ್ರೀನಿವಾಸಪುರ ಎಪಿಎಂಸಿ ಕಚೇರಿ ಮುಂಭಾಗದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಬಳಿಕ ತಹಶೀಲ್ದಾರ್ ಜಿ.ಎನ್. ಸುಧೀಂದ್ರ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕೋಲಾರ ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಚಿನ್ನಪ್ಪರೆಡ್ಡಿ, ಜಿಲ್ಲಾಧಿಕಾರಿಗಳು, ತಾಲೂಕು ಆಡಳಿತ, ರಾಜ್ಯ ತೋಟಗಾರಿಕಾ ಇಲಾಖೆ ಹಾಗೂ ಸಹಕಾರ ಇಲಾಖೆಯ ಅಧಿಕಾರಿಗಳೊಂದಿಗೆ ನಿರಂತರವಾಗಿ ಚರ್ಚೆ ನಡೆಸಿ, ಹೆಚ್ಚುವರಿಯಾಗಿ 1 ಲಕ್ಷ ಟನ್ ಮಾವಿನಕಾಯಿಗೆ ನೋಂದಣಿ ಅವಕಾಶ ಕಲ್ಪಿಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಸರ್ಕಾರ ಪ್ರಸ್ತುತ 1.30 ಲಕ್ಷ ಟನ್ ಮಾವಿನಕಾಯಿಗೆ ಮಾತ್ರ ನೋಂದಣಿಗೆ ಅವಕಾಶ ನೀಡಿದ್ದು, ಅದು ಕೇವಲ ಮೂರು ದಿನಗಳಲ್ಲೇ ಪೂರ್ಣಗೊಂಡಿದೆ. ಇದರಿಂದ ಜಿಲ್ಲೆಯ ಸಾವಿರಾರು ರೈತರಿಗೆ ನೋಂದಣಿ ಮಾಡಲು ಅವಕಾಶ ಸಿಗದೇ ಸಂಕಷ್ಟ ಎದುರಾಗಿದೆ. ಆರಂಭದಿಂದಲೇ 5 ಲಕ್ಷ ಟನ್ ಮಾವಿನಕಾಯಿಯನ್ನು ಬೆಂಬಲ ಬೆಲೆಯಡಿ ಖರೀದಿಸಬೇಕೆಂದು ಒತ್ತಾಯಿಸಿದ್ದರೂ ಸರ್ಕಾರ ಸ್ಪಂದಿಸಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕೋಲಾರ ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಪಾತತಕೋಟ ನವೀನ್ ಕುಮಾರ್ ಮಾತನಾಡಿ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಹಾಗೂ ಸರ್ಕಾರಗಳ ವಿಳಂಬ ಧೋರಣೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರಗಳು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ವೇಳೆ ರೈತರನ್ನು ತಡೆಯಲು ಪೊಲೀಸರು ಮುನ್ನೆಚ್ಚರಿಕೆ ಬಂಧನ (ಪ್ರಿವೆಂಟಿವ್ ಅರೆಸ್ಟ್) ನಡೆಸಿರುವುದನ್ನು ಖಂಡಿಸಿದ ಅವರು, ಶಾಂತಿಯುತ ಹೋರಾಟ ನಡೆಸುವುದು ರೈತರ ಸಂವಿಧಾನಬದ್ಧ ಹಕ್ಕಾಗಿದ್ದು, ಅದನ್ನು ಹತ್ತಿಕ್ಕುವ ಪ್ರಯತ್ನ ಮಾಡಬಾರದು ಎಂದು ಒತ್ತಾಯಿಸಿದರು.
ಸರ್ಕಾರ ಕೂಡಲೇ ಸೋಮವಾರದಿಂದ ಮಾವಿನಕಾಯಿ ನೋಂದಣಿ ಪ್ರಕ್ರಿಯೆಯನ್ನು ಪುನರಾರಂಭಿಸಿ, ಹೆಚ್ಚಿನ ಪ್ರಮಾಣದ ನೋಂದಣಿಗೆ ಅವಕಾಶ ನೀಡಬೇಕು. ಇಲ್ಲವಾದರೆ ನಿರಂತರ ಹಾಗೂ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾತನಾಡಿ, ಸೋಮವಾರ ಬೆಳಿಗ್ಗೆ 9 ಗಂಟೆಗೆ ಕೋಲಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆಯಲಿರುವ ಧರಣಿಯಲ್ಲಿ ಜಿಲ್ಲೆಯ ಎಲ್ಲ ಮಾವು ಬೆಳೆಗಾರರು ಭಾಗವಹಿಸುವಂತೆ ಕರೆ ನೀಡಿದರು. ಈಗಾಗಲೇ ಎಪಿಎಂಸಿ ಟೋಕನ್ ಪಡೆದಿರುವ ಸುಮಾರು 6,000 ರೈತರು ಸೇರಿದಂತೆ ಜಿಲ್ಲೆಯ ಎಲ್ಲ ರೈತರು ಭಾಗವಹಿಸಿ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಮನವಿ ಮಾಡಿದರು.
ಇಂದು ಪ್ರತಿಭಟನೆಗೆ ಅವಕಾಶ ನೀಡದೆ ರೈತ ಮುಖಂಡರನ್ನು ಬಂಧಿಸಿರುವುದನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ ಚಿನ್ನಪ್ಪರೆಡ್ಡಿ, ಕೋಲಾರದಲ್ಲಿ ಬಂಧನಕ್ಕೊಳಗಾಗಿರುವ ರೈತ ಮುಖಂಡರನ್ನು ಕೂಡಲೇ ಬಿಡುಗಡೆ ಮಾಡಬೇಕು. ಬಿಡುಗಡೆ ಮಾಡುವವರೆಗೆ ಹೋರಾಟ ಹಿಂಪಡೆಯುವುದಿಲ್ಲ ಎಂದು ಎಚ್ಚರಿಸಿದರು.
ನಂತರ ಪೊಲೀಸ್ ಅಧಿಕಾರಿಗಳು ರೈತ ಮುಖಂಡರ ವಿರುದ್ಧ ಯಾವುದೇ ಪ್ರಕರಣ ದಾಖಲಿಸದೆ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.
ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಸಂಚಾಲಕ ಸೈಯದ್ ಫಾರೂಕ್, ಜಂಟಿ ಕಾರ್ಯದರ್ಶಿ ಮಾಸ್ತೇನಹಳ್ಳಿ ನಾರಾಯಣಸ್ವಾಮಿ, ಸದಸ್ಯರಾದ ಹೆಬ್ಬಟ ರಮೇಶ್, ನೀಲಟೂರು ಚಂದ್ರಶೇಖರ್, ಡಿ.ಎಸ್.ಆರ್. ಶ್ರೀನಾಥ್ ರೆಡ್ಡಿ, ಮಂಜುಳಮ್ಮ ಹಾಗೂ ನೂರಾರು ಮಾವು ಬೆಳೆಗಾರರು ಉಪಸ್ಥಿತರಿದ್ದರು.


